Advertisement

ಕಮಲಾದೇವಿ ಚಟ್ಟೋಪಾಧ್ಯಾಯರ ನೆನಪಿಗೆ ಶಾಶ್ವತ ಗ್ಯಾಲರಿ

09:04 PM Apr 02, 2019 | sudhir |

ಉಡುಪಿ: ಕರ್ನಾಟಕದ ಕರಾವಳಿ ಯಲ್ಲಿ ಜನಿಸಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾದ ಕಮಲಾದೇವಿ ಚಟ್ಟೋಪಾಧ್ಯಾಯ (1903 - 88) ಅವರ ಹೆಸರಿನ ತಾತ್ಕಾಲಿಕ ಗ್ಯಾಲರಿ ಮಣಿಪಾಲದ ಹೆರಿಟೇಜ್‌ ವಿಲೇಜ್‌ನಲ್ಲಿ ಆರಂಭಗೊಂಡಿದ್ದು ಕಮಲಾದೇವಿಯವರು ಮೊದಲು ಮದುವೆಯಾದ ಮಂಗಳೂರಿನ ಶಿವಭಾಗ್‌ನಲ್ಲಿದ್ದ ಮನೆಯನ್ನು ಮರುಸ್ಥಾಪಿಸಲಾಗುತ್ತಿದೆ.

Advertisement

ಹೆರಿಟೇಜ್‌ ವಿಲೇಜ್‌ನಲ್ಲಿ ಆರಂಭಗೊಂಡ ಕಮಲಾ ಗ್ಯಾಲರಿಯಲ್ಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಸೂಚಿಸುವ ಸುಮಾರು 40 ಚಿತ್ರಗಳನ್ನು ವಿವರಣೆ ಸಹಿತವಾಗಿ ಅಳವಡಿಸಲಾಗಿದೆ. ಈ ಚಿತ್ರಗಳನ್ನು ಹೆರಿಟೇಜ್‌ ವಿಲೇಜ್‌ನ ಹಸ್ತಶಿಲ್ಪ ಟ್ರಸ್ಟ್‌ಗೆ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ಕೊಡುಗೆಯಾಗಿ ನೀಡಿದೆ.

ಕಮಲಾದೇವಿಯವರು ಮಂಗಳೂರಿ ನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅನಂತಯ್ಯ ಧಾರೇಶ್ವರ್‌- ಗಿರಿಜಾ ಬಾಯಿಯವರಿಗೆ ಜನಿಸಿದರು. ಕಮಲಾದೇವಿಯವರು 14ನೆಯ ವರ್ಷದಲ್ಲಿ ಮಂಗಳೂರಿನ ನಯಂಪಳ್ಳಿ ಮನೆತನದ ಕೃಷ್ಣರಾವ್‌ ಅವರ ಜತೆಗೆ ಮದುವೆ, ಎರಡು ವರ್ಷದಲ್ಲಿ ಕೃಷ್ಣ ರಾವ್‌ ನಿಧನ, ಬಳಿಕ ಚೆನ್ನೈಗೆ ತೆರಳಿ ಅಧ್ಯಯನ, ಹಿರೇಂದ್ರನಾಥ ಚಟ್ಟೋಪಾಧ್ಯಾಯರ ಜತೆ ಎರಡನೆಯ ವಿವಾಹ, ನಾಟಕರಂಗ, ಚಲನಚಿತ್ರ ರಂಗದಲ್ಲಿ ಅಭಿನಯ (1943ರಲ್ಲಿ ತಾನ್‌ಸೇನ್‌ ಚಿತ್ರದಲ್ಲಿ ಕೆ.ಎಲ್‌.ಸೈಗಲ್‌, ಖುರ್ಷಿದ್‌ ಜತೆ ನಟಿಸಿದ್ದರು. ಶಂಕರ್‌ ಪಾರ್ವತಿ -1943, ಧಾನ ಭಗತ್‌ -1945ರಲ್ಲಿ ನಟಿಸಿದರು), ಲಂಡನ್‌ನಲ್ಲಿ ಸಮಾಜಶಾಸ್ತ್ರದಲ್ಲಿ ಡಿಪ್ಲೊಮಾ ಓದು, 1923ರಲ್ಲಿ ಮಹಾತ್ಮಾ ಗಾಂಧೀಜಿಯವರ ಸಂಪರ್ಕಕ್ಕೆ ಬಂದು ಸೇವಾದಲದಲ್ಲಿ ಕಾರ್ಯ, ಮಹಿಳಾ ಸಂಘಟನೆ, ಉಪ್ಪಿನ ಸತ್ಯಾಗ್ರಹದಲ್ಲಿ ಸಂಘಟನೆ, ಸ್ವಾತಂತ್ರಾéನಂತರ ಸಂತ್ರಸ್ತರಿಗೆ ನೆರವು, ಕರಕುಶಲ ಕಲೆ ಕುಶಲಕರ್ಮಿಗಳಿಗೆ ನೆರವು, ಕೈ ಮಗ್ಗದ ಕಾರ್ಮಿಕರಿಗೆ ಪುನಶ್ಚೇತನ ಇತ್ಯಾದಿ ಚಟುವಟಿಕೆ, ಕರಕುಶಲ ಮಂಡಳಿ, ರಾಷ್ಟ್ರೀಯ ಕಲಾ ಶಾಲೆ, ಸಂಗೀತ ನಾಟಕ ಅಕಾಡೆಮಿ ಇತ್ಯಾದಿ ಸಂಸ್ಥೆಗಳ ಸ್ಥಾಪನೆ, ನೆಹರು, ವಿನೋಬಾ ಭಾವೆಯಂತಹ ದಿಗ್ಗಜರ ಜತೆಗಿನ ಸಂಬಂಧ, ಮ್ಯಾಗ್ಸೆಸೆ, ಪದ್ಮಭೂಷಣ, ಪದ್ಮವಿಭೂಷಣ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳು ಹೀಗೆ ಅನೇಕಾನೇಕ ಪ್ರಮುಖ ಘಟನೆಗಳನ್ನು ವಿವರಿಸುವ ಚಿತ್ರಗಳು ಗ್ಯಾಲರಿಯಲ್ಲಿವೆ.

6ಲ.ರೂ. ಖರ್ಚು
ಕಮಲಾದೇವಿಯವರು ನಯಂಪಳ್ಳಿ ಮನೆತನಕ್ಕೆ ಮದುವೆಯಾದ ಕಾರಣ ಅವರನ್ನು ಮೂಲತಃ ಉಡುಪಿ ಸಮೀಪದ ನಯಂಪಳ್ಳಿಯವರೆಂದು ಹೇಳಬಹುದು. ನಯಂಪಳ್ಳಿ ಮೂಲದ ಅನೇಕ ಸಾರಸ್ವತ ಕುಟುಂಬದವರು ದೇಶದ ವಿವಿಧೆಡೆಗಳಲ್ಲಿ ನೆಲೆಸಿದ್ದಾರೆ. ಶಿವಭಾಗ್‌ನಲ್ಲಿದ್ದ ಸುಬ್ಬಣ್ಣ ಶಿವರಾವ್‌ ಅವರ ಪಾಲಿಗೆ ಕಮಲಾ ಅವರ ಮನೆ ಬಂದಿತ್ತು. ಸುಬ್ಬಣ್ಣ ಅವರು ಬಹು ವರ್ಷ ಮನೆಯನ್ನು ನಿರ್ವಹಿಸಿ 2017ರಲ್ಲಿ ಹಸ್ತ ಶಿಲ್ಪ ಟ್ರಸ್ಟ್‌ ಕಾರ್ಯದರ್ಶಿಯಾಗಿದ್ದ ವಿಜಯನಾಥ ಶೆಣೈಯವರಿಗೆ ಹಸ್ತಾಂತರಿ ಸಿದರು. ಆ ಮನೆಯನ್ನು ಕಳಚಿ ತರಲು ಟ್ರಸ್ಟ್‌ಗೆ ಸುಮಾರು 6 ಲ.ರೂ. ಖರ್ಚಾಗಿತ್ತು. 1 ಲ.ರೂ. ದೇಣಿಗೆಯನ್ನೂ ಸುಬ್ಬಣ್ಣ ರಾವ್‌ ನೀಡಿದ್ದರು. ಈ ಮನೆಯನ್ನು ಹೆರಿಟೇಜ್‌ ವಿಲೇಜ್‌ ಆವರಣದಲ್ಲಿ ಮರು ಸ್ಥಾಪಿಸಲು 2.8 ಕೋ.ರೂ. ಯೋಜನೆ ಸಿದ್ಧಗೊಂಡಿದೆ.

ಉಡುಪಿ, ಮಣಿಪಾಲಕ್ಕೆ ಬಂದಿದ್ದ ಕಮಲಾ
ಕಮಲಾ ದೇವಿಯವರಿಗೆ ವಿಜಯನಾಥ್‌ ಶೆಣೈಯವರೊಂದಿಗೆ ಆತ್ಮೀಯವಾದ ಸಂಬಂಧವಿತ್ತು.1976ರಿಂದ 80ರ ಅವಧಿಯಲ್ಲಿ ಶೆಣೈಯ ವರಲ್ಲಿಗೆ ಬಂದು ಇವರ ಅಪೂರ್ವ ಸಂಗ್ರಹಗಳನ್ನು ನೋಡಿ ಖುಷಿಪಟ್ಟಿದ್ದರು. ಶೆಣೈಯವರಿಗೆ ಅವರ ಮನೆಯನ್ನು ಮರು ಸ್ಥಾಪಿಸುವ ಇರಾದೆ ಇತ್ತು. ಈಗ ಸಂಗ್ರಹವಾದ ಕಮಲಾದೇವಿಯವರಿಗೆ ಸಂಬಂಧಿಸಿದ ಚಿತ್ರಗಳಲ್ಲದೆ ಇನ್ನೂ ಇತರ ಸಂಗ್ರಹಗಳನ್ನು ನೂತನ ಗ್ಯಾಲರಿಯಲ್ಲಿ ಸ್ಥಾಪಿಸಲಿದ್ದೇವೆ ಎನ್ನುತ್ತಾರೆ ಹಸ್ತಶಿಲ್ಪ ಟ್ರಸ್ಟ್‌ನ ಟ್ರಸ್ಟಿ ಟಿ.ಹರೀಶ್‌ ಪೈಯವರು. ಅದೇ ಅವಧಿಯಲ್ಲಿ ಕಮಲಾ ಅವರು ಎಂಜಿಎಂ ಯಕ್ಷಗಾನ ಕೇಂದ್ರ, ಬ್ರಹ್ಮಾವರದಲ್ಲಿ ಯಕ್ಷಗಾನದ ಸೀರೆ ತಯಾರಿಸುವಲ್ಲಿಗೆ ಭೇಟಿ ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next