ಭಾರತ ಸಂಸ್ಕೃತಿಯ ಮೂಲ. ಜಗತ್ತಿನ ಇತಿಹಾಸದಲ್ಲಿ ಭಾರತಕ್ಕೆ ಉತ್ಛತಮವಾದ ಹಿರಿಮೆ-ಗರಿಮೆ ಇದೆ. ಈ ನೆಲದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಇತರ ದೇಶಗಳಿಗೆ ಮಾದರಿಯಾಗಿದೆ. ವಿವಿಧತೆಯಲ್ಲಿ ಏಕತೆ ಕಾಣುವ ವಿಶಾಲ ಮನೋಭಾವ ನಮ್ಮದು. ಯೋಗ, ಧ್ಯಾನ, ಮೌನ, ತಪೋ ಸಾಧನಗಳ ಮೂಲಕ ಜಗತ್ತಿಗೆ ಶ್ರೇಷ್ಠತೆ ತಂದು ಕೊಟ್ಟ ಹೆಮ್ಮೆ ಭಾರತದ ಋಷಿಮುನಿಗಳವರದ್ದು.
ಈ ನೆಲದ ಮೂಲ ಸಂಸ್ಕೃತಿ ಎಂದರೆ ಋಷಿ ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿ. ಕೃಷಿ ಪ್ರಧಾನ ವಾದ ರಾಷ್ಟ್ರದಲ್ಲಿ ಬದುಕುವ ನಾವು “ಮಣ್ಣೆನಗೆ ಹೊನ್ನು ಅಣ್ಣಯ್ಯ; ಮಣ್ಣೇ ಲೋಕದಲ್ಲಿ ಬೆಲೆಯಾದ್ದು’ ಎಂಬಂತೆ ಮಣ್ಣಿನ ಕಣ ಕಣಗಳಲ್ಲಿ ದೈವಿಶಕ್ತಿ ತುಂಬಿದವರು ಋಷಿಮುನಿಗಳು- ಸಂತ ಮಹಾಂತರು. ಧರ್ಮ, ಸಂಸ್ಕೃತಿ, ಸಂಸ್ಕಾರದೊಂದಿಗೆ ಮಾನವ ಬದುಕಿಗೆ ಮಾರ್ಗದರ್ಶನ ನೀಡಿ,
ಸನ್ಮಾರ್ಗದತ್ತ ಕೊಂಡೊಯ್ಯುವ ಗುರು ಅಥವಾ ಋಷಿಗಳು ನಾಡವರ ಆಸ್ತಿ ಮತ್ತು ಅಸ್ತಿತ್ವ. ಹಿಂದಿನಿಂದ ಬಂದ ಪರಂಪರೆಯಂತೆ ರಾಜ ಮಹಾರಾಜರು ರಾಜ್ಯಭಾರ ಮಾಡುವಲ್ಲಿ ರಾಜಗುರುಗಳ ಪಾತ್ರ ಹಿರಿದಾಗಿತ್ತು. ಹಾಗೆಯೇ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಬಂದ ನಂತರ ರಾಜಕೀಯ ನಾಯಕರು ಧರ್ಮಗುರುಗಳ ಮಾರ್ಗದರ್ಶನ ಪಡೆದು ನಡೆದರೆ ಒಳಿತಾಗುತ್ತದೆ.
ರಾಜಕೀಯದಲ್ಲಿ ಧರ್ಮ ಇರಬೇಕೇ ವಿನಃ ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಧರ್ಮಸಂಸದ್ ಮೂಲಕ ಈ ವಿಚಾರ ಜನನಾಯಕರಿಗೆ ತಿಳಿ ಹೇಳುವಂತಾಗಬೇಕು. ಮುಖ್ಯವಾಗಿ ನಾವು ಭಾರತೀಯರು. ಧರ್ಮದ ವಿಚಾರ ಬಂದಾಗ ವ್ಯಕ್ತಿ ಪ್ರತಿಷ್ಠೆಗಿಂತ ಸಮಷ್ಟಿ ಪ್ರಜ್ಞೆ ಮೂಡಿಸಿ ಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣಾ ಪರ್ವ ಕಾಣಲು ಸಾಧ್ಯ.
ಇಲ್ಲವಾದರೆ ನಮ್ಮ ಹಿಂದೂ ಸಂಸ್ಕೃತಿಯ ಮೂಲ ಆಶಯಕ್ಕೆ ನಾವೇ ಧಕ್ಕೆ ತಂದಂತಾಗುತ್ತದೆ. ಪ್ರಸ್ತುತ ದಿನಗಳಲ್ಲಿ ವಿಚಾರಿಸಿ ನಿರ್ಣಯ ಕೈಗೊಳ್ಳುವ ಅಂಶಗಳೆಂದರೆ, ಭಾರತೀಯ ಸಂಸ್ಕೃತಿಯ ಮೇಲೆ ಆಗುತ್ತಿರುವ ವಿದೇಶಿ ಸಂಸ್ಕೃತಿಯ ಪ್ರಭಾವ ಕಡಿಮೆಯಾಗಬೇಕು. ದೇಶೀಯ ವಸ್ತುಗಳ ಬಳಕೆ ಹೆಚ್ಚಾಗಬೇಕು. ವಿದೇಶಿ ವಸ್ತುಗಳ ಆಮದು ಕಡಿಮೆಯಾಗಬೇಕು.
ಗೋವು ರಾಷ್ಟ್ರ ಪ್ರಾಣಿಯಾಗಿ ಘೋಷಣೆಯಾಗಿ ಗೋಹತ್ಯೆ ಸಂಪೂರ್ಣವಾಗಿ ನಿಲ್ಲಬೇಕು. ಭಾರತೀಯ ಯುವಕರಲ್ಲಿ ನಮ್ಮ ನೆಲದ ಸಂಸ್ಕೃತಿ ಬಗೆಗಿನ ಅಭಿಮಾನ ಇಮ್ಮಡಿಯಾಗುವಂತೆ ಪ್ರೇರಣೆ ನೀಡಬೇಕು. ಭಾರತದ ಸಂಸ್ಕೃತಿ, ಸಂಸ್ಕಾರ, ಕಲೆ, ಸಂಗೀತ, ಸಾಹಿತ್ಯ ಜಗತ್ತಿನಲ್ಲಿ ರಾರಾಜಿಸಬೇಕು. ಇವೆಲ್ಲವುಗಳಿಗೆ ಧರ್ಮಸಂಸದ್ ಪ್ರೇರಣೆ, ಪೊತ್ಸಾಹದಾಯಕವಾಗಿ ನಿಲ್ಲಬೇಕು ಎಂಬುದೇ ನಮ್ಮ ಆಶಯ.
* ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಹುಕ್ಕೇರಿಮಠ ಹಾವೇರಿ