ಹುಬ್ಬಳ್ಳಿ: ನಗರದ ಹಳೆ ಬಸ್‌ನಿಲ್ದಾಣ ಎದುರು ನಿರ್ಮಿಸಲಾಗಿದ್ದ ಪಾದಚಾರಿ ಮೇಲ್ಸೇತುವೆ ಇನ್ನು ನೆನಪು ಮಾತ್ರ. ಅವಳಿ ನಗರ ಮಧ್ಯೆ ನಿರ್ಮಾಣವಾಗುತ್ತಿರುವ ಹು-ಧಾ ತ್ವರಿತ ಬಸ್ ಸಾರಿಗೆ ಸೇವೆ (ಎಚ್‌ಡಿಬಿಆರ್‌ಟಿಎಸ್) ಕಾಮಗಾರಿ ನಿಮಿತ್ತ ಈ ಮೇಲ್ಸೇತುವೆ ತೆರವು ಕಾರ್ಯಾಚರಣೆ ಬುಧವಾರ ಬೆಳಗಿನ ಜಾವ ಆರಂಭವಾಗಲಿದೆ.
ಪಾಲಿಕೆ ಅನುಮತಿ ಮೇರೆಗೆ ಗುತ್ತಿಗೆದಾರ ಪ್ರಕಾಶ ಮಲ್ಲಾರೆಡ್ಡಿ ಎಂಬವರು ಈ ಮೇಲ್ಸೇತುವೆಯನ್ನು 2006ರಲ್ಲಿ ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ (ಬಿಒಟಿ) ಅಡಿ ನಿರ್ಮಿಸಿದ್ದರು. ಆಗ ಅವರಿಗೆ 15 ವರ್ಷಗಳ ಒಪ್ಪಂದದ ಮೇರೆಗೆ ಅಂದಿನ ಪಾಲಿಕೆಯ ಆಯುಕ್ತ ಪಿ. ಮಣಿವಣ್ಣನ್ ಕಾಮಗಾರಿಗೆ ಪರವಾನಗಿ ನೀಡಿದ್ದರು. ಆದರೀಗ ಹಳೆಯ ಬಸ್‌ನಿಲ್ದಾಣದ ಎದುರು ಬಿಆರ್‌ಟಿಎಸ್ ಬಸ್ ತಂಗುದಾಣ ಹಾಗೂ ಮಿಕ್ಸಡ್ ಆμàಸ್ ಲೈನ್ ನಿರ್ಮಿಸಲಾಗುತ್ತಿದೆ.
ಬಿಒಟಿ ಆಧಾರದಡಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆಯು ಮಲ್ಲಾರೆಡ್ಡಿ ಅವರಿಗೆ 2005ರಲ್ಲಿ ಟೆಂಡರ್ ಮೂಲಕ ಪರವಾನಗಿ ನೀಡಿತ್ತು. ನಂತರ 2006ರಲ್ಲಿ ಇದಕ್ಕೆ ನಿರ್ಮಾಣ ಮುಕ್ತಾಯ (ಸಿಸಿ) ಪ್ರಮಾಣಪತ್ರ ಕೊಟ್ಟಿತ್ತು. ನವೆಂಬರ್‌ನಲ್ಲಿ (ದೀಪಾವಳಿ) ಮೇಲ್ಸೇತುವೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿತ್ತು.
ಕೋರ್ಟ್ ಮೆಟ್ಟಿಲು ಏರಿದ್ದ ಗುತ್ತಿಗೆದಾರ: ಬಸ್ ನಿಲ್ದಾಣದ ಎದುರು ಬಿಆರ್‌ಟಿ ಅಡಿ ನಿರ್ಮಿಸಲಾಗಿದ್ದ ಮೇಲ್ಸೇತುವೆಯು ಒಪ್ಪಂದದ ಪ್ರಕಾರ 2011ಕ್ಕೆ ಮುಕ್ತಾಯಗೊಳ್ಳುವುದಿತ್ತು. ಅಲ್ಲದೆ ಗುತ್ತಿಗೆದಾರರು ಒಪ್ಪಂದದ ಪ್ರಕಾರ ಪಾಲಿಕೆಗೆ ಭರಣ ಮಾಡಬೇಕಿದ್ದ ಕರವನ್ನು ಕಳೆದ ವರ್ಷದ ವರೆಗೂ ಪಾವತಿಸುತ್ತ ಬಂದಿದ್ದರು.
ಆದರೀಗ ಬಿಆರ್‌ಟಿಎಸ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಇಲ್ಲಿ ಬಸ್ ತಂಗುದಾಣ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಪಾದಚಾರಿ ಮೇಲ್ಸೇತುವೆ ತೆರವುಗೊಳಿಸಲು ಬಿಆರ್‌ಟಿಎಸ್ ಮುಂದಾಗಿತ್ತು. ಇದನ್ನು ಆಕ್ಷೇಪಿಸಿ ಗುತ್ತಿಗೆದಾರರು ತಡೆಯಾಜ್ಞೆಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಇದನ್ನು ತಿರಸ್ಕರಿಸಿತ್ತು.
ಕೆಲವರ ಆಶ್ರಯ ತಾಣ: ಪಾದಚಾರಿ ಮೇಲ್ಸೇತುವೆ ಕೆಲವು ಭಿಕ್ಷುಕರಿಗೆ ಆಶ್ರಯ ತಾಣವಾಗಿತ್ತು. ರಾತ್ರಿ ಹೊತ್ತು ಭದ್ರತಾ ಸಿಬ್ಬಂದಿ ಇಲ್ಲದ್ದರಿಂದ ಇಲ್ಲಿಯೇ ಕಾಲ ಕಳೆಯುತ್ತಿದ್ದರು. ಕತ್ತಲಾವರಿಸುತ್ತಿದ್ದಂತೆ ಕೆಲ ಕುಡುಕರು ಇಲ್ಲಿಯೇ ಕುಳಿತು ಮದ್ಯ ಸೇವಿಸುತ್ತಿದ್ದರು. ಉಪನಗರ ಪೊಲೀಸರು ಭಿಕ್ಷುಕರು, ಕುಡುಕರು, ಇನ್ನಿತರರನ್ನು ಇಲ್ಲಿಂದ ಓಡಿಸಿದ್ದರು.
* ಶಿವಶಂಕರ ಕಂಠಿ