Advertisement

ಬಂಡಾಯದ ಬಾವುಟ

09:52 AM Mar 07, 2020 | mahesh |

“ನರಗುಂದ ಬಂಡಾಯ…’
– ಇದು 1980 ರಲ್ಲಿ ನಡೆದ ರೈತರ ನೈಜ ಘಟನೆ ಆಧರಿಸಿ ಮಾಡಿರುವ ಸಿನಿಮಾ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯಲ್ಲೇ ತಯಾರಾಗಿರುವ ಸಿನಿಮಾ. ಚಿತ್ರ ರೆಡಿಯಾಗಿದ್ದು, ಮಾ.12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಶಿವರಾಜಕುಮಾರ್‌ ಅವರು ಚಿತ್ರದ ಟ್ರೇಲರ್‌ ಹಾಗು ಆಡಿಯೋ ಬಿಡುಗಡೆ ಮಾಡಿ, “ಕಷ್ಟಪಟ್ಟವರ ಬಗ್ಗೆ ಮಾಡಿರುವ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನರಗುಂದ ರೈತರ ಬಗ್ಗೆ ಅಪ್ಪಾಜಿ ಕೂಡ ಮಾತಾಡುತ್ತಿದ್ದರು. ಈಗ ಆ ವಿಷಯ ಇಟ್ಟುಕೊಂಡೇ ಚಿತ್ರ ಮಾಡಲಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ’ ಎಂದರು ಶಿವರಾಜಕುಮಾರ್‌.

Advertisement

ನಿರ್ದೇಶಕ ನಾಗೇಂದ್ರ ಮಾಗಡಿ ಅವರಿಗೆ ರೈತರ ಕುರಿತು ಸಿನಿಮಾ ಮಾಡಬೇಕು ಅನಿಸಿದ್ದು, ನಿರ್ಮಾಪಕ ಸಿದ್ದೇಶ್‌ ಅವರ ಕಥೆ ಕೇಳಿದ ಮೇಲಂತೆ. “ಇದು ನೈಜ ಘಟನೆ ಸಿನಿಮಾ. ಆಗಿನ ಸರ್ಕಾರ ರೈತರ ಮೇಲೆ ನೀರಿನ ಕಂದಾಯ 2500 ಕಟ್ಟುವಂತೆ ಆದೇಶ ನೀಡಿತ್ತು. ಆದರೆ, ಆಗ ಒಂದು ಎಕರೆ ಹೊಲದ ಬೆಲೆ ಕೂಡ 2500 ರು. ಇತ್ತು. ಅಂತಹ ಸಂದರ್ಭದಲ್ಲಿ ರೈತರು ಕಟ್ಟುವುದು ಕಷ್ಟ ಅಂದುಕೊಂಡು ಬಸಪ್ಪ ಲಕ್ಕುಂಡಿ ಇತರರು ರೈತರನ್ನು ಸಂಘಟಿಸಿ ಹೋರಾಟಕ್ಕಿಳಿಯುತ್ತಾರೆ. ರಾಜಕಾರಣಿಗಳು ನಿರ್ಲಕ್ಷಿಸುತ್ತಾರೆ. ರೈತರು ಹೋರಾಟದಲ್ಲಿ ಸಾವಿಗೀಡಾಗುತ್ತಾರೆ. ಕೊನೆಗೆ ಏನೆಲ್ಲಾ ಆಗುತ್ತೆ ಎಂಬುದೇ ಕಥೆ. ರಕ್ಷ್ ಇಲ್ಲಿ ಯುವ ರೈತ ಮುಖಂಡರಾದರೆ, ಶುಭಾ ಪೂಂಜಾ ಅವರನ್ನು ಹುರಿದುಂಬಿಸುವ ಪಾತ್ರ ಮಾಡಿದ್ದಾರೆ. ಒಳ್ಳೆಯ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ’ ಎಲ್ಲರ ಬೆಂಬಲ ಇರಲಿ’ ಅಂದರು ನಾಗೇಂದ್ರ ಮಾಗಡಿ.

ನಿರ್ಮಾಪಕ ಸಿದ್ದೇಶ ವಿರಕ್ತಮಠ ಕಥೆ ಬರೆದಿದ್ದಾರೆ. ಅವರು ಈ ಕಥೆ ಬರೆಯೋಕೆ ಕಾರಣ, ಅವರ ಮಾವ ವಿಜಯ ಕುಲಕರ್ಣಿ ಅವರಂತೆ. ಅವರು ರೈತ ಹೋರಾಟಗಾರರು. ಹಾಗಾಗಿ, ರೈತ ಪರ ಕಥೆ ಮಾಡಿ, ಸಿನಿಮಾ ಮಾಡಿದ್ದೇವೆ. ನಿಮ್ಮ ಸಹಕಾರ ಬೇಕು’ ಎಂದರು.

ರಕ್ಷ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿರುವ ರಕ್ಷ್,”ನಾನು ಇಲ್ಲಿ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಎಂಬ ರೈತನ ಪಾತ್ರ ಮಾಡಿದ್ದೆನೆ. ರೈತರ ಸಮಸ್ಯೆಗೆ ಸ್ಪಂದಿಸುವ ಹಾಗು ರೈತ ನಾಯಕರಾಗಿರುವ ಪಾತ್ರವದು. ಮೊದಲ ಚಿತ್ರವಾದ್ದರಿಂದ ತಪ್ಪುಗಳಿದ್ದರೆ, ಪಕ್ಕಕ್ಕಿಟ್ಟು ಬೆಂಬಲಿಸಿ’ ಎಂದರು ರಕ್ಷ್.

ಶುಭಾ ಪೂಂಜಾ ಅವರಿಲ್ಲಿ ರಾಣಿ ಎಂಬ ಪಾತ್ರ ಮಾಡಿದ್ದು, ನಾಯಕನ ಹೋರಾಟಕ್ಕೆ ಸಹಕಾರಿಯಾಗಿ ನಿಲ್ಲುವ ಪಾತ್ರ ಮಾಡಿದ್ದಾರಂತೆ. ಅವರಿಲ್ಲಿ ಉತ್ತರ ಭಾಗದ ಹುಡುಗಿಯಾಗಿ, ಖಡಕ್‌ ಡೈಲಾಗ್‌ನೊಂದಿಗೆ ಗಮನಸೆಳೆಯುವುದಾಗಿ ಹೇಳಿಕೊಂಡರು. ನೀನಾಸಂ ಅಶ್ವತ್ಥ್ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ ಬಗ್ಗೆ ಹೇಳಿಕೊಂಡರು. ಭವ್ಯಾ ಕೂಡ ಇಲ್ಲಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರಂತೆ. ಕೇಶವಾದಿತ್ಯ ಸಂಭಾಷಣೆ ಹಾಗು ಒಂದು ಹಾಡು ಬರೆದಿದ್ದಾರೆ. ಯಶೋವರ್ಧನ್‌ ಸಂಗೀತವಿದೆ. ಶೇಖರ್‌ ಯಲುವಿಗಿ ಅವರು ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next