Advertisement

Advocates Protection Bill ಮಂಡಣೆಯಾಗಬೇಕಿದ್ದ ವಕೀಲರ ರಕ್ಷಣ ಕಾಯ್ದೆಗೆ ಪೊಲೀಸರ ತಗಾದೆ

12:27 AM Aug 09, 2023 | Team Udayavani |

ಬೆಂಗಳೂರು: ಬಹುಚರ್ಚಿತ ವಕೀಲರ ರಕ್ಷಣ ಕಾಯ್ದೆಗೆ ಈಗ ಪೊಲೀಸರು ತಗಾದೆ ತೆಗೆದಿದ್ದಾರೆ. ಕಾಯ್ದೆಯು ಪೊಲೀಸರ ವಿರುದ್ಧದ ಅಸ್ತ್ರವಾಗಿ ಬಳಕೆ ಆಗಬಹುದು ಎಂಬ ಗೃಹ ಇಲಾಖೆಯ ಅನುಮಾನವೇ ಈ ತಗಾದೆಗೆ ಕಾರಣ.

Advertisement

ಇದೇ ಕಾರಣಕ್ಕೆ ವಕೀಲರ ವಿರುದ್ಧ ಹಿಂಸೆ ತಡೆ ಮಸೂದೆ-2023 ಸಿದ್ಧಗೊಂಡಿದ್ದರೂ ಕಳೆದ ಅಧಿವೇಶನದಲ್ಲಿ ಮಂಡನೆಯಾಗಿಲ್ಲ. ವಕೀಲರ ರಕ್ಷಣ ಕಾಯ್ದೆ ಜಾರಿಗೆ ತರುವುದಾಗಿ ಹೊಸ ಸರಕಾರ ಭರವಸೆ ಕೊಟ್ಟಿತ್ತು. ಆದರೆ, ಈವರೆಗೆ ಅದು ಕಾರ್ಯಗತಗೊಂಡಿಲ್ಲ. ಸದ್ಯ ಈ ಮಸೂದೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಡುವೆ ಚರ್ಚೆಯ ಹಂತದಲ್ಲಿದೆ.

ವಕೀಲರ ರಕ್ಷಣ ಕಾಯ್ದೆ ಪೊಲೀಸರ ವಿರುದ್ಧ ಅಸ್ತ್ರವಾಗಬಹುದು ಅಥವಾ ದುರ್ಬಳಕೆ ಆಗುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ಇದರ ಬಗ್ಗೆ ಸ್ಪಷ್ಟನೆ ಇರಬೇಕು. ಸರಕಾರ ಮತ್ತು ವಕೀಲ ಸಮುದಾಯದಿಂದ ಅಂತಹ ಸ್ಪಷ್ಟನೆ ಸಿಕ್ಕ ಬಳಿಕವಷ್ಟೇ ಕಾಯ್ದೆಯ ವಿಚಾರದಲ್ಲಿ ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯ ಗೃಹ ಇಲಾಖೆಯಿಂದ ಬಂದಿತ್ತು. ಹಾಗಾಗಿ, ಈ ಮಸೂದೆಯನ್ನು ಕಳೆದ ಅಧಿವೇಶನದಲ್ಲಿ ಮಂಡನೆ ಮಾಡಲಿಲ್ಲ.

ವಕೀಲರು ತಮ್ಮ ವಕೀಲಿಕೆ ವೃತ್ತಿ ನಿರ್ವಹಿಸುವಾಗ ಆಗುವ ಹಿಂಸೆ, ಹಲ್ಲೆ, ಬೆದರಿಕೆ, ದೌರ್ಜನ್ಯ ತಡೆಯುವುದು ಕಾಯ್ದೆಯ ಉದ್ದೇಶ. ಇನ್ನುಳಿದಂತೆ ವಕೀಲರ ವಿರುದ್ಧ ಕೇಳಿ ಬರುವ ಇತರ ಆರೋಪಗಳು ಇಲ್ಲವೇ ವಕೀಲರಿಂದ ಆಗುವ ಸಮಸ್ಯೆಗಳ ವಿರುದ್ಧ ಈಗಿರುವ ಐಪಿಸಿ ಹಾಗೂ ಇನ್ನಿತರ ಕಾನೂನುಗಳಡಿ ಕ್ರಮ ಕೈಗೊಳ್ಳಲು ಯಾವುದೇ ಅಡ್ಡಿ ಇಲ್ಲ. ಈ ವಿಚಾರ ಕಾಯ್ದೆಯಲ್ಲೇ ಇದೆ. ಗೃಹ ಇಲಾಖೆಯ ಅನುಮಾನಗಳಿಗೆ ಕಾಯ್ದೆಯಲ್ಲೇ ಸ್ಪಷ್ಟನೆ ಇದೆ ಎಂದು ವಕೀಲ ಸಮುದಾಯ ಹೇಳುತ್ತಿದೆ.

ಇನ್ನಷ್ಟೇ ನಿರ್ಧಾರ ಆಗಬೇಕಿದೆ
ವಕೀಲರ ರಕ್ಷಣ ಕಾಯ್ದೆಗೆ ಸಂಬಂಧಿಸಿದ ವಿಧೇಯಕ ಸದನದಲ್ಲಿ ಮಂಡಿಸಲು ಮೊದಲು ಸಚಿವ ಸಂಪುಟದ ಮುಂದೆ ತರಲಾಗಿತ್ತು. ಆದರೆ, ಮಸೂದೆಯ ಬಗ್ಗೆ ಗೃಹ ಇಲಾಖೆ ಕೆಲವು ಆಕ್ಷೇಪಗಳು ಮತ್ತು ಸ್ಪಷ್ಟನೆಗಳು ಬಯಸಿದ್ದರಿಂದ ಅದನ್ನು ತಡೆ ಹಿಡಿಯಲಾಯಿತು. ಈಗ ಮಸೂದೆ ಯಥಾಸ್ಥಿತಿಯಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಗೃಹ ಸಚಿವರ ಜತೆ ಮಾತನಾಡಬೇಕಿದೆ. ಅದಾದ ಬಳಿಕವಷ್ಟೇ ಮುಂದಿನದು ನಿರ್ಧಾರವಾಗಲಿದೆ ಎಂದು ಕಾನೂನು ಇಲಾಖೆ ಮೂಲಗಳು ತಿಳಿಸಿವೆ.

Advertisement

ಕಾಯ್ದೆಯ ಉದ್ದೇಶವೇನು?
ವಕೀಲರು ತಮ್ಮ ವೃತ್ತಿ ನಿರ್ವಹಿಸುವಾಗ ಪ್ರತಿಸ್ಪರ್ಧಿ ಪಕ್ಷಗಾರರಿಂದ ದುರುದ್ದೇಶಪೂರ್ವಕ ಹಾಗೂ ಕ್ಷುಲ್ಲಕ ಕಾರಣಗಳಿಂದ ಬೆದರಿಕೆ ಎದುರಿಸಬೇ ಕಾದ ಸಂದರ್ಭಗಳು ಬರಬಹುದು. ಇದು ವಕೀಲರ ವೃತ್ತಿ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಆದ್ದರಿಂದ ಅಪರಾಧ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತಂತೆ 1990ರ ಆ. 27ರಿಂದ ಸೆ. 7ರವರೆಗೆ ಕ್ಯೂಬಾದಲ್ಲಿ ನಡೆದಿದ್ದ 8ನೇ ವಿಶ್ವಸಂಸ್ಥೆ ಸಮಾವೇಶದಲ್ಲಿ ಭಾರತ ಕೂಡ ಪಾಲ್ಗೊಂಡಿತ್ತು. ಆಗ ವಕೀಲರು ತಮ್ಮ ವೃತ್ತಿಪರ ಸೇವೆಗಳು ಮತ್ತು ಕಾರ್ಯಗಳನ್ನು ಯಾವುದೇ ಬೆದರಿಕೆ, ಅಡೆತಡೆ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪವಿಲ್ಲದೆ ನಿರ್ವಹಿಸುವ ಕುರಿತಂತೆ ಭರವಸೆ ನೀಡಿದ್ದಂತೆ ಸರಕಾರ ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. ಅಲ್ಲದೇ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ 35ನೇ ಅಧಿವೇಶನ ಕೂಡ ಸರಕಾರಗಳು ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ನಿರ್ಣಯ ಕೈಗೊಂಡಿತ್ತು. ಈ ಮಧ್ಯೆ ವಕೀಲರ ರಕ್ಷಣ ಕಾಯ್ದೆ ತರಬೇಕು ಎಂದು ವಕೀಲರ ಸಮುದಾಯದಿಂದ ಬಲವಾದ ಬೇಡಿಕೆ ಇತ್ತು. ಅದಕ್ಕಾಗಿ ಕಾಯ್ದೆ ಜಾರಿಗೆ ತರಲಾಗುತ್ತಿದೆ.

ಮಸೂದೆಯಲ್ಲಿ ಏನಿದೆ?
– ವಕೀಲರು ತಮ್ಮ ವೃತ್ತಿಯನ್ನು ಯಾವುದೇ ಬೆದರಿಕೆ, ಅಡಚಣೆ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪವಿಲ್ಲದೆ ನಿರ್ವಹಿಸುವಂತಾಗಬೇಕು.
– ವಕೀಲರು ದೇಶ-ವಿದೇಶಗಳಿಗೆ ಮುಕ್ತವಾಗಿ ಪ್ರಯಾಣಿಸುವ ಮತ್ತು ತಮ್ಮ ಕಕ್ಷಿದಾರರನ್ನು ಭೇಟಿ ಮಾಡುವ ಅವಕಾಶವಿರಬೇಕು.
– ವಕೀಲರು ಮಾನ್ಯತೆ ಪಡೆದ ವೃತ್ತಿ ಕರ್ತವ್ಯಗಳು, ಮಾನದಂಡಗಳು ಮತ್ತು ಮೌಲ್ಯಗಳ ಪ್ರಕಾರ ತೆಗೆದುಕೊಳ್ಳುವ ಕ್ರಮಗಳು ಅಭಿಯೋಜನೆ, ಆಡಳಿತಾತ್ಮಕ, ಹಣಕಾಸು ಸೇರಿದಂತೆ ಇತರೆ ಯಾವುದೇ ಮಂಜೂರಾತಿಗೆ ಒಳಪಡುವುದಿಲ್ಲ.
– ವಕೀಲರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳಿಗೆ 6 ತಿಂಗಳಿಂದ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡದ ಶಿಕ್ಷೆಯ ಅಪರಾಧಗಳಾಗಲಿವೆ.
– ಕಾಯ್ದೆಯಡಿ ಶಿಕ್ಷೆಗೊಳಪಡಿಸುವ ಪ್ರತೀ ಅಪರಾಧವೂ ಸಂಜ್ಞೆಯ (ಕಾಗ್ನಿಜಬಲ್‌) ಅಪರಾಧ ಆಗಲಿದೆ.
– ಕಾಯ್ದೆಯಡಿ ಬರುವ ಪ್ರಕರಣಗಳನ್ನು ಪ್ರಥಮ ಶ್ರೇಣಿ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ನಡೆಸಬೇಕು.

ವಕೀಲರ ರಕ್ಷಣ ಕಾಯ್ದೆಗೆ ಬಹುದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. 2022ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ದೊಡ್ಡ ಪ್ರತಿಭಟನೆ ನಡೆ ಸಲಾಗಿತ್ತು. ಹಿಂದಿನ ಸರಕಾರವೂ ಸಕಾರಾತ್ಮಕವಾಗಿತ್ತು. ಹೊಸ ಸರಕಾರ ಸಹ ಭರವಸೆ ಕೊಟ್ಟಿದೆ. ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ವಿಶ್ವಾಸವಿದೆ.
– ವಿವೇಕ್‌ ಸುಬ್ಟಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next