ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದರಲ್ಲಿ ಯಾವುದೇ ಹುರುಳಿಲ್ಲ. ಪಕ್ಷ, ರಾಜಕೀಯದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ನಾನು ಯಾವುದೇ ಪಕ್ಷದ ಭಾಗವಾಗಿರಲು ಬಯಸುವುದಿಲ್ಲ ಎಂದು ಚಿಂತಕ, ವಾಗ್ಮಿ, ನಮೋ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣ, ಅಂತರ್ಜಾಲ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಉದಯವಾಣಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಮಾತನಾಡಿಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.
ಅಧಿಕಾರ ಇಲ್ಲದೆ ರಾಜ್ಯದಲ್ಲಿ ನಾನು ಮಾಡಬೇಕಾದ ಸಾಕಷ್ಟು ಕಾರ್ಯಗಳಿವೆ. ಅದನ್ನು ಮಾಡುವತ್ತ ಗಮನಹರಿಸಿದ್ದೇನೆ. ನಾನು ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ನಮೋ ಬ್ರಿಗೇಡ್‌ನಿಂದ ಉಡುಪಿಗೆ ಸೂಲಿಬೆಲೆ ಅವರಿಗೆ ಟಿಕೇಟ್ ನೀಡಬೇಕು ಎನ್ನುವ ಅಭಿಪ್ರಾಯ ಹೊಸದಿಲ್ಲಿಯಿಂದಲೇ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾಗಿರುವ ಮಾತು.
ಬಿಜೆಪಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲ್ಲ ಬಲ್ಲ ನಾಯಕರಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಉಡುಪಿಯಲ್ಲಿ ಈ ಹಿಂದೆ ನಡೆದ ಕನಕ ನಡೆ ಚುನಾವಣಾ ಪೂರ್ವ ತಯಾರಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಉದ್ದೇಶಕ್ಕೊಸ್ಕರ ಈ ನಡೆ ನಡೆಸಿರುವುದಲ್ಲ. ಸಮಾಜವನ್ನು ಪ್ರಜ್ಞಾವಂತಿಕೆಯತ್ತ ಮುನ್ನಡೆಸಬೇಕೆನ್ನುವ ದೃಷ್ಟಿ ಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿಂದೆಯೂ ಉ. ಕ. ಹಾಗೂ ಉಡುಪಿ ಲೋಕಸಭಾ ಅಭ್ಯರ್ಥಿಯಾಗಲು ಪಕ್ಷ ಹಾಗೂ ಸಂಘದಿಂದ ಆಹ್ವಾನ ಬಂದಿತ್ತಾದರೂ ನಾನದನ್ನು ತಿರಸ್ಕರಿಸಿದ್ದೇನೆ ಎಂದರು.