Advertisement

ಅರಮನೆ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ ಮರೀಚಿಕೆ

12:42 PM Mar 20, 2018 | |

ಮೈಸೂರು: ಪ್ರವಾಸಿಗರ ಸ್ವರ್ಗವೆಂದೇ ಕರೆಯಲ್ಪಡುವ ಮೈಸೂರಿನ ಪ್ರಮುಖ ಪ್ರವಾಸಿ ತಾಣ ವಿಶ್ವವಿಖ್ಯಾತ ಅರಮನೆಗೆ ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರು ನಗರಕ್ಕಾಗಮಿಸುತ್ತಾರೆ. ಆದರೆ, ದುರಾದೃಷ್ಟವಶಾತ್‌ ಅರಮನೆಗೆ ಹೊಂದುಕೊಂಡಂತಿರುವ ಪಾದಚಾರಿ ಮಾರ್ಗದಲ್ಲಿ ಯಾವುದೇ ಕಸದಬುಟ್ಟಿ(ಡಸ್ಟ್‌ಬಿನ್‌)ಗಳಿಲ್ಲದ ಪರಿಣಾಮ ಸಾರ್ವಜನಿಕರು, ಪ್ರವಾಸಿಗರು ಪಾದಚಾರಿ ಮಾರ್ಗದಲ್ಲೇ ತ್ಯಾಜ್ಯಗಳನ್ನು ಬಿಸಾಡುವಂತಾಗಿದೆ.

Advertisement

ನಗರದ ಪ್ರಮುಖ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಜನರು ಕಸ ಸುರಿಯುವುದು ಸಹಜವಾಗಿದೆ. ಹೀಗಾಗಿಯೇ ದೇಶದ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಸ್ಥಾನಪಡೆದಿರುವ ಮೈಸೂರಿನ ಸ್ವಚ್ಛತೆ ಕಾಪಾಡಲು ಸಾಕಷ್ಟು ಮುತುವರ್ಜಿವಹಿಸಿರುವ ಮೈಸೂರು ಮಹಾನಗರ ಪಾಲಿಕೆ ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಡಸ್ಟ್‌ಬಿನ್‌ಗಳನ್ನು ಇರಿಸಿದೆ.

ಆದರೆ, ಅರಮನೆಯ ಸುತ್ತಲೂ ಡಸ್ಟ್‌ಬಿನ್‌ಗಳಿಲ್ಲದಿರುವುದರಿಂದಾಗಿ ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು, ಸಾರ್ವಜನಿಕರು ನೀರಿನ ಬಾಟಲ್‌, ತಿಂಡಿ ತಿನಿಸುಗಳ ಚೀಲ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಪಾದಚಾರಿ ಮಾರ್ಗದಲ್ಲೇ ಬಿಸಾಡುತ್ತಿದ್ದಾರೆ. ಇನ್ನೂ ಅರಮನೆಯ ಹೊರ ಆವರಣದಲ್ಲಿರುವ ಕೋಟೆ ಬಿಸಿಲು ಮಾರಮ್ಮನ ದೇವಸ್ಥಾನ ಹಾಗೂ ಬಲರಾಮ ದ್ವಾರದ ಸುತ್ತಲೂ ಸಾಕಷ್ಟು ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಪೇಪರ್‌ ಕಪ್‌ಗ್ಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ನೋಡಬಹುದಾಗಿದೆ.

ಕಸದ ಬುಟ್ಟಿ ಇಟ್ಟರು ದೂಷಿಸುವ ಪಾಲಿಕೆ: ನಗರದ ಪಾಲಿಕೆಯಿಂದ ಅರಮನೆ ಆವರಣದ ಸುತ್ತಲೂ ಡಸ್ಟ್‌ಬಿನ್‌ಗಳನ್ನು ಇರಿಸದಿರುವುದರಿಂದ ಪ್ರತಿನಿತ್ಯವೂ ಮನೆಯಿಂದ ಕಸದಬುಟ್ಟಿಗಳನ್ನು ತರುತ್ತಿದ್ದೇವೆ. ಹೀಗಿದ್ದರೂ ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ಸಂಗ್ರಹವಾಗುವುದಕ್ಕೆ ಪಾಲಿಕೆ ನಮ್ಮನ್ನೇ ದೂಷಿಸುತ್ತಿದೆ ಎಂದು ಅರಮನೆ ವರಾಹ ದ್ವಾರದಲ್ಲಿ ಆಹಾರ ಪದಾರ್ಥ, ತಿಂಡಿತಿನಿಸುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಹೇಳುತ್ತಾರೆ.

ಇನ್ನೂ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾಕ್ಷಿ ಎಂಬುವರ ಹೇಳುವಂತೆ, ಬೆಂಗಳೂರಿಗೆ ಹೋಲಿಸಿದರೆ ಮೈಸೂರು ಅತ್ಯಂತ ಸ್ವಚ್ಛನಗರಿಯಾಗಿದೆ. ಆದರೆ ಪಾಲಿಕೆ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸದಬುಟ್ಟಿಗಳನ್ನು ಇರಿಸಲು ನಿರ್ಲಕ್ಷಿಸಿರುವಂತೆ ಕಾಣುತ್ತಿದೆ. ನಗರದ ದೇವರಾಜ ಅರಸ್‌ರಸ್ತೆ, ಸಯ್ನಾಜಿರಾವ್‌ ರಸ್ತೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಡಸ್ಟ್‌ಬಿನ್‌ಗಳು ಇಟ್ಟಿರುವುದು ಕಂಡುಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅಗತ್ಯ ಸ್ಥಳಕ್ಕೆ ಹೆಚ್ಚುವರಿ ಡಸ್ಟ್‌ಬಿನ್‌: ಈ ಬಗ್ಗೆ ಮಾಹಿತಿ ನೀಡಿದ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌, ಪ್ರಸ್ತುತ ನಗರ ವಾಣಿಜ್ಯ ಪ್ರದೇಶಗಳಲ್ಲಿ ಮಾತ್ರವೇ ಪಾಲಿಕೆ ವತಿಯಿಂದ ಡಸ್ಟ್‌ಬಿನ್‌ಗಳನ್ನು ಇರಿಸಲಾಗಿದ್ದು, ಪ್ರಸ್ತುತ ನಗರದ ವಿವಿಧ ವಾಣಿಜ್ಯ ಪ್ರದೇಶಗಳಲ್ಲಿ 110 ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಇದರೊಂದಿಗೆ ಹೊಸದಾಗಿ 120 ಡಸ್ಟ್‌ಬಿನ್‌ಗಳನ್ನು ಖರೀದಿಸಲು ಪಾಲಿಕೆಯಿಂದ ಟೆಂಡರ್‌ ಕರೆಯಲಾಗುತ್ತಿದೆ. ಇದರ ಪರಿಣಾಮ ನಗರದ ಅಗತ್ಯ ಸ್ಥಳಗಳಲ್ಲಿ ಶೀಘ್ರದಲ್ಲೇ ಕಸದಬುಟ್ಟಿಗಳನ್ನು ಇಡಲಾಗುವುದು ಎಂದು ತಿಳಿಸಿದ್ದಾರೆ.

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next