ರಾಮನಗರ: ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಶೇ.90ರಷ್ಟು ಹಾಗೂ ದರೋಡೆ ಪ್ರಕರಣಗಳ ಶೇ.100ರಷ್ಟು ಆರೋಪಿಗಳನ್ನು ಪತ್ತೆಹಚ್ಚಿ ದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲೂ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾ ಪೊಲೀಸರನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ.
ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆ ಬಹಳ ದಿನಗಳವರೆಗೆ ಹಸಿರು ವಲಯವಾಗಿ ಉಳಿಯುವಲ್ಲಿ ಅವರ ಪಾಲು ಹೆಚ್ಚಿದೆ. ಸೋಂಕು ಇರುವುದರಿಂದ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಕಚೇರಿ ಕೆಲಸಕ್ಕೆ ಸೀಮಿತಗೊಳಿಸಲಾಗಿದೆ. 1:3 ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳು, ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸಿಂಥೆಟಿಕ್ ಡ್ರಗ್ಸ್ ಸೇವನೆಗೆ ಯುವ ಸಮು ದಾಯ ದಾಸರಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ ಎಂದು ಸೂಚಿಸಿರುವುದಾಗಿ ಹೇಳಿದರು. ಸಿಮರಳು ದಂಧೆ, ಜೂಜು ಮೊದಲಾದ ಪ್ರಕರಣಗಳನ್ನು ಸಿಬ್ಬಂದಿ ಸೂಕ್ತವಾಗಿ ನಿರ್ವಹಿ ಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ 99 ಸಿವಿಲ್ ಕಾನ್ ಸ್ಟೆಬಲ್ ಹುದ್ದೆಗಳು, 135 ಪಿಎಸ್‌ಐ ಹುದ್ದೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ 69, ವೈರ್‌ಲೆಸ್ ವಿಭಾಗದಲ್ಲಿ 9, ಮಿನಿಸ್ಟರ್ ಸ್ಟಾಫ್ ವಿಭಾಗದಲ್ಲಿ 7 ಹುದ್ದೆ ಖಾಲಿಯಿದೆ. ಜನಸಂಖ್ಯೆಗೆ ಅನುಗುಣವಾಗಿ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳ, ಔರಾದ್ಕರ್ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಕುರಿತು ಪ್ರಸ್ತಾವ: ಭೌಗೋಳಿಕವಾಗಿ ಜಿಲ್ಲೆಯ ಹೊರಗಿರುವ ಠಾಣೆಗಳನ್ನು ಆಯಾ ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಬೊಮ್ಮಾಯಿ ಐಜಿಪಿ ಶರತ್‌ಚಂದ್ರ ಅವರಿಗೆ ಸೂಚಿಸಿದರು. ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲ್ಲೂಕಿನ ತಾವರೆಕೆರೆ, ಕುಂಬಳಗೂಡು, ಕಗ್ಗಲಿಪುರ ಠಾಣೆಗಳು ರಾಮನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತಿದ್ದು, ಇದನ್ನು ಆಯಾ ಜಿಲ್ಲೆಗಳ ವ್ಯಾಪ್ತಿಗೆ ಸೇರಿಸುವ ಬಗ್ಗೆ ವರದಿ ನೀಡುವಂತೆ ಅವರು ಹೇಳಿದರು.