Advertisement
ಒಂದು ದಿನ ಅಡೋವೆನಿಸ್ ಮಂತ್ರಿಯನ್ನು ಕರೆದು ತಂದೆ ತನಗೆ ಹೇಳಿದ ಮಾತುಗಳನ್ನು ತಿಳಿಸಿದ. “”ಅವರ ಅಪೇಕ್ಷೆಯಂತೆ ಬುದ್ಧಿವಂತಳೂ ಸ್ವಾಭಿಮಾನಿಯೂ ಆದ ಯುವತಿ ಯಾರ ಮಗಳಾದರೂ ಸರಿ, ಹುಡುಕಿಸಿ ಕರೆತನ್ನಿ” ಎಂದು ಹೇಳಿದ. ಮಂತ್ರಿಯು ನಗುತ್ತ, “”ದೊರೆಯೇ, ಬೆಣ್ಣೆ ಮನೆಯಲ್ಲಿರಿಸಿಕೊಂಡು ತುಪ್ಪಕ್ಕೆ ಯಾರಾದರೂ ಅಲೆಯುತ್ತಾರೆಯೆ? ನನ್ನ ಮಗಳಿಗಿಂತ ಹೆಚ್ಚಿನ ಬುದ್ಧಿವಂತಳೂ ಸ್ವಾಭಿಮಾನದಿಂದ ಮೆರೆಯುವವಳೂ ಆದ ಹುಡುಗಿ ಬೇರೆ ಎಲ್ಲಿ ಸಿಗಲು ಸಾಧ್ಯವಿದೆ? ನೀವೂ ಅವಳೂ ಒಂದೇ ಪಾಠಶಾಲೆಯಲ್ಲಿ ಕಲಿತವರು. ಹಾಗಾಗಿ ಅವಳ ಬಗೆಗೆ ಎಲ್ಲವೂ ನಿಮಗೆ ಗೊತ್ತಿದೆ. ನೀವು ಒಪ್ಪಿಕೊಂಡರೆ ನಾಳೆಯೇ ವಿವಾಹದ ಸಿದ್ಧತೆ ಕೈಗೊಳ್ಳಬಹುದು” ಎಂದು ಹೇಳಿದ.
Related Articles
Advertisement
ಅಡೋನಿಯಸ್, “”ನಿಮ್ಮಿಂದ ಹುಡುಕಲು ಸಾಧ್ಯವಾಗದಿದ್ದರೆ ನನ್ನ ತಂದೆ ಹೇಳಿದ ಗುಣಗಳಿರುವ ಹುಡುಗಿಯನ್ನು ನಾನೇ ಹುಡುಕಿ ಕರೆತರುತ್ತೇನೆ” ಎಂದು ಹೇಳಿ ಕುದುರೆಯೇರಿಕೊಂಡು ಹೊರಟ. ತುಂಬ ಊರುಗಳನ್ನು ಅಲೆದಾಡಿದ. ಕಡೆಗೆ ಒಂದು ಹಳ್ಳಿಗೆ ಬಂದ. ಅಲ್ಲಿ ಒಂದು ಹೊಲದ ತುಂಬ ಬಗೆಬಗೆಯ ತರಕಾರಿಗಳನ್ನು ಬೆಳೆದಿರುವುದು ಕಾಣಿಸಿತು. ಸುಂದರಿಯಾದ ಯುವತಿಯೊಬ್ಬಳು ತರಕಾರಿಗಳಿಗೆ ಕೋತಿಗಳು ಬಾರದಂತೆ ಕಾವಲು ಕಾಯುತ್ತ ಕುಳಿತಿದ್ದಳು. ಅಡೋನಿಯಸ್ ಪ್ರಯಾಣದಿಂದ ತೀರ ಬಳಲಿದ್ದ. ನೆತ್ತಿಯನ್ನು ಸುಡುತ್ತಿದ್ದ ಬಿಸಿಲಿನಿಂದಾಗಿ ದಾಹವೂ ಆಗಿತ್ತು. ಯುವತಿಯೊಂದಿಗೆ ಕುಡಿಯಲು ನೀರು ಕೇಳಿದ.
ಯುವತಿಯು, “”ನೀರು ಕೊಡಬಹುದು. ಆದರೆ ನಮ್ಮಲ್ಲಿ ಹಳೆಯ ಮಣ್ಣಿನ ಬಟ್ಟಲು ಮಾತ್ರ ಇದೆ. ತಮ್ಮನ್ನು ನೋಡಿದರೆ ಸಿರಿವಂತರ ಹಾಗೆ ತೋರುತ್ತದೆ. ತಾವು ಚಿನ್ನದ ಬಟ್ಟಲಿನಲ್ಲಿ ಹಾಲು ಕುಡಿಯುವವರು. ಬಡ ರೈತನ ಮನೆಯ ಬಟ್ಟಲು ನಿಮಗೆ ಇಷ್ಟವಾಗಬಹುದೆ?” ಎಂದು ಕೇಳಿದಳು. “”ಚಿನ್ನಧ್ದೋ ಮಣ್ಣಿನದೋ ಎಂದು ಪರೀಕ್ಷಿಸುವ ಕಾಲ ಇದಲ್ಲ. ದಾಹದಿಂದ ಗಂಟಲೊಣಗಿದೆ. ತುಂಬ ನಿತ್ರಾಣವಾಗಿದ್ದೇನೆ. ಯಾವುದರಲ್ಲಾದರೂ ಸರಿ, ನೀರು ತಂದುಕೊಡು” ಎಂದ ಅಡೋನಿಯಸ್. “”ಹಾಗಾದರೆ ಸರಿ” ಎಂದು ಹೇಳಿ ಯುವತಿ ತಂದುಕೊಟ್ಟ ನೀರನ್ನು ಗಟಗಟನೆ ಕುಡಿದು ಮಣ್ಣಿನ ಬಟ್ಟಲನ್ನು ಅವಳ ಕೈಯಲ್ಲಿರಿಸಿದ.
ಯುವತಿ ಮರುಕ್ಷಣವೇ ಮಣ್ಣಿನ ಬಟ್ಟಲನ್ನು ತೆಗೆದು ನೆಲಕ್ಕೆ ಹೊಡೆದಳು. ಬಟ್ಟಲು ಒಡೆದು ಚೂರುಚೂರಾಯಿತು. ಅಡೋನಿಯಸ್ ಕೋಪಗೊಂಡ. “”ಏನಿದು ಉದ್ಧಟತನ? ನಾನು ನೀರು ಕುಡಿದ ಬಟ್ಟಲನ್ನು ಬೇಕಂತಲೇ ಯಾಕೆ ನೆಲಕ್ಕೆ ಹೊಡೆದು ಒಡೆದು ಹಾಕಿದೆ? ನಿಜ ಹೇಳು, ನಾನು ಯಾರೆಂಬುದನ್ನು ಹೇಳಿದರೆ ನೀನು ದಂಗಾಗುತ್ತೀಯಾ! ಈ ದೇಶದ ಸಿಂಹಾಸನವೇರಿರುವ ದೊರೆ ನಾನು” ಎಂದು ಹೇಳಿದ.
ಯುವತಿ ಕೊಂಚವೂ ಹೆದರಲಿಲ್ಲ. “”ನಿಮ್ಮ ಮುಖಲಕ್ಷಣ ನೋಡಿದಾಗಲೇ ನೀವು ದೊರೆ ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಬುದ್ಧಿಹೀನಳೆಂದು ಭಾವಿಸಬೇಡಿ. ಆದರೆ ಈ ಬಟ್ಟಲು ನನ್ನ ತಾಯಿಯ ಕಾಲದಿಂದಲೂ ನಮ್ಮ ಮನೆಯಲ್ಲಿ ಉಪಯೋಗವಾಗುತ್ತಿದೆ. ಘನವಂತರಾದ ತಾವು ಅದರಲ್ಲಿ ನೀರು ಕುಡಿದ ಘಳಿಗೆಯಲ್ಲಿ ಅದು ಪವಿತ್ರವಾಯಿತು. ಇದರಲ್ಲಿ ಮುಂದೆ ನಾವಾಗಲೀ ಬೇರೆಯವರಾಗಲೀ ನೀರು ಕುಡಿದರೆ ನಿಮ್ಮ ಘನತೆಗೆ ಧಕ್ಕೆಯಾಗುತ್ತದೆ. ಹೀಗಾಗಬಾರದೆಂದು ಒಡೆದು ಹಾಕಿದೆ” ಎಂದಳು.
ಅಡೋನಿಯಸ್ ಅವಳು ಎಷ್ಟು ಗುಣವಂತೆಯೆಂಬು ದನ್ನು ಅರಿತುಕೊಂಡ. ಅವಳ ಸ್ವಾಭಿಮಾನ ಅವನಿಗೆ ಮೆಚ್ಚುಗೆಯಾಯಿತು. ಅರಮನೆಗೆ ಬಂದ. ತಾನೊಬ್ಬ ಯುವತಿಯನ್ನು ಆಯ್ಕೆ ಮಾಡಿರುವುದಾಗಿ ಮಂತ್ರಿಗೆ ಹೇಳಿದ. ಮಂತ್ರಿಯು, “”ಎಲ್ಲ ಸರಿ. ಆದರೆ ನನ್ನ ಮಗಳಿಗೊಂದು ನ್ಯಾಯ, ಊರವರಿಗೊಂದು ನ್ಯಾಯ ಆಗಬಾರದು. ನಿಮ್ಮ ಕೈಹಿಡಿಯುವವಳು ಸಿಹಿಗುಂಬಳಕಾಯಿಯನ್ನು ಮಡಕೆಯೊಳಗೆ ತುಂಬಿಸಿ ತರಬೇಕಲ್ಲವೆ?” ಎಂದು ಕೇಳಿದ. “”ಹೌದು, ಈ ಪರೀಕ್ಷೆಯಲ್ಲಿ ಅವಳು ಗೆದ್ದರೆ ನಮ್ಮಿಬ್ಬರ ವಿವಾಹ. ಕೂಡಲೇ ದೂತರನ್ನು ಅವಳ ಮನೆಗೆ ಕಳುಹಿಸಿ ಇದನ್ನು ಮಾಡಿ ತರುವಂತೆ ಹೇಳು” ಎಂದ ಅಡೋನಿಯಸ್.
ಮಂತ್ರಿ ದೊಡ್ಡ ಗಾತ್ರದ ಮಡಕೆಯನ್ನೇ ಆರಿಸಿದ. ಅದರ ಬಾಯಿಯೊಳಗೆ ಚಿಕ್ಕ ಅಡಕೆಯನ್ನೂ ಹಾಕಲು ಸಾಧ್ಯವಾಗದಷ್ಟು ಚಿಕ್ಕದಿರುವಂತೆ ನೋಡಿಕೊಂಡ. ಅದನ್ನು ದೂತರ ಕೈಗೆ ಕೊಟ್ಟ. “”ಆ ಯುವತಿಯ ಮನೆಗೆ ಹೋಗಿ ಈ ಮಡಕೆ ಒಡೆಯದ ಹಾಗೆ ದೊಡ್ಡ ಸಿಹಿಗುಂಬಳಕಾಯಿಯನ್ನು ಇದರ ಒಳಗೆ ತುಂಬಿಸಿ ತರಬೇಕೆಂದು ರಾಜಾಜ್ಞೆಯಾಗಿದೆ. ಇದರಲ್ಲಿ ವಿಫಲಳಾದರೆ ಶಿಕ್ಷೆಯಾಗುತ್ತದೆಂದು ಹೇಳಿಬನ್ನಿ” ಎಂದು ಅವರನ್ನು ಕಳುಹಿಸಿದ.
ದೂತರು ಯುವತಿಯ ಮನೆಗೆ ಬಂದು ಮಡಕೆಯನ್ನು ಅವಳ ಮುಂದಿರಿಸಿದರು. ಮಂತ್ರಿಯು ಹೇಳಿದ ಮಾತುಗಳನ್ನು ತಿಳಿಸಿದರು. ಯುವತಿ ಸ್ವಲ್ಪವೂ ಭಯಪಡಲಿಲ್ಲ. “”ನಾನು ರೈತನ ಮಗಳು. ಕುಂಬಳಕಾಯಿಯನ್ನು ಮಡಕೆಯ ಒಳಗೆ ತುಂಬಿಸುವುದು ಕಷ್ಟವೇ ಅಲ್ಲ. ಆದರೆ ಈಗ ದಕ್ಷಿಣಾಯನ. ಒಳ್ಳೆಯ ಕೆಲಸ ಮಾಡಬಾರದು. ದಕ್ಷಿಣಾಯನ ಮುಗಿದು ಉತ್ತರಾಯಣ ಬಂದ ಕೂಡಲೇ ನಾನು ಮಡಕೆಯೊಳಗೆ ತುಂಬಿದ ಕುಂಬಳಕಾಯಿಯನ್ನು ತರುತ್ತೇನೆ. ತಪ್ಪಿದರೆ ಶಿಕ್ಷೆ ಅನುಭವಿಸಲು ಸಿದ್ಧವಾಗಿದ್ದೇನೆ” ಎಂದು ಹೇಳಿದಳು. ದೂತರು ಮಂತ್ರಿಯ ಬಳಿಗೆ ಬಂದು ಈ ವಿಷಯ ತಿಳಿಸಿದರು.
ಯುವತಿ ಈ ಕೆಲಸದಲ್ಲಿ ಗೆಲ್ಲುವುದಿಲ್ಲವೆಂದೇ ಮಂತ್ರಿ ಭಾವಿಸಿದ್ದ. ಆದರೆ ಉತ್ತರಾಯಣದ ಮೊದಲ ದಿನವೇ ಅವಳು ಚಿಕ್ಕ ಬಾಯಿಯಿರುವ ಮಡಕೆಯೊಳಗೆ ದೊಡ್ಡ ಕುಂಬಳಕಾಯಿ ತುಂಬಿಸಿ ತಂದು ಒಪ್ಪಿಸಿದಳು. ಮಂತ್ರಿ ನಾಚಿಕೆಯಿಂದ ತಲೆತಗ್ಗಿಸಿದ. ರಾಜನೂ ಸಭಾಸದರೂ ಅಚ್ಚರಿಯಿಂದ ಮೂಗಿಗೆ ಬೆರಳೇರಿಸಿದರು. ರಾಜನು ಯುವತಿಯನ್ನು ವಿಜೃಂಭಣೆಯಿಂದ ಮದುವೆ ಮಾಡಿಕೊಂಡ. ಆಮೇಲೆ ಒಂದು ದಿನ, “”ಅಷ್ಟು ದೊಡ್ಡ ಕುಂಬಳಕಾಯಿಯನ್ನು ಚಿಕ್ಕ ಬಾಯಿಯಿರುವ ಮಡಕೆಯೊಳಗೆ ತುಂಬಿಸಲು ಯಾವ ಮಂತ್ರ ಜಪಿಸಿದೆ?” ಎಂದು ಕೇಳಿದ. ಯುವತಿಯು, “”ಮಂತ್ರವೂ ಇಲ್ಲ, ತಂತ್ರವೂ ಇಲ್ಲ. ನಾನು ಉತ್ತರಾಯಣ ಬರಲಿ ಎಂದು ಹೇಳಿದೆನಲ್ಲವೆ? ಕುಂಬಳಕಾಯಿ ದೊಡ್ಡದಿರುವಾಗ ಮಡಕೆಗೆ ತುಂಬಿಸಿದ್ದಲ್ಲ. ಚಿಕ್ಕ ಮಿಡಿಯಿರುವಾಗ ಅದರೊಳಗೆ ಇಳಿಸಿದ್ದೆ. ಆರು ತಿಂಗಳಾಗುವಾಗ ಒಳಗೆಯೇ ಬೆಳೆದು ದೊಡ್ಡದಾಯಿತು. ನಾನು ಉಪಯೋಗಿಸಿದ್ದು ಜಾಣ್ಮೆ ಮಾತ್ರ” ಎಂದು ನಕ್ಕಳು.
ಪರಾಶರ