ಶಿಡ್ಲಘಟ್ಟ: ರೇಷ್ಮೆ ನಗರದ ಸರ್ಕಾರಿ ಮತ್ತು ಖಾಸಗಿ ಶಾಲೆಯ ಸುತ್ತಮುತ್ತ ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ಗುಲಾಬಿ ಹೂ ನೀಡುವ ಮೂಲಕ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಗುಲಾಬಿ ಆಂದೋಲನ ಆರಂಭಿಸಿದರು.
ಅಂಗಡಿ ಮಾಲೀಕರಿಗೆ, ಗ್ರಾಹಕರಿಗೆ ಗುಲಾಬಿ ಹೂವು ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ವಿಭಿನ್ನವಾಗಿ ಮನವಿ ಮಾಡಿ ಕೊಂಡಿದ್ದಲ್ಲದೆ, ತಂಬಾಕು ಸೇವನೆ ಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ತಾಲೂಕು ಆಡಳಿತ, ತಾಪಂ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ವಿಶೇಷ ಗುಲಾಬಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಶಾಲಾ-ಕಾಲೇಜಿನ 100 ಮೀಟರ್ ಸುತ್ತಮುತ್ತ ಸಿಗರೆಟ್, ಗುಟ್ಕಾದಂಥ ತಂಬಾಕು ಉತ್ಪನಗಳ ಮಾರಾಟ ಮತ್ತು ಸೇವನೆ ಮಾಡಬೇಡಿ ಎಂದು ಪ್ರೀತಿ ಪೂರ್ವಕವಾಗಿ ಮನವಿ ಮಾಡಿಕೊಂಡರು.
ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಮಾತನಾಡಿ, ಬಹಳ ಹಿಂದಿನಿಂದ ನಮ್ಮಲ್ಲಿ ತಂಬಾಕು ಬಳಕೆಯಲ್ಲಿದೆ ದುರಾದೃಷ್ಟವೆಂದರೆ ಇತ್ತೀಚೆಗೆ 15 ರಿಂದ 20 ವರ್ಷದೊಳ ಗಿನ ಯುವಜನತೆ ಈ ತಂಬಾಕಿನ ವಿವಿಧ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಪರಿಣಾಮಗಳ ಕುರಿತು ಅರಿಯುವುದರಿಂದ ಇದರಿಂದ ದೂರ ಉಳಿಯಬಹುದು. ಮಕ್ಕಳು ತಮ್ಮ ಮನೆ ಹಾಗೂ ಸುತ್ತಮುತ್ತ ಈ ವ್ಯಸನಕ್ಕೆ ತುತ್ತಾದವರಿಗೆ ಅರಿವು ಮೂಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿ ವಾಸ್ ಮಾತನಾಡಿ, ತಂಬಾಕು ಸೇವೆನೆ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಕೂಡಾ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣ ಹಾಳು ಮಾಡಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸರಕಾರದ ಆದೇಶವಿದ್ದರೂ ಕೂಡಾ ಯಾವುದೇ
ಭಯವಿಲ್ಲದೆ ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗುಲಾಬಿ ಆಂದೋಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ ಹಾಗೂ ನಗರ್ತರಪೇಟೆ ಮುಂತಾದೆಡೆ ಮೆರವಣಿಗೆ ನಡೆಸಿ, ತಂಬಾಕು ಸೇವನೆಯಿಂದಾಗುವತೊಂದರೆಗಳ ಬಗ್ಗೆ ಅರಿವು ಮೂಡಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾಲೂಕು ಆರೋಗ್ಯ ನಿರೀಕ್ಷಕ ಲೋಕೇಶ್, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಸಿಆರ್‌ಪಿ ಪ್ರಕಾಶ್, ಮುಖ್ಯಶಿಕ್ಷಕಿ ನಾಗಮಣಿ, ಶಿಕ್ಷಕ ವೆಂಕಟೇಶ್ ಇದ್ದರು.