ಹುಣಸೂರು: ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ವೃತ್ತಗಳಲ್ಲಿ ಮೈಮ್ ಪ್ರದರ್ಶನದ ಮೂಲಕ ಮನವರಿಕೆ ಮಾಡಿಕೊಟ್ಟರು.
ನಗರಸಭೆಯ ಪರಿಸರ ವಿಭಾಗದ ವತಿಯಿಂದ ವಿಶ್ವಸಂಸ್ಥೆಯ ಪರಿಸರ ವಿಭಾಗ ಘೋಷಿಸಿರುವ ಬೀಟ್ ಪ್ಲಾಸ್ಟಿಕ್ ಪಲ್ಯೂಷನ್ ಕಾರ್ಯಕ್ರಮದಡಿ ಹುಣಸೂರು ಸಂತ ಜೋಸೆಫರ ಪ್ರೌಢಶಾಲೆಯ ದಿ ಗ್ರೀನ್ ಪರ್ಲ್ ಇಕೋ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣ, ಎಚ್.ಡಿ.ಕೋಟೆ ವೃತ್ತ ಸೇರಿದಂತೆ ವಿವಿಧೆಡೆ ನೀಡಿದ ಮೈಮ್ ಪ್ರದರ್ಶನದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಭೂಮಿ, ಸಮುದ್ರ, ನದಿಗಳ ಜಲಚರಗಳು ಸಾವನ್ನಪ್ಪುತ್ತಿರುವ ಹಾಗೂ ಪರಿಸರದ ಮೇಲಾಗುತ್ತಿರುವ ಅವಘಡಗಳ ಬಗ್ಗೆ ಮೂಕಾಭಿನಯದಲ್ಲೇ ಸಾರ್ವಜನಿಕರಿಗೆ ಪ್ಲಾಸ್ಟಿಕ್‌ನಿಂದ ದೂರವಿರುವಂತೆ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಪ್ಲಾಸ್ಟಿಕ್ ಬಳಕೆ-ಪ್ರಾಣಕ್ಕೆ ಕುಣಿಕೆ, ಪ್ಲಾಸ್ಟಿಕ್ ಬಳಕೆ-ಪ್ರಾಣಿಗಳ ಅಗಲಿಕೆ, ಅತಿಯಾದ ಪ್ಲಾಸ್ಟಿಕ್ ಬಳಕೆ-ಕ್ಯಾನ್ಸರ್‌ಗೆ ಕಾಣಿಕೆ, ನೀರು ಉಳಿಸಿದರೆ-ಭವಿಷ್ಯವನ್ನು ಉಳಿಸಿದಂತೆ, ಪ್ಲಾಸ್ಟಿಕ್ ಲೋಟ, ನೀರಿನ ಬಾಟಲ್ ಬಳಸದಿರಿ, ಹೀಗೆ ಅನೇಕ ಘೋಷಣೆಗಳುಳ್ಳ ಫಲಕ ಹಿಡಿದು ಗಮನ ಸೆಳೆದರು. ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತ ಕುರಿತು ಹಿಂದಿ ಹಾಡು ಹಾಡಿದರು.
ಪೇಪರ್ ಕವರ್ ವಿತರಣೆ: ವಿದ್ಯಾರ್ಥಿಗಳು ನಗರದಲ್ಲಿ ಜಾಥಾ ನಡೆಸಿದರಲ್ಲದೆ, ಹಣ್ಣು, ಔಷಧದ ಅಂಗಡಿ ಹಾಗೂ ಬೀದಿ ಬದಿಯ ವ್ಯಾಪಾರಸ್ಥರಿಗೆ ತಾವೇ ತಯಾರಿಸಿದ ಪೇಪರ್ ಕವರ್‌ಗಳನ್ನು ವಿತರಿಸುವ ಮೂಲಕ ಪ್ಲಾಸ್ಟಿಕ್ ಕವರ್ ಬಳಸದಿರಿ ಎಂದು ಸಂದೇಶ ನೀಡಿದರು.
ಪ್ಲಾಸ್ಟಿಕ್ ಬಳಸಿದರೆ ಕ್ರಮ: ನಗರಸಭೆಯ ಪರಿಸರ ಎಂಜಿನಿಯರ್ ರವಿಕುಮಾರ್ ಮಾತನಾಡಿ, ವಿಶ್ವ ಸಂಸ್ಥೆ ಈ ಬಾರಿ ಭಾರತಕ್ಕೆ ಪರಿಸರ ದಿನಾಚರಣೆಯ ಪ್ರಾಯೋಜಕತ್ವ ವಹಿಸಿದ್ದು, ಭಾರತ ಸರ್ಕಾರದ ಸೂಚನೆ ಮೇರೆಗೆ ಜೂನ್ ಅಂತ್ಯದವರೆಗೆ ಪರಿಸರ ಸಂಬಂಧಿ ಕಾರ್ಯಕ್ರಮಗಳು ನಡೆಸುತ್ತಿದ್ದೇವೆ, ಪ್ರತಿಯೊಬ್ಬ ಅಂಗಡಿ-ಹೋಟೆಲ್‌ಗಳವರು ಪ್ಲಾಸ್ಟಿಕ್ ಬಳಸದೆ ಬಟ್ಟೆ ಬ್ಯಾಗ್‌ಗಳನ್ನು ಮಾತ್ರ ಬಳಸಬೇಕು.
ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ಆರು ತಿಂಗಳ ಸಜೆ, 10 ಲಕ್ಷ ರೂ.ಗವರೆಗೆ ದಂಡ ವಿಧಿಸುವ ಕಾಯ್ದೆ ಇದೆ ಎಂದು ಎಚ್ಚರಿಸಿದರು. ಈ ವೇಳೆ ಶಾಲೆಯ ಎಕೋ ಕ್ಲಬ್‌ನ ಸಂಚಾಲಕಿ ಅನಿತಾ, ಆರೋಗ್ಯ ನಿರೀಕ್ಷಕ ಮೋಹನ್, ಸಂಪನ್ಮೂಲ ವ್ಯಕ್ತಿ ಜಗದೀಶ್ ಹಾಜರಿದ್ದರು.