ಹುಮನಾಬಾದ: ಬೀದರ್ ಜಿಲ್ಲೆ ಹುಮನಾಬಾದ ತಾಲೂಕಿನ ಶಮತಾಬಾದ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಎರಡು ಕ್ಷಣ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರ ಬಂದು ಚಳಿಯಲ್ಲಿ ರಸ್ತೆಯ ಮೇಲೆಯೇ ರಾತ್ರಿ ಕಳೆದರು.
ಆದರೆ, ರಿಕ್ಟರ್ ಮಾಪಕದಲ್ಲಿ ಭೂಕಂಪ ಕುರಿತು ಯಾವುದೆ ತೀವ್ರತೆ ದಾಖಲಾಗಿಲ್ಲ. ವಾರದಿಂದ ಗ್ರಾಮದಲ್ಲಿ ಆಗಾಗ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸುತ್ತಲಿನ ಪ್ರದೇಶದಲ್ಲಿ ಯಾವುದಾದರೂ ಕಾಮಗಾರಿ ನಡೆಯುತ್ತಿರಬಹುದೆಂದು ಗ್ರಾಮಸ್ಥರು ಸುಮ್ಮನಿದ್ದರು. ಆದರೆ, ಶುಕ್ರವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಸುಮಾರು ಎರಡು ಕ್ಷಣ ಭೂಮಿ ನಡುಗಿದ ಅನುಭವವಾಗಿದ್ದು, ಭಯಭೀತ ಗ್ರಾಮಸ್ಥರು ರಸ್ತೆಗೆ ಬಂದರು.
ಬಾಣಂತಿಯರು ಹಾಗೂ ಮಕ್ಕಳೂ ಸಹ ಕೊರೆಯುವ ಚಳಿಯಲ್ಲಿ ಬೆಂಕಿ ಕಾಯಿಸಿಕೊಂಡು ರಾತ್ರಿ ಕಳೆದಿದ್ದಾರೆ. ರಾತ್ರಿ ಎರಡರಿಂದ ಐದು ಗಂಟೆವರೆಗೆ ಸುಮಾರು 6 ಬಾರಿ ಭೂಕಂಪನ ಹಾಗೂ ಭೂಮಿಯಿಂದ ಸ್ಫೋಟದ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆದರೆ, ಬೀದರ ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಕಂಪ ಸಂಭವಿಸಿಲ್ಲ. ಗೌರಿಬಿದನೂರಿನ ಭೂಕಂಪ ಮಾಪನದಲ್ಲಿ ಯಾವುದೇ ತೀವ್ರತೆ ಕಂಡು ಬಂದಿಲ್ಲ ಎಂದು ಭೂಗರ್ಭ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಅತಿ ಹೆಚ್ಚು ಮಳೆ ಸುರಿದ ಭಾಗದಲ್ಲಿ ಮಳೆ ನೀರು ಇಂಗಿ ಭೂಗರ್ಭಕ್ಕೆ
ಸೇರುವ ಸಂದರ್ಭದಲ್ಲಿ ಇಂತಹ ಅನುಭವಗಳು ಉಂಟಾಗುತ್ತವೆ. ಭೂಮಿಯಲ್ಲಿನ ಕಲ್ಲುಗಳ ಮಧ್ಯದಲ್ಲಿ
ನೀರು ಸೇರಿದ ಸಂದರ್ಭದಲ್ಲಿ ಸ್ಫೋಟದ ಸದ್ದು ಹಾಗೂ ಭೂಮಿ ಕಂಪಿಸಿದ ಅನುಭವ ಆಗುತ್ತದೆ.
ಈ ಹಿಂದೆ ಜಿಲ್ಲೆಯ ತರನಳ್ಳಿ ಗ್ರಾಮದಲ್ಲಿ ಕೂಡ ಇಂತಹ ಅನುಭವ ಉಂಟಾಗಿದೆ. ಆದರೆ, ಅದು ನೈಸರ್ಗಿಕ ಬದಲಾವಣೆಯಾಗಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.