ಹಾಸನ: ವಿನಾಶಕ್ಕೆ ಒಂದು ಕ್ಷಣ ಸಾಕು. ಆದರೆ ಸಮಾಜ, ನಾಡು, ದೇಶ ಕಟ್ಟವುದು ಬಹು ಕಷ್ಟ. ಸಾವು, ನೋವುಗಳಿಲ್ಲದ ಸಮಾಜ ನಿರ್ಮಾಣಕ್ಕೆ ಅಹಿಂಸಾ ಮಾರ್ಗವೊಂದೇ ಮಾರ್ಗ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಗೊಮ್ಮಟನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಅಹಿಂಸಾ ಮಾರ್ಗದ ಪ್ರತೀಕ ಭಗವಾನ್ ಶ್ರೀ ಬಾಹುಬಲಿ.
ರವಿ ಕಾಣದನ್ನು ಕವಿ ಕಂಡ ಎಂಬಂತೆ ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ರಚನೆಗೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪ್ರೇರಣೆ, ಮಾರ್ಗದರ್ಶನ ಪ್ರೇರಣೆಯಾಗಿದೆ.ಮುಂದಿನ ಪೀಳಿಗೆಯವರು 21ನೇ ಶತಮಾನದ ಆದಿಭಾಗವನ್ನು ಸಂಶೋಧನೆ ನಡೆಸಲು ಮೊಯಿಲಿ ಅವರು ರಚಿಸಿರುವ ಮಹಾಕಾವ್ಯವೇ ಆಕರ ಗ್ರಂಥವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರವಣಬೆಳಗೊಳದ ಜೈನಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಲಾಲ್ ಬಹುದ್ದೂರ್ ಶಾಸ್ತ್ರಿ ಸಂಸ್ಕೃತ ವಿವಿ ಪ್ರಾಕೃತ ವಿಭಾಗದ ಮುಖ್ಯಸ್ಥ ಡಾ.ಜಯಕುಮಾರ ಉಪಾಧ್ಯೆ ಅಭಿನಂದನಾ ನುಡಿಗಳನ್ನಾಡಿದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಲತಿ ವಿ. ಮೊಯ್ಲಿ, ಕಮಲಾ ಹಂಪನಾ,ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಶಾಸಕ ಸಿ.ಎನ್.ಬಾಲಕೃಷ್ಣ, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ವಿಧಾನ ಪರಿಷತ್ ಸದಸ್ಯ
ಎಂ.ಎ. ಗೋಪಾಲಸ್ವಾಮಿ ಇದ್ದರು.