ಮಲ್ಪೆ: ವಾರದ ಹಿಂದೆ ನಾಪತ್ತೆಯಾಗಿರುವ ಬೆಂಗಳೂರಿನ ಆದಿತ್ಯ ಟಿ. (15) ಎಂಬಾತನನ್ನು ಹುಡುಕಿಕೊಂಡು ಆತನ ಮನೆಯವರು ಮಲ್ಪೆ ಠಾಣೆಗೆ ಬಂದಿದ್ದಾರೆ.
ಯಲಹಂಕದ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್‌ನ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಆದಿತ್ಯ ಬೆಂಗಳೂರು ಆರ್.ಟಿ. ನಗರದ ತಿಮ್ಮ ರಾಯಪ್ಪ ಮತ್ತು ಆನಿತಾ ಅವರ ಪುತ್ರ. ಮೇ 29ರಂದು ಮಧ್ಯಾಹ್ನ ಕೂದಲು ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಹೋದವನು ವಾಪಸ್ ಬಂದಿಲ್ಲ. ಈ ಬಗ್ಗೆ ಬೆಂಗಳೂರಿನ ಆರ್.ಟಿ. ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಮನೆಯವರು ಆತನ ಮೊಬೈಲನ್ನು ಪರೀಕ್ಷಿಸಿದಾಗ ಆತ ಮಂಗಳೂರು, ಉಡುಪಿ ನಗರದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಆತ ಮಂಗಳೂರು, ಉಡುಪಿ ಕಡೆ ಹೋಗಿರಬಹುದೆಂದು ಶಂಕಿಸಿ ರವಿವಾರ ಇಲ್ಲಿಗೆ ಬಂದಿರುತ್ತಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಸಮಾಜ ಸೇವಕ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದು, ಈಶ್ವರ್ ಮಲ್ಪೆ ಅವರು ಆತನ ಹುಡುಕಾಟ ನಡೆಸಿದ್ದಾರೆಂದು ತಿಳಿದು ಬಂದಿದೆ.