Advertisement

ಕೆಸರು ಗದ್ದೆ ಆಟ ಆಡಿ ಸಂಭ್ರಮಿಸಿದ ಸಿಟಿ ಮಂದಿ

04:38 PM Aug 22, 2022 | Team Udayavani |

ಬೆಳಗಾವಿ: ಮುಂಗಾರು ಮಳೆ ನಂತರ ಸುಂದರ ಪ್ರಕೃತಿ ತಾಣದಲ್ಲಿ ಮೋಡ ಮುಸುಕಿದ ವಾತಾವರಣದಲ್ಲಿಯೇ ಮೈನವಿರೇಳಿಸುವ ಕೆಸರು ಗದ್ದೆ ಆಟಗಳು ಜನರ ಮನಸ್ಸು ಗೆದ್ದವು. ಎದ್ನೋ, ಬಿದ್ನೋ ಎಂಬಂತೆ ಕೆಸರಿನಲ್ಲಿ ಓಡಿದ ಯುವಕರು ಸ್ಪರ್ಧೆ ಜತೆಗೆ ಆಟದಲ್ಲಿ ಸಂಭ್ರಮಿಸಿ ಮಿಂದೆದ್ದರು.

Advertisement

ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದ್ದ ಕೆಸರು ಗದ್ದೆ ಓಟಗಳು ಉತ್ತರ ಕರ್ನಾಟಕದಲ್ಲಿಯೂ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸುಮಾರು 15 ವರ್ಷಗಳಿಂದ ನಿರಂತರ ನಡೆಸಿಕೊಂಡು ಬಂದಿದ್ದಾರೆ. ಕೆಸರು ಗದ್ದೆಯ ವಿವಿಧ ದೇಸಿ ಆಟ ನಡೆಸಿ ಮೆಚ್ಚುಗೆ ಗಳಿಸಿದ್ದಾರೆ.

ನಗರದ ಪಾಟೀಲ್‌ ಮಾಳ ತೋಟದಲ್ಲಿ ರವಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಹಾಗೂ ಮೊಸರಿನ ಮಡಿಕೆ ಒಡೆಯುವ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿ ಸ್ಪರ್ಧಾಳುಗಳು ಸಖತ್‌ ಎಂಜಾಯ್‌ ಮಾಡಿದರು. ಕೆಸರಿನ ಗದ್ದೆಗಳಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕೆರು ಗದ್ದೆ ಓಟ ಆಯೋಜಿಸಿರಲಿಲ್ಲ. ಈ ವರ್ಷ ಸಂಭ್ರಮದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟು 50 ಸಾವಿರ ರೂ. ವರೆಗೆ ಬಹುಮಾನ ಮೊತ್ತ ಇಡಲಾಗಿತ್ತು.

ರಂಜಿಸಿದ ದೇಸಿ ಆಟಗಳು: ಓಟದ ಸ್ಪರ್ಧೆಯಲ್ಲಿ ಹಲವರು ಕೆಸರಿನಲ್ಲಿ ಬಿದ್ದರೂ ಎದ್ದು ಮತ್ತೆ ಓಡಿ ಗಮನ ಸೆಳೆದರು. ಜತೆಗೆ ಹಗ್ಗಜಗ್ಗಾಟವಂತೂ ಮೈನವಿರೇಳಿಸುವಂತಿತ್ತು. ಇದರಲ್ಲಿ ಯುವಕರು ಪಾಲ್ಗೊಂಡು ಸಾಹಸ ಪ್ರದರ್ಶಿಸಿದರು. ಹಗ್ಗ ಜಗ್ಗುವಾಗ ಒಂದು ಗುಂಪು ಜೋರಾಗಿ ಕೆಸರಿನಲ್ಲಿ ಬೀಳುತ್ತಿರುವ ದೃಶ್ಯ ನೋಡುಗರನ್ನು ರಂಜಿಸಿತು.

Advertisement

ಮಡಿಕೆ ಒಡೆಯವ ಸ್ಪರ್ಧೆಯಲ್ಲಿ ವಿವಿಧ ಗುಂಪುಗಳು ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಮಡಿಕೆ ಒಡೆದ ಯುವಕರ ಗುಂಪು ಬಹುಮಾನ ತನ್ನದಾಗಿಸಿಕೊಂಡಿತು.

ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಶಹಾಪುರದ ಹೊಸುರನ ಮರಾಠಾ ಯುವಕ ಸಂಘ ಪ್ರಥಮ ಸ್ಥಾನ ಪಡೆಯಿತು. ಸ್ಪರ್ಧೆ ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಯುವಕ ಮಂಡಳಗಳ ಯುವಕರು ಭಾಗವಹಿಸಿದ್ದರು.

ಹೊಸ ಆಟ ಪರಿಚಯಿಸಿದ ಹೆಮ್ಮೆ: ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಅಭಯ ಪಾಟೀಲ, ನಮ್ಮ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿವಿಧ ದೇಸಿ ಕ್ರೀಡೆ, ದೇಸಿ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಳಗಾವಿ ಜನತೆಗೆ ವಿನೂತನ ಸ್ಪರ್ಧೆ, ಕಾರ್ಯಕ್ರಮ ಪರಿಚಯಿಸುವ ಕಾರ್ಯ ಆಯೋಜಿಸಲಾಗುತ್ತಿದೆ. ಕೆಸರಿನ ಗದ್ದೆ ಬೆಳಗಾವಿಗರಿಗೆ ಪರಿಚಯಿಸಲಾಗಿದೆ. ಗದ್ದೆ ಓಟ, ಹಗ್ಗಜಗ್ಗಾಟ, ಮೊಸರಿನ ಮಡಿಕೆ ಒಡೆಯುವ ಸ್ಪರ್ಧೆಗಳು ಉತ್ಸಾಹದಿಂದ ನಡೆದವು ಎಂದರು.

ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ದೇಸಿ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅದನ್ನು ಉಳಿಸಿ-ಬೆಳೆಸಬೇಕಾಗಿದೆ. ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸಿ ಅದನ್ನು ನಿರಂತರ ತಿಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.

ದೀಪಕ ಹಟ್ಟಿಹೊಳಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಸಾಕಷ್ಟು ಗ್ರಾಮೀಣ ಕ್ರೀಡೆಗಳು ಇವೆ. ಈಗಿನ ಕಾಲದಲ್ಲಿ ಮೊಬೈಲ್‌, ಇಂಟರ್ನೆಟ್‌ ಕಾಲದಲ್ಲಿ ಜಲಕ್ರೀಡೆಗಳು, ಹಬ್ಬಗಳ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆದರೆ ಶಾಸಕ ಅಭಯ್‌ ಪಾಟೀಲ್‌ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗದ್ದೆಯಲ್ಲಿ ಗಡಿಗೆ ಒಡೆಯುವುದು, ಓಟದ ಸ್ಪರ್ಧೆ, ಹಗ್ಗಜಗ್ಗಾಟದ ಸ್ಪರ್ಧೆ ಆಯೋಜಿಸಿದ್ದು ಸಂತಸ ತಂದಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಜನರು ಪಾಲ್ಗೊಂಡಿದ್ದರು.

ಪೂರ್ವಜರ ಕಾಲದಿಂದ ಬಂದಿರುವ ದೇಸಿ ಕ್ರೀಡೆಗಳನ್ನು ಪರಿಚಯಿಸುವ ಕಾರ್ಯ ನಮ್ಮ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ದೇಸಿ ಕ್ರೀಡೆ ಉಳಿಸಿ-ಬೆಳೆಸುವ ಉದ್ದೇಶ ನಮ್ಮದು. ಕೆಸರಿನ ಗದ್ದೆ ಆಟದಲ್ಲಿ ಅನೇಕ ಸ್ಪರ್ಧಾಳುಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. –ಅಭಯ ಪಾಟೀಲ, ಶಾಸಕರು, ದಕ್ಷಿಣ ಮತ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next