ಕೆ.ಆರ್.ಪೇಟೆ: ಜಿಲ್ಲೆಯ ಜನತೆಯ ಋಣ ತೀರಿಸಲೇ ನಾನು ಇಲ್ಲಿಗೆ ಬಂದಿರುವೆ ಎಂದು ಸುಮಲತಾ ಅಂಬರೀಶ್ ಹೇಳಿದರು. ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಬರೀಶ್ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದವೇ ಕಾರಣ.
ನಿಮ್ಮ ಋಣ ತೀರಿಸಲು ನಾನು ಬಂದಿರುವೆ. 45 ವರ್ಷಗಳಿಂದ ನಮ್ಮ ಕೈಹಿಡಿದರುವ ಮಂಡ್ಯದ ಜನತೆ ಮುಂದಿನ ದಿನಗಳಲ್ಲಿಯೂ ನಮ್ಮ ಕುಟುಂಬದ ಕೈಹಿಡಿದು ನಡೆಸುತ್ತಾರೆ ಎಂಬ ಭರವಸೆ ನನಗಿದೆ. ಈಗ ತಮ್ಮ ಋಣ ತೀರಿಸಲು ಒಂದು ಅವಕಾಶಕ್ಕಾಗಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಹೇಳಿದರು.
ನಿಮ್ಮ ಪ್ರೀತಿಗೆ ಚಿರಋಣಿ: ನಾನು ಅಂಬರೀಶ್‌ರನ್ನು ಕಳೆದುಕೊಂಡು ದುಃಖದಲ್ಲಿದ್ದಾಗ ಮಂಡ್ಯದ ಜನತೆ ಬಂದು ನನಗೆ ಸಾಂತ್ವನ ಹೇಳುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಕೊನೆಯವರೆಗೂ ಅಂಬರೀಶ್ ಅಭಿಮಾನಿಗಳಾಗಿ ನಮ್ಮೊಂದಿಗೆ ನೀವಿರಬೇಕು. ಮಂಡ್ಯ ಜನತೆ ಅಂಬರೀಶ್ ಮೇಲಿಟ್ಟಿದ್ದ ಪ್ರೀತಿಗೆ ಕಟ್ಟುಬಿದ್ದು ನಾನಿಂದು ನಿಮ್ಮ ಮುಂದೆ ನಿಂತಿರುವೆ.
ನನಗೆ ಯಾವ ಅಧಿಕಾರದ ಆಸೆ ಇಲ್ಲ. 45 ವರ್ಷಗಳ ಕಾಲ ಜನರು ನಮಗೆ ನೀಡಿರುವ ಪ್ರೀತಿಗೆ ಸಣ್ಣ ಸೇವೆ ಮಾಡಬೇಕು ಎಂದು ಪ್ರಯತ್ನಿಸುತ್ತಿರುವೆ. ತಾವುಗಳು ಅನುಮತಿ ಹಾಗೂ ಅವಕಾಶ ನೀಡಿದರೆ ನಾನು ನನ್ನ ಕೊನೆಯುಸಿರು ಇರುವವರೆಗೂ ತಮ್ಮ ಸೇವೆ ಮಾಡಲು ಸಿದ್ದಳಿದ್ದೇನೆ ಎಂದು ಸುಮಲತಾ ತಿಳಿಸಿದರು.
ಹೃದಯವಂತ ಅಂಬರೀಶ್: ಹಿರಿಯ ಚಿತ್ರನಟ ದೊಡ್ಡಣ್ಣ ಮಾತನಾಡಿ, ಹೃದಯವಂತ ಕೊಡುಗೈ ದಾನಿ ದಿವಂಗತ ಅಂಬರೀಶ್ ಕೊಡುಗೆ ಅಪಾರವಾದುದು. ಅವರು ಮಂಡ್ಯದ ಮಗನಾಗಿದ್ದು, ಸುಮಲತಾರನ್ನು ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸುವ ಮೂಲಕ ರೆಬೆಲ್ ಸ್ಟಾರ್‌ಗೆ ನಿಮ್ಮ ಪ್ರೀತಿ ಏನೆಂದು ತೋರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಖ್ಯಾತ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಹಿರಿಯ ಮುಖಂಡ ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯರಾದ ಕಿಕ್ಕೇರಿ ಸುರೇಶ್, ರವೀಂದ್ರಬಾಬು, ಮನ್‌ಮುಲ್ ನಿರ್ದೇಶಕರಾದ ಡಾಲುರವಿ,
ಅಂಬರೀಶ್, ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್, ಜಿಪಂ ಮಾಜಿ ಸದಸ್ಯ ನಾಗೇಂದ್ರ, ಪುರಸಭಾ ಸದಸ್ಯರಾದ ಎಚ್.ಕೆ.ಅಶೋಕ್, ಕೆ.ಬಿ.ನಂದೀಶ್‌ಕುಮಾರ್, ಶೇಲ್ಲು ಮಹಮದ್ ಸೇರಿದಂತೆ ನೂರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.