ಬೆಂಗಳೂರು: ದುಷ್ಕರ್ಮಿಗಳಿಂದ ಸ್ನೇಹಿತನನ್ನು ಪಾರು ಮಾಡಲು ಹೋದ ಯುವಕನೊಬ್ಬ ಅದೇ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸರಸ್ವತಿಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸರಸ್ವತಿಪುರ ನಿವಾಸಿ ಪ್ರದೀಪ್(27) ಕೊಲೆಯಾದ ಯುವಕ. ಘಟನೆಯಲ್ಲಿ ಆತನ ಸ್ನೇಹಿತ, ಕುಣಿಗಲ್ ತಾಲೂಕಿನ ವೆಂಕಟೇಶ್ ಎಂಬಾತ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಮತ್ತು ವೆಂಕಟೇಶ್ ಸ್ನೇಹಿತರಾಗಿದ್ದು, ವೆಂಕಟೇಶ್ ಹಳೆಯ ರೌಡಿಶೀಟರ್ ಆಗಿದ್ದ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸರಸ್ವತಿಪುರದಲ್ಲಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಜಾನುವಾರುಗಳ ಕಿಚ್ಚು ಹಾಯಿಸಲಾಗುತ್ತಿತ್ತು. ಇದನ್ನು ಪ್ರದೀಪ್, ವೆಂಕಟೇಶ್ ಮತ್ತು ಅವರ ಸ್ನೇಹಿತ ಮಂಜುನಾಥ್ ನೋಡುತ್ತಾ ನಿಂತಿದ್ದರು. ಆ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡ ಏಕಾಏಕಿ ವೆಂಕಟೇಶ್‌ನ ಮೇಲೆ ಎರಗಿ ಚಾಕುವಿನಿಂದ ಇರಿದಿದೆ. ಆಗ ಜತೆಗಿದ್ದ ಪ್ರದೀಪ್ ಸ್ನೇಹಿತನ ಸಹಾಯಕ್ಕೆ ಧಾವಿಸಿದ್ದ.
ದುಷ್ಕರ್ಮಿಗಳು ತನ್ನ ಮೇಲೆ ದಾಳಿ ಮಾಡುತ್ತಿದ್ದಂತೆ ವೆಂಕಟೇಶ್ ಅಲ್ಲಿಂದ ಪರಾರಿಯಾಗಿದ್ದ. ಇದರಿಂದ ಆಕ್ರೋಶಗೊಂಡ ಅವರು ವೆಂಕಟೇಶ್‌ನನ್ನು ಪಾರು ಮಾಡಿದ ಕೋಪಕ್ಕೆ ಪ್ರದೀಪ್ ಮೇಲೆ ದಾಳಿ ಮಾಡಿದ್ದಾರೆ. ಆತನ ಹೊಟ್ಟೆ ಮತ್ತು ಎದೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಪ್ರದೀಪ್‌ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ವೆಂಕಟೇಶ್ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಎರಡು ಪ್ರಕರಣಗಳಿವೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.