ಮೈಸೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರಿ ಕಾಂಗ್ರೆಸ್‌ನ ಯಾವುದೇ ಶಾಸಕರು ಪಕ್ಷ ತೊರೆಯಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದರುವ ಅವರು, ಜೂ.1ರಂದು ಮುಖ್ಯಮಂತ್ರಿಯಾಗು ವುದಾಗಿ ಹೇಳಿರುವ ಯಡಿಯೂರಪ್ಪ ಅಂದು ಮುಖ್ಯಮಂತ್ರಿಯಾಗದಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಘೋಷಣೆ ಮಾಡಲಿ ಎಂದು ತಿರುಗೇಟು ನೀಡಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಸೋಮವಾರ ಮೈಸೂರಿಗೆ ಆಗಮಿಸಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದರು. ಲೋಕಸಭೆ ಚುನಾ ವಣೆಗೂ ರಾಜ್ಯಸರ್ಕಾರಕ್ಕೂ ಸಂಬಂಧವಿಲ್ಲ. ಕೇಂದ್ರ ದಲ್ಲಿ ಯಾರು ಸರ್ಕಾರ ಮಾಡಬೇಕು ಎಂದು ಜನ ಮತ ನೀಡಿದ್ದಾರೆ. ಯಾರು ಸರ್ಕಾರ ಮಾಡಬೇಕೆಂದು 2018ರಲ್ಲೇ ಜನ ಮತ ನೀಡಿ ಆಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯಸರ್ಕಾರದ ಮೇಲೆ ಪರಿಣಾಮ ಬೀರಲ್ಲ ಎಂದರು.
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಈಗಲೂ ಅನುಮಾನ ಇದ್ದೇ ಇದೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಆದರೆ ಜನರ ತೀರ್ಪನ್ನು ಅಲ್ಲಗಳೆಯಲು ಹೋಗಲ್ಲ. ಇವಿಎಂ ಬಗ್ಗೆ ಪರಿಣಿತರ ಜತೆ ಮಾತನಾಡಬೇಕೆಂದು ಹೇಳಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಜತೆಯಲ್ಲಿ ಕಾಂಗ್ರೆಸ್ ಶಾಸಕರು ಕಾಣಿಸಿಕೊಂಡಿರುವುದು ಕಾಕತಾಳೀಯ. ಶಾಸಕ ಸುಧಾಕರ ಮನೆಗೆ ರಮೇಶ್ ಜಾರಕಿಹೊಳಿ ಹೋದಾಗ ಅವರು ಎಸ್.ಎಂ.ಕೃಷ್ಣ ಅವರ ಮನೆಗೆ ಹೊರಟಿದ್ದರು, ಹೀಗಾಗಿ ಸುಧಾಕರ್ ಜತೆಯಲ್ಲಿ ರಮೇಶ್ ಕೂಡ ಕೃಷ್ಣ ಅವರ ಮನೆಗೆ ಹೋಗಿದ್ದಾರೆ. ಅದೇ ಸಮಯಕ್ಕೆ ಯಡಿಯೂರಪ್ಪ, ಆರ್.ಅಶೋಕ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಎಸ್.ಎಂ.ಕೃಷ್ಣ ಅವರ ಮನೆಗೆ ಹೋಗಿದ್ದಾರೆ ಅಷ್ಟೇ, ಇದೊಂದು ಕಾಕತಾಳೀಯ ಎಂದರು.
ರಾಜ್ಯ ಸಚಿವ ಸಂಪುಟವನ್ನು ಪುನಾರಚನೆ ಮಾಡು ವುದಿಲ್ಲ. ಸದ್ಯ ಮೂರು ಸಚಿವ ಸ್ಥಾನಗಳು ಖಾಲಿ ಯಿದ್ದು, ಈ ಪೈಕಿ ಶಿವಳ್ಳಿ ನಿಧನದಿಂದ ಖಾಲಿಯಾಗಿ ರುವ ಕಾಂಗ್ರೆಸ್‌ನ ಒಂದು ಸ್ಥಾನವನ್ನು ಶೀಘ್ರ ಭರ್ತಿ ಮಾಡುತ್ತೇವೆ. ಎರಡು ಸ್ಥಾನ ಖಾಲಿ ಉಳಿಸಿಕೊಂ ಡಿರುವ ಜೆಡಿಎಸ್‌ನವರು ಯಾವಾಗ ಭರ್ತಿ ಮಾಡು ತ್ತಾರೋ ಗೊತ್ತಿಲ್ಲ. ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಲು ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂಬುದೆಲ್ಲ ಸುಳ್ಳು, ಆ ರೀತಿಯ ಯಾವುದೇ ಯೋಜನೆ ನಮ್ಮ ಮುಂದಿಲ್ಲ ಎಂದರು.