ನೀವೇನಾದರೂ ಮೊಟ್ಟೆ ಪ್ರಿಯರೋ, ಆಮ್ಲೆಟ್ ಪ್ರಿಯರೋ ಆಗಿದ್ದರೆ, ಖಂಡಿತ “ಹಾಫ್ ಬಾಯಿಲ್ಡ್’ ಅನ್ನೋ ಪದದ ಬಗ್ಗೆ ಕೇಳಿರುತ್ತೀರಿ ಅಥವಾ ಮೊಟ್ಟೆಯನ್ನು ಅರ್ಧ ಬೇಯಿಸಿ ಅದರ ರುಚಿಗೊಂದಷ್ಟು ಉಪ್ಪು-ಖಾರ ಬೆರೆಸಿ “ಹಾಫ್ ಬಾಯಿಲ್ಡ್’ ಅಂಥ ಬಾಯಿ ಚಪ್ಪರಿಸುವವರನ್ನಾದರೂ ನೋಡಿರುತ್ತೀರಿ. ಈಗ ಯಾಕೆ “ಹಾಫ್ ಬಾಯಿಲ್ಡ್’ ಬಗ್ಗೆ ಮಾತು ಅಂತೀರಾ? ಅದಕ್ಕೊಂದಿಷ್ಟು ಕಾರಣವಿದೆ. ಇಲ್ಲೊಂದು ಹೊಸಬರ ತಂಡ ಈಗ ಇದೇ ಹೆಸರಿನಲ್ಲಿ, “ನಾವೆಲ್ರೂ ಹಾಫ್ ಬಾಯಿಲ್ಡ್’ ಅನ್ನೋ ಚಿತ್ರವನ್ನು ತೆರೆಯ ಮೇಲೆ ತರಲು ಹೊರಟಿದೆ.
ಅಂದಹಾಗೆ, “ನಾವೆಲ್ರೂ ಹಾಫ್ ಬಾಯಿಲ್ಡ್’ ಅಂಥ ಚಿತ್ರಕ್ಕೆ ಹೆಸರಿಡೋದಕ್ಕೂ ಬಲವಾದ ಕಾರಣವಿದೆಯಂತೆ. “ಈಗಿನ ಕಾಲದ ಹುಡುಗರು ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಯಾವುದರಲ್ಲೂ ಪರಿಣಿತರಾಗಿರುವುದಿಲ್ಲ. ಯಾವುದರಲ್ಲೂ ಪರಿಪೂರ್ಣರಾಗಿರುವುದಿಲ್ಲ. ಹಿಡಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವುದಿಲ್ಲ. ಎಲ್ಲವನ್ನು ಅರ್ಧಂಬರ್ಧ ತಿಳಿದುಕೊಂಡಿರುತ್ತಾರೆ. ಎಲ್ಲವನ್ನೂ ಅರ್ಧಂಬರ್ಧ ಮಾಡುತ್ತಾರೆ. ಇಂಥ ಹುಡುಗರ ಜೀವನದ ಸುತ್ತ ಈ ಚಿತ್ರದ ಕಥೆ ನಡೆಯುವುದರಿಂದ, ಚಿತ್ರಕ್ಕೆ “ನಾವೆಲ್ರೂ ಹಾಫ್ ಬಾಯಿಲ್ಡ್’ ಅಂಥ ಹೆಸರಿಡಲಾಗಿದೆ’ ಎಂಬುದು ಚಿತ್ರದ ಟೈಟಲ್ ಕುರಿತು ಚಿತ್ರತಂಡದ ವಿವರಣೆ.
ಈಗಾಗಲೇ ಸದ್ದಿಲ್ಲದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ “ನಾವೆಲ್ರೂ ಹಾಫ್ ಬಾಯಿಲ್ಡ್’ ಚಿತ್ರತಂಡ ಇದೇ ಜ. 24ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು. ಚಿತ್ರಕ್ಕೆ ಶಿವರಾಜ್ ಬಿ, ವೆಂಕಟಾಚಲ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು, “ಇಂದಿನ ಯುವಕರು ಜೀವನವನ್ನು ಹೇಗೆ ಅರ್ಥ ಮಾಡಿಕೊಂಡಿರುತ್ತಾರೆ. ನಮ್ಮ ಯುವಕರಿಗೆ ಹೇಳ್ಳೋರು, ಕೇಳ್ಳೋರು, ತಿಧ್ದೋರು ಇಲ್ಲದಿದ್ದರೆ ಅವರ ಜೀವನದಲ್ಲಿ ಏನೆಲ್ಲ ಆಗಬಹುದು ಅನ್ನೋದನ್ನ ನಾಲ್ಕು ಹುಡುಗರನ್ನು ಇಟ್ಟುಕೊಂಡು ಈ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಕಥೆಯ ಎಳೆ ಬಿಚ್ಚಿಟ್ಟರು.
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಾವೆಲ್ರೂ ಹಾಫ್ ಬಾಯಿಲ್ಡ್’ ಚಿತ್ರದಲ್ಲಿ ಸುನೀಲ್ ಕುಮಾರ್, ದೀಪಕ್, ಹಂಪೇಶ್, ಮಂಜುನಾಥ್ ನಾಯಕರಾಗಿ, ಮಾತಂಗಿ ಪ್ರಸನ್, ವಿನ್ಯಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಬಲನಾಣಿ, ದೇವದಾಸ್ ಕಾಪಿಕಾಡ್, ಪವನ್ ಕುಮಾರ್, ಅನಂತ್ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಕ್ಯಾಮರಾ ಹಿಡಿದರೆ, ಅದೇ ಚಿತ್ರಕ್ಕೆ ನೃತ್ಯ ನಿರ್ದೇಶಿಸಿದ್ದ ಪ್ರೇಮ್ ರಕ್ಷಿತ್ ಈ ಚಿತ್ರದ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ತಬಲನಾಣಿ ಸಂಭಾಷಣೆಯಿದೆ.