ಬೀದರ: ತತ್ವಪದಗಳು ಆಧ್ಯಾತ್ಮಿಕ ಚಿಂತನೆಗೆ ಕೊಂಡ್ಯುತ್ತವೆ. ಕೆಟ್ಟ ಚಟಗಳಿಗೆ, ಕೆಟ್ಟ ಆಲೋಚನೆಗಳಿಗೆ ಇವು ಅವಕಾಶ ಕೊಡುವುದಿಲ್ಲ. ಆದ್ದರಿಂದಲೇ ನಾನು ಪ್ರಭಾವಿತನಾಗಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಸಾಹಿತಿ
ರಘುನಾಥ ಹಡಪದ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಹಡಪದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಆಂಧ್ರದಲ್ಲಿ ಜನಿಸಿದರು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಇಲ್ಲೆ ನೆಲೆಯೂರಿ ತಮ್ಮ ಕ್ಷೌರಿಕ ವೃತ್ತಿ ಜತೆಗೆ
ಸಾಹಿತ್ಯಿಕ ಕೃಷಿಯಲ್ಲಿ ತೊಡಗಿಸಿಕೊಂಡೆ. ಬದುಕಿನಲ್ಲಿ ಅನೇಕ ಸಂಕಷ್ಟಗಳು ಬಂದರೂ ಎದೆಗುಂದದೆ ತನ್ನ ವೃತ್ತಿ ಮುಂದುವರೆಸಿಕೊಂಡು ಸರಳ ಮತ್ತು ಆದರ್ಶ ಜೀವನ ನಡೆಸುವುದಕ್ಕೆ ಕಷ್ಟಗಳೇ ಪ್ರೇರಣೆಯಾದವು ಎಂದು ಹೇಳಿದರು.
ಇಂತಹ ಸರಳ ಬದುಕಿಗೆ ನನ್ನ ಮಡದಿಯೂ ಕೂಡ ಸಾಥ ನೀಡಿದರು. ತತ್ವಪದ ಹಾಡುಗಾರಿಕೆ ಸಾಹಿತ್ಯದ ಕುರಿತು ಅಭಿರುಚಿ ನನ್ನ ತಂದೆಯವರಿಂದಲೇ ದೇಣಿಗೆಯಾಗಿ ಬಂದಿತ್ತು. ಬೀದರನಲ್ಲಿ ಅನೇಕ ಸಾಹಿತಿಗಳು, ಗಣ್ಯರು ನನ್ನ ಸಾಹಿತ್ಯಕ್ಕೆ ಮನ್ನಣೆ ನೀಡಿ ಬೆಳೆಸಿದಕ್ಕಾಗಿ ಅವರೆಲ್ಲರಿಗಾಗಿ ನಾನು ಋಣಿಯಾಗಿದ್ದೇನೆ. ಯೋಗ ಸಿದ್ದಾಂತ, ಬ್ಯಾಲಹಳ್ಳಿಯ ಕರಿಬಸವೇಶ್ವರ ಬದುಕು ಬರಹ, ನಿಜಾನಂದ ತತ್ವಪದಗಳು, ಆಯ್ದ ತತ್ವಪದಗಳು, ಬೀದರ ಜಿಲ್ಲೆಯ ಆಯ್ದ ತತ್ವಪದಗಳು, ನಿರಂಜನ ತತ್ವಪದಗಳು ಇವು ಪ್ರಕಟಗೊಂಡಿವೆ. ಇನ್ನು 13 ಕೃತಿಗಳು ಪ್ರಕಟಣೆಗೆ ಸಿದ್ಧªವಾಗಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ರಘುಶಂಖ ಭಾತಂಬ್ರಾ, ಸೃಜನಶೀಲತೆ ಜತೆಗೆ ಸಂಪಾದನಾ ಶಿಸ್ತು, ಕ್ಷೇತ್ರ ಕಾರ್ಯದ ಕಲೆಗಾರಿಕೆ, ತತ್ವಪದ ಸಾಹಿತ್ಯ ಕುರಿತಾದ ಸಾಕಷ್ಟು ಅನುಭವ ಇದ್ದರೂ ಬಹಳಷ್ಟು ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೂ ಅವರಲ್ಲಿರುವ ಹುಮ್ಮಸ್ಸು, ಕಲೆಗಾರಿಕೆ ಎಳ್ಳಷ್ಟು ಕುಂದಿಲ್ಲ. ಸಾಹಿತ್ಯಕ ಪರಿಶ್ರಮ ಶೀಲತೆ ಅವರಲ್ಲಿನ್ನು ಸಕ್ರಿಯವಾಗಿದೆ ಎನ್ನುವುದಕ್ಕೆ ಅವರ ಕಾರ್ಯ ಚಟುವಟಿಕೆ ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ವೇದಾವತಿ ಮಠಪತಿ, ಸಂಜುಕುಮಾರ ಅತಿವಾಳೆ, ನಿರಂಕಾರ ಬಂಡಿ ಅವರು ಸಂವಾದ ನಡೆಸಿಕೊಟ್ಟರು. ಕಸಾಪ
ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ದಶರಥ ಮೋರಗೆ ಇದ್ದರು. ಟಿ.ಎಂ. ಮಚ್ಚೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚನ್ನಪ್ಪ ಸಂಗೋಳಗಿ ಸ್ವಾಗತಿಸಿದರು. ಸಿದ್ದಮ್ಮ ಬಸವಣ್ಣನೋರ ನಿರೂಪಿಸಿದರು. ಶಿವಕುಮಾರ ಕಟ್ಟೆ ವಂದಿಸಿದರು. ಸಾಹಿತಿಗಳಾದ ದೇಶಾಂಶ ಹುಡುಗಿ, ಎಂ.ಜಿ. ದೇಶಪಾಂಡೆ, ಹಂಸಕವಿ, ಜಗನ್ನಾಥ ಕಮಲಾಪುರೆ, ಗ್ರಾಮದ ಗಣ್ಯರಾದ ಶಾಂತಪ್ಪ, ಸಂಗ್ರಾಮ, ಚಂದ್ರಪ್ಪ, ಶ್ಯಾಮರಾವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.