Advertisement

ಪಟ್ಟಣದ ಜನತೆಗೆ ಪೊಟ್ಟಣಗಳಲ್ಲಿ ಸಿಗಲಿದೆ ಮಟ್ಟುಗುಳ್ಳ

10:23 AM Mar 09, 2020 | mahesh |

ಉಡುಪಿ: ಮಟ್ಟುಗುಳ್ಳದ ವಿವಿಧ ಖಾದ್ಯಗಳ ರುಚಿ ಸವಿಯದಿರುವವರು ವಿರಳ. ಇನ್ನು ಮುಂಬಯಿ, ಕೇರಳ, ಬೆಂಗಳೂರಿನಂತಹ ನಗರದ ವಾಸಿಗಳಿಗೂ ಮಟ್ಟುಗುಳ್ಳ ಬದನೆ ಖಾದ್ಯ ಸವಿಯುವ ಅವಕಾಶ ಸಲೀಸಾಗಿ ಸಿಗಲಿದೆ. ಮಟ್ಟುಗುಳ್ಳ ಖರೀದಿಗೆ ಹಾಪಕಾಮ್ಸ್ ಮಾದರಿಯಲ್ಲಿ ಕಿಯೋಸ್ಕೋ ಸೆಂಟರ್‌ ಆರಂಭವಾಗಲಿದೆ.

Advertisement

ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ ಮೊದಲಾದ ಕಡೆಗಳಲ್ಲಿ ಜನ ಸಂಚಾರವಿರುವ ಪ್ರದೇಶಗಳಲ್ಲಿ ತಾಜಾ ಮಟ್ಟುಗುಳ್ಳ ಮಾರಾಟಕ್ಕೆ ತೆರೆದುಕೊಳ್ಳಲಿದೆ. 50, 100 ಕೆ.ಜಿ ತೂಕದ ಮಟ್ಟುಗುಳ್ಳದ ಬ್ಯಾಗ್‌ಗಳನ್ನು ದೂರದೂರುಗಳಿಗೆ ಸಾಗಿಸುವುದು ಕಷ್ಟ. ಪ್ಯಾಕ್‌ ಮಾಡುವ ವೇಳೆ ಅಡಿ ಭಾಗದಲ್ಲಿರುವ ಗುಳ್ಳ ಹಾಳಾಗಿ ನಷ್ಟ ಉಂಟಾಗುತ್ತದೆ. ಅದನ್ನು ತಪ್ಪಿಸಲು ಮತ್ತು ಒಂದೆರಡು ಕೆ.ಜಿ ಪೊಟ್ಟಣಗಳಲ್ಲಿ ಸುಲಭವಾಗಿ ಕೊಂಡೊಯ್ಯುವಂತೆ ಮಾಡಲು ಈ ಕಿಯೋಸ್ಕ್ ಮಾದರಿ ಸಹಕಾರಿಯಾಗಲಿದೆ. ಅಗತ್ಯವಿರುವಷ್ಟೆ ಖರೀದಿ, ಇವೆಲ್ಲವನ್ನು ಗಮನದಲ್ಲಿರಿಸಿ ಹಾಪಾRಮ್ಸ… ಮಾದರಿಯಲ್ಲಿ ಕಿಯೋಸ್ಕ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ.

ಮೇ ತಿಂಗಳಲ್ಲಿ ತರಬೇತಿ
ಮಳೆಗಾಲದ ಅವಧಿಯಲ್ಲಿ ಮಟ್ಟುಗುಳ್ಳ ಬೆಳೆಯುವ ಪರಿಸರದ ಮಹಿಳೆಯರಿಗೆ ಹಳೆಯ ಪೇಪರ್‌ಗಳಿಂದ ಟ್ರೇ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಗುವುದು. ಮೇ ತಿಂಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಹಿಳೆಯರು ತಯಾರಿಸಿದ ಟ್ರೇಗಳನ್ನು ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಟ್ರೇನಲ್ಲಿ ಮಟ್ಟುಗುಳ್ಳಗಳನ್ನು ಇರಿಸಿ ದೂರದೂರುಗಳಿಗೆ ಸಾಗಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಮಾಹೆ ವಿ.ವಿ. ಎಂಐಎಂ ಪ್ರಾಧ್ಯಾಪಕ ಡಾ| ಹರೀಶ್‌ ಜಿ. ಜೋಷಿ ಹೇಳುತ್ತಾರೆ.

ರೈಲ್ವೆ ಇಲಾಖೆ ಅನುಮತಿ ಪಡೆಯಲು ನಿರ್ಧಾರ
ಮಹಿಳೆಯರು ತಯಾರಿಸುವ ಟ್ರೇಗಳನ್ನು ಖರೀದಿಸಿ ಅದರಲ್ಲಿ ಸೇಬು ಜೋಡಿಸಿಡುವ ಮಾದರಿಯಲ್ಲಿ ಮಟ್ಟುಗುಳ್ಳವನ್ನು ಜೋಡಿಸಲಾಗುವುದು. ಬದನೆಯಲ್ಲಿ ತೊಟ್ಟುಗಳು ಇರುವುದರಿಂದ ಪ್ಯಾಕಿಂಗ್‌ ತುಸು ಕಷ್ಟ. ಆದಾಗ್ಯೂ ಸಾಗಾಟಕ್ಕೆ ಅನುಕೂಲವಾಗುವಂತೆ ಪ್ಯಾಕಿಂಗ್‌ ಮಾಡಲಾಗುವುದು. ಪ್ಲಾಸ್ಟಿಕ್‌ನಲ್ಲಿ ಗುಳ್ಳವಿಟ್ಟರೆ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಟ್ರೇನಲ್ಲಿ ಇರಿಸಿದಲ್ಲಿ ಕಪ್ಪಾಗುವುದು ತಪ್ಪುತ್ತದೆ. ಈ ರೀತಿ ಪ್ಯಾಕ್‌ ಮಾಡಿದ ಪೊಟ್ಟಣಗಳ ಮಾರಾಟ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಉಡುಪಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ರಾಜಾಂಗಣದ ಪಾರ್ಕಿಂಗ್‌ ಸ್ಥಳಗಳಲ್ಲಿ ಅನುಮತಿ ಪಡೆದು ತೆರೆಯಲಾಗುವುದು. ಇದಕ್ಕೂ ಮೊದಲು ಸಂಬಂಧಿಸಿದವರಿಂದ ಅನುಮತಿ ಪಡಕೊಳ್ಳಲಾಗುತ್ತದೆ ಎಂದು ಜೋಷಿ ತಿಳಿಸಿದ್ದಾರೆ.

ಸ್ಮರಣಿಕೆಯಾಗಿಯೂ ಮಟ್ಟುಗುಳ್ಳ
ಭೌಗೋಳಿಕ ಮಾನ್ಯತೆ ಪಡೆದ ಮಟ್ಟುಗುಳ್ಳ ಹಾಗೂ ಮಲ್ಲಿಗೆಯ ಭವಿಷ್ಯಕ್ಕಾಗಿ ರೂಪುರೇಖೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿ ಕೆಲ ಸಮಯಗಳ ಹಿಂದೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಮಟ್ಟುಗುಳ್ಳವನ್ನೇ ಸ್ಮರಣಿಕೆಯಾಗಿ ನೀಡಲಾಯಿತು. 2 ಕೆ.ಜಿ ತೂಕದ ಮಟ್ಟುಗುಳ್ಳ ಕೊಟ್ಟರೂ ಸ್ಮರಣಿಕೆಗೆ ತಗಲುವ ವೆಚ್ಚಕ್ಕಿಂತ ಕಡಿಮೆಯಾಗುತ್ತದೆ. 2 ದಿನದ ಕಾರ್ಯಾಗಾರಕ್ಕೆ ತಲಾ 20 ಕೆಜಿಯಷ್ಟು ಗುಳ್ಳಕ್ಕೆ ಬೇಡಿಕೆ ಇತ್ತು ಅನ್ನುತ್ತಾರೆ ಡಾ| ಹರೀಶ್‌ ಜಿ. ಜೋಷಿ.

Advertisement

ಮಾಡೆಲ್‌ ಫಾರ್ಮಿಂಗ್‌ ಸ್ಥಾಪನೆ
ಮಟ್ಟುಗುಳ್ಳ ಬದನೆಗೆ ಹೊರ ದೇಶದಲ್ಲೂ ಬೇಡಿಕೆಯಿದೆ. ಮಟ್ಟುಗುಳ್ಳದ ಇತಿಹಾಸ, ಬೆಳವಣಿಗೆ, ನಾಟಿ ಕಾರ್ಯದ ವಿವರಣೆ, ಪ್ರಾತ್ಯಕ್ಷಿಕೆೆಗಳನ್ನು ಹಮ್ಮಿಕೊಂಡು ಯುವ ಜನತೆಯನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ ಮಟ್ಟುವಿನ ಒಂದು ಎಕರೆ ಜಾಗದಲ್ಲಿ ಮಾಡೆಲ್‌ ಫಾರ್ಮಿಂಗ್‌ ವರ್ಷದೊಳಗೆ ಸ್ಥಾಪಿಸಲು ಮಟ್ಟುಗುಳ್ಳ ಬೆಳೆಗಾರರ ಸಂಘ ಚಿಂತನೆ ನಡೆಸಿದೆ. ಜತೆಗೆ ಸಂಶೋಧಕರು, ವಿದ್ಯಾರ್ಥಿಗಳನ್ನು ರೈತರು ಮಟ್ಟುಗುಳ್ಳ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ ಸಂಶೋಧನೆಗೂ ಅವಕಾಶ ಕಲ್ಪಿಸಲಾಗುತ್ತಿದೆ. ಮಾಡೆಲ್‌ ಫಾರ್ಮಿಂಗ್‌ ಸ್ಥಾಪನೆಗೆ ನಬಾರ್ಡ್‌ ಅನುದಾನ, ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುತ್ತಿದೆ.

ಬೆಳೆಗಾರರಿಗೆ ಅನುಕೂಲ
ಮಟ್ಟುಗುಳ್ಳಕ್ಕೆ ವಿಶೇಷ ಸ್ಥಾನಮಾನವಿದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೂ ಅವಕಾಶವಿದೆ. ಮಟ್ಟುಗುಳ್ಳ ಬೆಳೆಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಮಾಡೆಲ್‌ ಫಾರ್ಮಿಂಗ್‌ ಕೂಡ ಒಂಂದಾಗಿದೆ.
-ಲಕ್ಷ್ಮಣ ಮಟ್ಟು,  ಕಾರ್ಯನಿರ್ವಾಹಣಾಧಿಕಾರಿ, ಮಟ್ಟು ಬೆಳೆಗಾರರ ಸಂಘ.

ಸಂಶೋಧನೆ ಅಗತ್ಯ
ಮಟ್ಟುಗುಳ್ಳಕ್ಕೆ ಮಾರುಕಟ್ಟೆ ಸೃಷ್ಟಿಸುವುದು, ಉದ್ಯೋಗ ಸೃಷ್ಟಿ ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಆ್ಯಪ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟೂ ಸಂಶೋಧನೆಗಳು ನಡೆಯಬೇಕು ಅನ್ನುವ ಉದ್ದೇಶ ನಮ್ಮದು. ಯುವ ಜನತೆಯನ್ನು ಇದರತ್ತ ಸೆಳೆಯುವ ಪ್ರಯತ್ನ ಕೂಡ ನಡೆಸಲಾಗುತ್ತಿದೆ.
-ಡಾ| ಹರೀಶ್‌ ಜಿ. ಜೋಷಿ, ಪ್ರಾಧ್ಯಾಪಕರು, ಎಂಐಎಂ, ಮಣಿಪಾಲ

ಮಟ್ಟುಗುಳ್ಳ
ಮಟ್ಟುಗುಳ್ಳ ಬೆಳೆಗಾರರ ಸಂಘದ ಸದಸ್ಯರ ಸಂಖ್ಯೆ: 210
ಪ್ರಸ್ತುತ ಮಟ್ಟುಗುಳ್ಳ ಬೆಳೆಯಲು ಅನುಕೂಲವಾಗಿರುವ ಭೂಮಿ: 350 ಎಕರೆ
ಎಷ್ಟು ಎಕರೆಯಲ್ಲಿ ಈಗ ಮಟ್ಟುಗುಳ್ಳ ಬೆಳೆಯಲಾಗುತ್ತಿದೆ: 201 ಎಕರೆ
ನಾಟಿ ಅವಧಿ: 8 ತಿಂಗಳು
ಸೂಕ್ತ ಅವಧಿ: ನವೆ‌ಂಬರ್‌-ಮೇ ತನಕ
ನಾಟಿ ಕಟಾವಿಗೆ ಬರಲು ಹಿಡಿಯುವ ದಿನಗಳು: 45ರಿಂದ 60 ದಿನ
ಖರ್ಚು: 1 ಎಕರೆಗೆ 60 ಸಾವಿರ ರೂ.
1 ಎಕರೆಯಲ್ಲಿ ಆದಾಯ ಗಳಿಕೆ : 2.30 ಲಕ್ಷ ರೂ.
ಸಂಘದಿಂದ ನಿಗದಿಪಡಿಸಿದ ದರ: ಕೆ.ಜಿಗೆ -40.ರೂ

Advertisement

Udayavani is now on Telegram. Click here to join our channel and stay updated with the latest news.

Next