ಬೆಂಗಳೂರು: “ಮುಂದಿನ ಮೂರು ವರ್ಷ 10 ತಿಂಗಳ ಅವಧಿಯಲ್ಲಿ ಯಾರೊಬ್ಬರೂ ವಿಶ್ರಾಂತಿ ಪಡೆ ಯದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸಿ ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕಿದೆ’ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ರಾಜ್ಯ ಬಿಜೆಪಿ ಕಚೇರಿ ಬಳಿ ಮಂಗಳವಾರ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಅವರು ಮಾತನಾಡಿದರು. “ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ವಿಶೇಷ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರು ಧೃತಿಗೆಡುವ ಅಗತ್ಯ ವಿಲ್ಲ. ಅವರ ಹೆಗ ಲಿಗೆ ಹೆಗಲು ಕೊಟ್ಟು, ಅವರ ಜೊತೆಗೂಡಿ ಸಂಘ ಟನೆ ಬಲ ಪಡಿಸಲು ಸಹಕಾರ ನೀಡುವುದಾಗಿ’ ತಿಳಿಸಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರದ ಪೈಕಿ 26 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದು ರಾಜ್ಯದ ಇತಿಹಾಸದಲ್ಲೇ ದಾಖಲೆ. ಕಾರ್ಯಕರ್ತರ ಪರಿಶ್ರಮದಿಂದ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಯಿತು. ಹಾಗಾಗಿ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಂಡು ಸಂಘಟನೆ ಬಲಪಡಿಸಲು ಮುಂದಾಗಬೇಕು ಎಂದರು. ಪ್ರಧಾನಿ ಮೋದಿಯವರು ಯಾವಾಗ ಕಾಂಗ್ರೆಸ್ ಮುಕ್ತ ಭಾರತ ಎಂಬ ಕಲ್ಪನೆ ನೀಡಿದರೋ ಸಹಜವಾಗಿಯೇ ದೇಶದ ಉದ್ದಗಲಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಇದೀಗ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನವೂ ಸಿಗದಷ್ಟು ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪಿದ್ದು, ನಾಯಕತ್ವವಿಲ್ಲದೆ ತಬ್ಬಲಿಗಳಂತೆ ಅಲೆದಾಡುತ್ತಿರುವುದನ್ನು ಕಾಣಬಹುದು ಎಂದು ವ್ಯಂಗ್ಯವಾಡಿದರು. ನಾನು ಮುಖ್ಯಮಂತ್ರಿಯಾಗಿ ಸೋಮವಾರಕ್ಕೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಡೆಗೆ ಗಮನ ನೀಡಿದ್ದೇನೆ. ಒಳ್ಳೆಯ ಸಂಪುಟವಿರುವುದರಿಂದ ಎಲ್ಲರ ಸಹಕಾರದೊಂದಿಗೆ ಕಾರ್ಯಕರ್ತರ ಅಪೇಕ್ಷೆ ತಲುಪಿ, ಸಂಘಟನೆ ಬಲಪಡಿಸಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ನಿರೀಕ್ಷೆ ಮೀರಿ ನೆರವು ಸಿಗುವ ವಿಶ್ವಾಸ: ರಾಜ್ಯದಲ್ಲಿ ಕಾಣಿಸಿಕೊಂಡ ಭೀಕರ ಅತಿವೃಷ್ಟಿಯಿಂದ ಲಕ್ಷಾಂತರ ಮನೆಗಳು ನೆಲಸಮವಾಗಿದ್ದು, ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿ ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಎಲ್ಲರ ನಿರೀಕ್ಷೆ ಮೀರಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ಸಿಗುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು. ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಂತೆ ಕೇಂದ್ರದ ಅಧಿಕಾರಿಗಳ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿದೆ. ಹಾಗಾಗಿ ಕೇಂದ್ರದಿಂದ ಹೆಚ್ಚು ಆರ್ಥಿಕ ನೆರವು ಸಿಗುವ ನಿರೀಕ್ಷೆ ಇದೆ ಎಂದರು.
ಪ್ರವಾಸ ಕೈಗೊಳ್ಳುತ್ತೇನೆ: ನೆರೆ ಸಂತ್ರಸ್ತರ ಪುನರ್ವಸತಿಗೆ ಕೈಗಾರಿಕೋದ್ಯಮಿಗಳು ಉದಾರವಾಗಿ ನೆರವು ನೀಡುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯಕ್ಕೆ ನೆರವಾಗುವುದು ನಮ್ಮ ಎಲ್ಲ ಶಾಸಕರು, ಸಂಸದರ ಕರ್ತವ್ಯ. ಎಲ್ಲ ಕಾರ್ಯಕ್ರಮ ನಿಂತರೂ ಸರಿ, ಸಂತ್ರಸ್ತರಿಗೆ ನೆರವಾಗಬೇಕಿದೆ ಎಂದು ಹೇಳಿದರು.