Advertisement

ಮಳೆಗೆ ವ್ಯಕ್ತಿ ಬಲಿ

12:34 PM Jun 03, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಈ ವರ್ಷ ಮಳೆ ಮೊದಲ ಬಲಿ ಪಡೆದಿದೆ. ಶುಕ್ರವಾರ ಸುರಿದ ಭಾರಿ ಮಳೆಗೆ ಮನೆಯೊಂದರ ಕಾಂಪೌಂಡ್‌ ಕುಸಿದು ಮಾಲತೇಶ್‌ (30) ಎಂಬುವವರು ಮೃತಪಟ್ಟಿದ್ದಾರೆ. ಶನಿವಾರವೂ ಮಳೆ ಮುಂದುವರಿದ ಪರಿಣಾಮ ಹತ್ತಾರು ಮರಗಳು ಧರೆಗುರುಳಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. 

Advertisement

ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ವಿದ್ಯಾಪೀಠ ವಾರ್ಡ್‌ನ ಮನೆಯೊಂದರ ಕಾಂಪೌಂಡ್‌ ಕುಸಿದಿದ್ದು, ಅವಶೇಷಗಳಡಿ ಮಾಲತೇಶ್‌, ಪತ್ನಿ ಪಾರ್ವತಿ, ಸಹೋದರ ಶರಣಪ್ಪ ದಂಪತಿ ಸಿಕ್ಕಿ ಹಾಕಿಕೊಂಡಿದ್ದರು.  ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರು ಅವಶೇಷಗಳನ್ನು ತೆಗೆದಾಗ ಮಾಲತೇಶ್‌ ಮೃತಪಟ್ಟಿದ್ದರು. ಗಾಯಗೊಂಡಿದ್ದ ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಮೂಲದ ಮಾಲತೇಶ್‌ ಹತ್ತು ದಿನಗಳ ಹಿಂದಷ್ಟೇ ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದು, ಕುಟುಂಬದೊಂದಿಗೆ ಕತ್ತರಿಗುಪ್ಪೆ ಬಾಲಾಜಿ ಬಡಾವಣೆಯ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡಿದ್ದರು. ಶುಕ್ರವಾರ ರಾತ್ರಿ ಮನೆಯ ಕಾಂಪೌಂಡ್‌ ಶೆಡ್‌ ಮೇಲೆ ಕುಸಿದು ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  ಶನಿವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಲತೇಶ್‌ ಮಾರಣೋತ್ತರ ಪರೀಕ್ಷೆ ನಡೆಸಿದ್ದು, ಬಳಿಕ ಮೃತ ದೇಹವನ್ನು ಆ್ಯಂಬುಲೆನ್ಸ್‌ ಮೂಲಕ ಕಲಬುರಗಿಗೆ ಕೊಂಡೊಯ್ಯಲಾಯಿತು. 

ಮೃತರ ಕುಟುಂಬಕ್ಕೆ ಪರಿಹಾರ: ವ್ಯಕ್ತಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಜತೆಗೆ ಪಾಲಿಕೆಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಿ, ಗಾಯಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಹಾಗೇ ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆಯೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಂಪೌಂಡ್‌ ಕುಸಿದ ಘಟನೆ ಬಗ್ಗೆ ವರದಿ ನೀಡುವಂತೆ ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚಿಸಿರುವ ಸಂಪತ್‌ರಾಜ್‌, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  

Advertisement

ಶನಿವಾರವೂ ಮಳೆ: ಶನಿವಾರ ಜೋರಾದ ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ದಕ್ಷಿಣ ವಲಯದಲ್ಲಿ 50ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. ನಗರದಾದ್ಯಂತ ಸುಮಾರು 100ಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳು ಉರುಳಿವೆ. ಬನಶಂಕರಿ, ಜೆ.ಪಿ.ನಗರ, ವಿದ್ಯಾಪೀಠ, ಹನುಮಂತನಗರ, ಗಿರಿನಗರ, ಬಸವನಗುಡಿ, ಕಾಚರಕನಹಳ್ಳಿ,

ಡಾಲರ್ ಕಾಲೋನಿ, ಮಾರುತಿ ಸೇವಾನಗರ, ಹಲಸೂರು ಕೆರೆಯ ಬಳಿ, ಡಿಕನ್ಸನ್‌ ರಸ್ತೆ, ಜಯನಗರ, ರಾಘವೇಂದ್ರ ಮಠ, ಹೆಬ್ಟಾಳ, ಚೋಳನಾಯಕನಹಳ್ಳಿ ಸೇರಿಹಲವೆಡೆ ಮರಗಳು ಉರುಳಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆ ನಡುವೆಯೇ ಕಬ್ಬನ್‌ ರಸ್ತೆಯಲ್ಲಿ ಲಾರಿಯೊಂದು ಪಲ್ಟಿಯಾಗಿ, ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕಾಯಿತು.

ಕೆರೆಗಳಾದ ಅಂಡರ್‌ಪಾಸ್‌ಗಳು: ಶನಿವಾರ ಮಧ್ಯಾಹ್ನದಿಂದ ಸುರಿದ ಭಾರಿ ಮಳೆಗೆ ನಗರದ ಕೇಂದ್ರ ಭಾಗದ ಹಲವಾರು ಅಂಡರ್‌ ಪಾಸ್‌ಗಳು ಅಕ್ಷರಶಃ ಕೆರೆಗಳಂತಾದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಯಿತು. ಓಕಳಿಪುರ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಕೆ.ಆರ್‌.ವೃತ್ತ, ಸ್ಯಾಂಕಿ ರಸ್ತೆ ಅಂಡರ್‌ ಪಾಸ್‌, ಹಳೆ ಮದ್ರಾಸ್‌ ರಸ್ತೆಯ ಬೆನ್ನಿಗಾನಹಳ್ಳಿ ರೈಲ್ವೆ ಅಂಡರ್‌ಪಾಸ್‌, ಟಿನ್‌ಫ್ಯಾಕ್ಟರಿ, ಹೆಬ್ಟಾಳ ಸೇತುವೆ ಕೆಳಭಾಗದಲ್ಲಿ, ಚಾಲುಕ್ಯ ವೃತ್ತ ಸೇರಿದಂತೆ ನಗರದ ಪ್ರಮುಖ ಅಂಡರ್‌ ಪಾಸ್‌ ಹಾಗೂ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳು ಸರಾಗವಾಗಿ ಚಲಿಸಲಾಗದೆ ತೀವ್ರ ದಟ್ಟಣೆ ಉಂಟಾಗಿತ್ತು.

ಉಕ್ಕಿದ ರಾಜಕಾಲುವೆಗಳು: ಶುಕ್ರವಾರ ಹಾಗೂ ಶನಿವಾರದ ಮಳೆಗೆ ನಗರದ ಹಲವಾರು ರಾಜಕಾಲುವೆಗಳು ಉಕ್ಕಿ ಹರಿದಿದ್ದು, ಸಮೀಪದ ವಸತಿ ಪ್ರದೇಶಗಳಿಗೆ ಮಳೆನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿತ್ತು. ಮಹದೇವಪುರ, ಬೊಮ್ಮನಹಳ್ಳಿ ವಲಯದ ಕೆಲವು ಕಡೆಗಳಲ್ಲಿ ರಾಜಕಾಲುವೆಗಳು ಉಕ್ಕಿ ಹರಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನಾಹುತಗಳ ಮುನ್ಸೂಚನೆ ನೀಡಿದ ವರುಣ: ನಗರದಲ್ಲಿ ಸತತ ಮೂರನೇ ದಿನವೂ ಮಳೆ ಅಬ್ಬರ ಮುಂದುವರಿದಿದ್ದು, ಇದರಿಂದ ಉಂಟಾದ ಅವಾಂತರಗಳು ಮಳೆಗಾಲಕ್ಕೆ ಬೆಂಗಳೂರು ಇನ್ನೂ ಸಜ್ಜಾಗಿಲ್ಲ, ಈ ಬಾರಿಯೂ ಮಳೆ ಅನಾಹುತಗಳು ಕಾದಿವೆ ಎಂಬ ಮುನ್ಸೂಚನೆ ನೀಡಿದವು.

ನಗರದಲ್ಲಿ ಶನಿವಾರ ಸುರಿದ ಮಳೆಗೆ ಹತ್ತಾರು ಮರಗಳು ನೆಲಕಚ್ಚಿದವು. ಪ್ರಮುಖ ರಸ್ತೆಗಳ ಡಾಂಬರು ಕಿತ್ತುಹೋಗಿದ್ದು, ಗುಂಡಿಗಳು ಸೃಷ್ಟಿಯಾಗಿವೆ. ಅಂಡರ್‌ಪಾಸ್‌ಗಳಲ್ಲಿ ನೀರು ಸರಾಗವಾಗಿ ಹರಿಯದೆ, ವಾಹನಗಳು ಮಾರ್ಗಮಧ್ಯೆ ಕೆಟ್ಟುನಿಂತವು. ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು.

ವಾರಾಂತ್ಯದಲ್ಲಿ ಅಷ್ಟಾಗಿ ವಾಹನದಟ್ಟಣೆ ಇರಲಿಲ್ಲ. ಅಲ್ಲದೆ, ನಗರಕ್ಕೆ ಇನ್ನೂ ಸಂಪೂರ್ಣವಾಗಿ ಮುಂಗಾರು ಪ್ರವೇಶ ಕೂಡ ಆಗಿಲ್ಲ. ಆಗಲೇ ಹೀಗಾದರೆ, ಮಳೆಗಾಲದಲ್ಲಿ ಪರಿಸ್ಥಿತಿ ಏನು ಎಂಬ ಪ್ರಶ್ನೆ ಜನರನ್ನು ಕಾಡಿತು. ಓಕಳೀಪುರ, ಮಲ್ಲೇಶ್ವರ, ಎಚ್‌ಎಸ್‌ಆರ್‌ ಲೇಔಟ್‌, ಮಹದೇವಪುರ ಮತ್ತಿತರ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಸಿತು. 

ಇನ್ನೂ ನಾಲ್ಕೈದು ದಿನ ಮಳೆ?: ನಗರದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ, ಮುಂದಿನ ವಾರವೂ ಜನರಿಗೆ ಈ ಗೋಳು ತಪ್ಪಿದ್ದಲ್ಲ. ನಗರದಲ್ಲಿ ಪೂರ್ವ ಮುಂಗಾರು ಮಾರುತಗಳು ಮಳೆ ಸುರಿಸುತ್ತಿವೆ. ಮುಂಗಾರಿನ ಪ್ರವೇಶ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ.

ಪ್ರಸ್ತತ ಮಳೆ ಇನ್ನೂ ನಾಲ್ಕೈದು ದಿನ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ ಸ್ಪಷ್ಟಪಡಿಸಿದರು. ಶನಿವಾರ ರಾತ್ರಿವರೆಗೆ ನಗರದ ಮಂಡೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು 31.5 ಮಿ.ಮೀ, ಮಹದೇವಪುರದಲ್ಲಿ 22.5, ಲಾಲ್‌ಬಾಗ್‌ ಸುತ್ತ 18, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 21, ಕೆ.ಆರ್‌.ಪುರ 5.5, ಬೊಮ್ಮನಹಳ್ಳಿ 2.5, ಕೆಂಗೇರಿ 3 ಮಿ.ಮೀ. ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next