Advertisement

ಮನೆ ಬಾಗಿಲಿಗೇ ಬರಲಿದೆ ಪಿಂಚಣಿ

08:42 PM Mar 01, 2020 | Lakshmi GovindaRaj |

ಚಾಮರಾಜನಗರ: ಇನ್ನು ಮುಂದೆ ಸಾರ್ವಜನಿಕರು ತಮ್ಮ ನ್ಯಾಯೋಚಿತ ಪಿಂಚಣಿಗಾಗಿ ತಾಲೂಕು ಕಚೇರಿ, ನಾಡ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಒಂದು ಕರೆ ಮಾಡಿದರೆ ಸಾಕು ಮನೆಯಿಂದಲೇ ತಮ್ಮ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಹೌದು, ಮಾರ್ಚ್‌ 2ರಿಂದ ಜಿಲ್ಲಾದ್ಯಂತ ಅನುಷ್ಠಾನಗೊಳ್ಳಲಿರುವ ಸೇವಾ ಮಿತ್ರ ಎಂಬ ವಿನೂತನ ಯೋಜನೆಯ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಪಿಂಚಣಿ ಸೇವೆ ಒದಗಿಸುವ ಕಾರ್ಯಕ್ಕೆ ಸರ್ಕಾರ ಮುಂದಡಿ ಇಟ್ಟಿದೆ.

Advertisement

ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಪಿಂಚಣಿ ಸೌಲಭ್ಯವನ್ನು ಪಡೆಯಲು ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಮನೆ ಬಾಗಿಲಿಗೆ ಸೇವೆ ತಲುಪಿಸುವ ಮೂಲಕ ಸರ್ಕಾರ ಜನಸ್ನೇಹಿ ಹೆಜ್ಜೆಯನ್ನಿರಿಸಿದೆ. ಸೇವಾ ಮಿತ್ರ ಕಂದಾಯ ಇಲಾಖೆಯ ಯೋಜನೆಯಾಗಿದ್ದು, ಮುಖ್ಯವಾಗಿ ಅರ್ಹ ಫ‌ಲಾನುಭವಿಗಳಿಗೆ ಸುಲಭವಾಗಿ ಪಿಂಚಣಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಇನ್ನು ಮುಂದೆ ಸೇವಾ ಮಿತ್ರರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಯೋಜನೆಯಲ್ಲಿ ಫ‌ಲಾನುಭವಿಗಳು ಮನೆಯಿಂದಲೇ ಅರ್ಜಿ ಸಲ್ಲಿಸಿ, ಮನೆಯಲ್ಲಿಯೇ ಪಿಂಚಣಿ ಮಂಜೂರಾತಿ ಮಾಡಿಕೊಳ್ಳುವ ಅವಕಾಶವಿದೆ. ಇದರಿಂದ ಕಚೇರಿ ಅಲೆದಾಟ ತಪ್ಪಲಿದ್ದು, ಮಧ್ಯವರ್ತಿಗಳ ಹಾವಳಿಯಿಂದಲೂ ಮುಕ್ತಿ ಹೊಂದಬಹುದಾಗಿದೆ.

ಪಿಂಚಣಿದಾರರಿಗೆ ಸಹಾಯಕ: ಸೇವಾ ಮಿತ್ರ ಯೋಜನೆ ಮುಖ್ಯವಾಗಿ ಪಿಂಚಣಿದಾರರಿಗೆ ಸಹಾಯಕವಾಗಲಿದ್ದು, ಸಾಮಾಜಿಕ ಭದ್ರತಾ ಪಿಂಚಣಿಗಳ ಸೌಲಭ್ಯ ಲಭ್ಯವಿರಲಿದೆ. ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ಯೋಜನೆ, ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಯ ಪಿಂಚಣಿಗಾಗಿ ಅರ್ಹ ಫ‌ಲಾನುಭವಿಗಳು ಈ ಯೋಜನೆಯಡಿ ಸೇವೆ ಪಡೆಯಬಹುದಾಗಿದೆ.

ಇಲಾಖೆಯ ಅಂಕಿ- ಅಂಶಗಳ ಪ್ರಕಾರ ಪ್ರತಿ ತಿಂಗಳು ಸರಾಸರಿ ಒಂದು ಸಾವಿರ ಫ‌ಲಾನುಭವಿಗಳು ಸಾಮಾಜಿಕ ಭದ್ರತಾ ಯೋಜನೆಯಡಿ, ನೀಡಲಾಗುವ ವಿವಿಧ ಪಿಂಚಣಿಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿನೂತನ ಸೇವಾ ಮಿತ್ರ ಯೋಜನೆ ಜಾರಿಯಿಂದ ಈ ಎಲ್ಲಾ ಫ‌ಲಾನುಭವಿಗಳಿಗೆ ಅನುಕೂಲವಾಗಲಿದೆ.

Advertisement

ಸೇವೆ ಪಡೆಯುವುದು ಹೇಗೆ?: ಸೇವಾ ಮಿತ್ರ ಸೌಕರ್ಯ ಪಡೆಯಲು ಮೊದಲ ಹಂತದಲ್ಲಿ ಕಂದಾಯ ಇಲಾಖೆಯ ವಿವಿಧ ಪಿಂಚಣಿಗಳ ಸೌಲಭ್ಯ ಬಯಸುವವರು ಸಂಬಂಧಪಟ್ಟ ತಾಲೂಕಿನ ಕಂಟ್ರೋಲ್‌ ರೂಂಗೆ ಕಚೇರಿ ವೇಳೆಯಲ್ಲಿ ಕರೆ ಮಾಡಿ, ಪಿಂಚಣಿಗಾಗಿ ಮನವಿ ಮಾಡಿದರಷ್ಟೇ ಸಾಕು. ತಕ್ಷಣವೇ ಸಂಬಂಧಪಟ್ಟ ಗ್ರಾಮ ಸಹಾಯಕ (ಸೇವಾ ಮಿತ್ರ)ರು ಫ‌ಲಾನುಭವಿಗಳ ಮನೆಗೆ ಖುದ್ದು ತೆರಳಿ ಅಗತ್ಯ ದಾಖಲಾತಿಗಳನ್ನು ಪಡೆಯಲಿದ್ದಾರೆ.

ಎರಡನೇ ಹಂತದಲ್ಲಿ ಅರ್ಜಿಗಳನ್ನು ನಿಯಮಾನುಸಾರ ಶೀಘ್ರವಾಗಿ ಕಚೇರಿಯಲ್ಲಿ ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಮಂಜೂರು ಮಾಡಲಾಗುತ್ತದೆ. ನಂತರ ಸೇವಾ ಮಿತ್ರರು ಫ‌ಲಾನುಭವಿಗಳ ಮನೆಗೆ ಭೇಟಿ ನೀಡಿ, ಮಂಜೂರಾತಿ ಆದೇಶವನ್ನು ಅಭಿನಂದನೆ ಮೂಲಕ ತಲುಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಂಜೂರಾದ ಬಳಿಕ ಪಿಂಚಣಿ ನೇರವಾಗಿ ಫ‌ಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

ಸೇವಾ ಮಿತ್ರ ಯೋಜನೆಯಡಿ ಯಾವುದೇ ಪಿಂಚಣಿ ಸೌಲಭ್ಯ ಪಡೆಯಲು ಫ‌ಲಾನುಭವಿಗಳು ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಬ್ಯಾಂಕ್‌ ಪಾಸ್‌ ಪುಸ್ತಕದ ನಕಲು ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಅಂಗವಿಕಲ ವೇತನಕ್ಕಾಗಿ ಅಂಗವಿಕಲ ಪ್ರಮಾಣ ಪತ್ರ, ಮನಸ್ವಿನಿ ಸೌಲಭ್ಯಕ್ಕಾಗಿ ಅವಿವಾಹಿತರು ಅಥವಾ ವಿಚ್ಛೇದಿತರು ಎಂಬುದಕ್ಕೆ ಸ್ವಯಂ ಘೋಷಿತ ಪ್ರಮಾಣ ಪತ್ರ ಹಾಗೂ ಮೈತ್ರಿ ಯೋಜನೆಗಾಗಿ ನೋಂದಾಯಿತ ಸಂಸ್ಥೆಯಿಂದ ಪ್ರಮಾಣ ಪತ್ರ/ಅಫಿಡೇವಿಟ್‌ ಅನ್ನು ಹೆಚ್ಚುವರಿಯಾಗಿ ಸಲ್ಲಿಸಬೇಕಾಗುತ್ತದೆ. ಜತೆಗೆ ಗ್ರಾಮ ಲೆಕ್ಕಾಧಿಕಾರಿಯಿಂದ ವಾಸಸ್ಥಳ ಪ್ರಮಾಣ ಪತ್ರ ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ.

ಸೇವಾ ಮಿತ್ರನ ನಿರ್ವಹಣೆಗೆ ಜಿಲ್ಲಾ ಸಮಿತಿ: ಸೇವಾ ಮಿತ್ರದ ಯಶಸ್ವಿ ಅನುಷ್ಠಾನ ಹಾಗೂ ಸಮರ್ಪಕ ಕಾರ್ಯನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಸಮಿತಿಯನ್ನೂ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ತಹಶೀಲ್ದಾರ್‌ ನೋಡಲ್‌ ಅಧಿಕಾರಿಯಾಗಿ, ಉಪ ತಹಶೀಲ್ದಾರ್‌ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜತೆಗೆ ಗ್ರಾಮ ಲೆಕ್ಕಾಧಿಕಾರಿಗಳು ನಿಯಂತ್ರಣಾಧಿಕಾರಿಯಾಗಿ ಗ್ರಾಮ ಸಹಾಯಕರೊಂದಿಗೆ ಯೋಜನೆಯ ಪರಿಣಾಮಕಾರಿ ಜಾರಿಗೆ ಸೂಚಿಸಲಾಗಿದೆ.

ಸರ್ಕಾರದಿಂದ ಲಭಿಸುವ ವಿವಿಧ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಇರುವ ಕ್ರಮಗಳು ಹಾಗೂ ದಾಖಲಾತಿಗಳ ಸರಳೀಕರಣ ಮಾಡಲಾಗಿದೆ. ಇದರಿಂದ ಸೌಲಭ್ಯ ಪಡೆಯಲು ಸಾರ್ವಜನಿಕರಿಗಿದ್ದ ಅಡಚಣೆಯನ್ನು ಸಂಪೂರ್ಣವಾಗಿ ನಿವಾರಿಸಿದಂತಾಗಲಿದೆ.

ತಾಲೂಕು ಕಂಟ್ರೋಲ್‌ ರೂಂ ವಿವರ: ಸೇವಾ ಮಿತ್ರಕ್ಕಾಗಿ ಮನವಿ ಸಲ್ಲಿಸಲು ಆಯಾ ತಾಲೂಕಿನಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳ ಕಚೇರಿ ಸಮಯದಲ್ಲಿ ಅಂದರೆ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕಂಟ್ರೋಲ್‌ ರೂಂ ಕಾರ್ಯನಿರ್ವಹಿಸಲಿದ್ದು, ಸೇವೆ ಬಯಸುವವರಿಗೆ ನೆರವಾಗಲಿದೆ. ಚಾಮರಾಜನಗರ- ದೂ.ಸಂ: 08226-222046, ಕೊಳ್ಳೇಗಾಲ- ದೂ.ಸಂ: 08224-252042, ಗುಂಡ್ಲುಪೇಟೆ- ದೂ.ಸಂ:08229-222225, ಯಳಂದೂರು- ದೂ.ಸಂ: 08226-240029 ಹಾಗೂ ಹನೂರು- ದೂ.ಸಂ: 08224-268032 ಅನ್ನು ಸಂಪರ್ಕಿಸಿ ಸೌಲಭ್ಯ ಪಡೆಯಬಹುದಾಗಿದೆ.

ವೃದ್ಧರಾಗಿರುವ ಹಾಗೂ ವೈಯಕ್ತಿಕವಾಗಿ ನೊಂದ ಜನರ ಸಂಕಷ್ಟಗಳಿಗೆ ತಕ್ಷಣವೇ ಸ್ಪಂದಿಸಿ, ಮನೆ ಬಾಗಿಲಿಗೆ ತೆರಳಿ ಪಿಂಚಣಿ ಸೌಲಭ್ಯ ಒದಗಿಸುವುದೇ ಸೇವಾ ಮಿತ್ರ ಯೋಜನೆಯ ಉದ್ದೇಶ. ಸರ್ಕಾರದ ಆಶಯದಂತೆ ಅಶಕ್ತರಿಗೆ ಸಾಮಾಜಿಕ ಭದ್ರತೆ ನೀಡುವುದರೊಂದಿಗೆ ಘನತೆಯ ಜೀವನ ನಡೆಸಲು ಪೂರಕವಾಗಿರುವ ಸೇವಾ ಮಿತ್ರ ಯೋಜನೆಯನ್ನು ಜಿಲ್ಲೆಯ ಜನರು ಸದುಪಯೋಗ ಮಾಡಿಕೊಳ್ಳಬೇಕು.
-ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next