ಲೋಕ ಸುತ್ತುತ್ತಾ, ಅಲ್ಲಿನ ಚಿತ್ರಾವಳಿಗಳನ್ನು ಸೆರೆಹಿಡಿಯುತ್ತಾ, ಬ್ಲಾಗ್‌ನಲ್ಲಿ ತನ್ನ ಅನುಭವವನ್ನು ಗೀಚುತ್ತಾ, ಮುನ್ನಡೆಯುತ್ತಿದ್ದ ಈ ಹುಡುಗನಿಗೆ ಇದ್ದಕ್ಕಿದ್ದಂತೆ ಅಪ್ಪನೇಕೋ ಕಾಡಿಬಿಟ್ಟ. ಹಲವು ವರುಷಗಳ ಹಿಂದೆ ಅಪ್ಪ ಸೈನಿಕನಾಗಿ ಓಡಾಡಿದ ಜಾಗಕ್ಕೆ ಹೋಗಿ, ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಳ್ಳುವ ಕನಸು ಹುಟ್ಟಿತು. ಅಲ್ಲಿನ ಸಾಹಸ ಚಿತ್ರಗಳನ್ನು ಸೆರೆಹಿಡಿದು, “ಆರ್ಟ್ ಲೀವ್ಸ್ ಎ ಮಾರ್ಕ್’ ಎಂಬ ಸರಣಿಯ ಮೂಲಕ ಹುತಾತ್ಮ ತಂದೆಗೆ ಸಮರ್ಪಿಸಿದ…
ಹಿಮದ ನೆಲದ ಮೇಲೆ ನಿಂತಿದ್ದರೂ, ಅವನ ಪಾದ ಬಿಸಿಯೇರಿತ್ತು. ಕಾಶ್ಮೀರ… ಇದೇ ಸ್ವರ್ಗದಲ್ಲೇ ಅಲ್ಲವೇ ಅಪ್ಪ ಹುತಾತ್ಮನಾದುದ್ದು. ಆ ಯುವಕ ಪಾದ ಊರಿದಲ್ಲೆಲ್ಲ ತಂದೆಯ ನೆನಪುಗಳದ್ದೇ ಸಪ್ಪಳ. ಅವೆಲ್ಲವೂ ಅಪ್ಪ ಓಡಾಡಿದ್ದಂಥ ಜಾಗ. ಹದಿನೇಳು ವರುಷದ ನಂತರ ಅದೇ ಜಾಗಕ್ಕೆ ಮಗ ಮರುಭೇಟಿ ನೀಡಿದ್ದ. ಎಲ್ಲಿ ನೋಡಿದರೂ ಅಪ್ಪನ ಚಿತ್ರಗಳು… ಇನ್ನೂ ಅಳಿಸಿಯೇ ಹೋಗಿಲ್ಲ ಎನ್ನುವ ವಿಸ್ಮಯ… ಹೆಲಿಕಾಪ್ಟರ್‌ನಿಂದ ಕಣಿವೆಯ ನೆತ್ತಿಯ ಮೇಲೆ ಹಗ್ಗ ಇಳಿಬಿಟ್ಟು ಸರ್ರಕ್ಕನೆ ಇಳಿದಂತೆ, ಮಂಜು ಆವರಿಸಿದ ದಟ್ಟಾರಣ್ಯದ ಆಚೆಯೆಲ್ಲೋ ಜಿಗ್ಗನೆ ಜಿಗಿದಂತೆ, ಮರುಭೂಮಿಯ ಅಂಚಿನಲ್ಲಿ ಮರಳ ಧೂಳ ನಡುವೆಯೂ ಅಪ್ಪನೇ ಇಣುಕಿ ನೋಡುತ್ತಿದ್ದ! ಭಾರತೀಯ ವಾಯುಸೇನೆಯ ವೀರಯೋಧನಾಗಿದ್ದ ಅಪ್ಪನನ್ನು ಕಳಕೊಂಡರೂ, ಅವರಂತೆಯೇ ಗನ್ ಹಿಡಿದು ದೇಹವನ್ನೇ ಕಣ್ಣಾಗಿಸಿಕೊಂಡಿದ್ದ ಯೋಧರನ್ನು ತಂದೆಯ ಜಾಗದಲ್ಲೇ ಕಲ್ಪಿಸಿಕೊಂಡ.
ಹಾಗೆ ಸೈನಿಕರ ತಾಣಗಳಿಗೆ ಹೋದ ಹುಡುಗ ಅರ್ಜುನ್ ಮೆನನ್! ಅವನ ಕೈಯಲ್ಲೇನೂ ಗನ್ ಇದ್ದಿರಲಿಲ್ಲ; ಕ್ಯಾಮೆರಾ ಇತ್ತು. ಟ್ರಾವೆಲ್ ಫೋಟೋಗ್ರಾಫರ್ ಆತ. ಲೋಕ ಸುತ್ತುತ್ತಾ, ಅಲ್ಲಿನ ಚಿತ್ರಾವಳಿಗಳನ್ನು ಸೆರೆಹಿಡಿಯುತ್ತಾ, ಬ್ಲಾಗ್‌ನಲ್ಲಿ ತನ್ನ ಅನುಭವವನ್ನು ಗೀಚುತ್ತಾ, ಮುನ್ನಡೆಯುತ್ತಿದ್ದ ಈ ಹುಡುಗನಿಗೆ ಇದ್ದಕ್ಕಿದ್ದಂತೆ ಅಪ್ಪನೇಕೋ ಕಾಡಿಬಿಟ್ಟ. ಹಲವು ವರುಷಗಳ ಹಿಂದೆ ಅಪ್ಪ ಓಡಾಡಿದ ಜಾಗಕ್ಕೆ ಹೋಗಿ, ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಳ್ಳುವ ಕನಸು ಹುಟ್ಟಿತು. ದೇಶಕ್ಕೆ ಸೇವೆ ಸಲ್ಲಿಸುತ್ತಲೇ ಹುತಾತ್ಮನಾದ ತನ್ನ ತಂದೆಗೆ, ಸೈನಿಕರ ಸಾಹಸ ಚಿತ್ರಗಳನ್ನು ಸೆರೆಹಿಡಿದು ಗೌರವ ಸಮರ್ಪಿಸಲು ನಿರ್ಧರಿಸಿಬಿಟ್ಟ.
ಭಾರತೀಯ ಸೈನಿಕರು ರಿಸ್ಕಿ ಪ್ರದೇಶಗಳಲ್ಲಿ ಹೇಗೆಲ್ಲ ಸಾಹಸ ಪ್ರದರ್ಶಿಸುತ್ತಾರೆ ಎನ್ನುವ ಕುತೂಹಲವೇ ಅರ್ಜುನ್‌ನ ಕ್ಯಾಮೆರಾಗೆ ವಸ್ತು. ಹಿಮಾಲಯದ ತುದಿಯಿಂದ ಮರುಭೂಮಿಯ ವರೆಗೆ, -18 ಡಿಗ್ರಿ ಸೆಲಿÒಯಸ್‌ನಿಂದ 46 ಡಿಗ್ರಿಯ ಅತ್ಯುಷ್ಣದ ತಾಪಮಾನದಲ್ಲೂ ಸೈನಿಕನ ದಿನಚರಿಯನ್ನು ಹಲವಾರು ತಿಂಗಳಿಂದ ಸೆರೆಹಿಡಿದ. ಎಷ್ಟೋ ಸಲ, ಮೈನವಿರೇಳಿಸುವ ಅವರ ಸಾಹಸದ ದೃಶ್ಯಗಳನ್ನು ಸೆರೆಹಿಡಿಯುವಾಗ, ಅರ್ಜುನನ ಕೈಗಳು ಕಂಪಿಸುತ್ತಿದ್ದವಂತೆ. ಅದರಲ್ಲೂ ಲಡಾಖ್‌ನ ಬೋಳು ನೆತ್ತಿಯ ಮೇಲೆ ಡಜನ್ ಸೈನಿಕರು ಜಿಗಿದ ಫೋಟೋಗಳನ್ನು ಮರುನೋಡುವಾಗ, ಅವಕ್ಕಾಗಿ ನಿಂತರಂತೆ.
ಈ ಎಲ್ಲ ಸಾಹಸದ ಆಚೆಗೆ ಸೈನಿಕರು, ತಂತ್ರಜ್ಞಾನವನ್ನು ಹೇಗೆಲ್ಲ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಮೇಲೂ ಅರ್ಜುನ್ ಫೋಕಸ್ ಮಾಡಿದ್ದಾನೆ. ತಾಯಿಯೋ, ಪತ್ನಿಯೋ ಬರೆದ ಪತ್ರ ಬಂದಾಗ ಸೈನಿಕರಿಗಾಗುವ ಪುಳಕವನ್ನೂ ಫ್ರೆàಮ್‌ನಲ್ಲಿ ಬಂಧಿಸಿಟ್ಟಿದ್ದಾನೆ. ಎಲ್ಲೋ ದಟ್ಟ ಕಾಡಿನಲ್ಲಿ ಒಬ್ಬಂಟಿಯಾಗಿ ನಿಂತ ಸೈನಿಕನ ಮುಖಭಾವವನ್ನೂ ಈತನ ಫೋಟೋಗ್ರಫಿ ಚಿತ್ರಿಸಿದೆ.
ಅಂದಹಾಗೆ, ಅರ್ಜುನ್ ತಾನು ತೆಗೆದ, ರೋಮಾಂಚನ ಹುಟ್ಟಿಸುವಂಥ ಇವೆಲ್ಲ ಫೋಟೋಗಳನ್ನು ಇತ್ತೀಚೆಗೆ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಗಣರಾಜ್ಯೋತ್ಸವದಂದು ಸೈನಿಕರ ಪೆರೇಡ್ ನೋಡುವಾಗ ಅಪ್ಪನ ನೆನಪಾಗಿ, ನೂರಾರು ಚಿತ್ರಗಳನ್ನು ಅವರಿಗೆ ಸಮರ್ಪಿಸಿದರು. ಆ ಚಿತ್ರಗಳೆಲ್ಲವೂ ಒಂದರ್ಥದಲ್ಲಿ ಸಾಹಸಕಾವ್ಯಗಳು. ಮತ್ತೆ ಮತ್ತೆ ನೋಡಿ, ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ಪ್ರೇರೇಪಿಸುವಂಥವು… (ನೀವು ಈ ಚಿತ್ರಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ @artleavesamark ನೋಡಬಹುದು)
– ಸುಹಾಸ