Advertisement
ಮಾದರಿ ವಿನ್ಯಾಸ: ಮೈಸೂರು ಅರಮನೆ ಆವರಣದಲ್ಲಿ ನಾಲ್ಕನೇ ವರ್ಷದ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಮೈಸೂರು ಅರಮನೆ ಮಂಡಳಿವತಿಯಿಂದ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸುಮಾರು 20 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂ ಕುಂಡಗಳು, ಬೋನ್ಸಾಯ್ ಗಿಡಗಳು, ಅಂದಾಜು 4 ಲಕ್ಷ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್‌ಗಳಿಂದ ಅಲಂಕರಿಸಲಾಗುತ್ತಿದೆ.
Related Articles
Advertisement
ತಾಜಾ ಹಣ್ಣು, ತರಕಾರಿ ಬಳಕೆ: ಪ್ರಾಣಿ ಸಂಗ್ರಹಾಲಯವನ್ನು ಹೋಲುವ ರೀತಿ ನವಿಲು, ಅನಕೊಂಡ, ಜಿಂಕೆ, ಹುಲಿ, ಮರಿ ಆನೆ, ಜೀಬ್ರಾ ಸೇರಿದಂತೆ ವಿವಿಧ ಪ್ರಾಣಿಗಳನ್ನು ಹೂವು-ತರಕರಿಗಳಿಂದ ಅಲಂಕರಿಸಲಾಗುವುದು. ವರಹಾ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ವರ್ಟಿಕಲ್ ಗಾರ್ಡನ್‌ನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಮಾದರಿ ಚಿತ್ರವನ್ನು ಅಲಂಕಾರಿಕ ಹೂವು,
ಎಲೆ ಜಾತಿಯ ಗಿಡಗಳಿಂದ ಅಲಂಕರಿಸಲಾಗುವುದು. ಫಲಪುಷ್ಪ ಪ್ರದರ್ಶನದಲ್ಲಿನ ಮಾದರಿ ಚಿತ್ರಗಳ ತಾಜಾತನ ಕಾಪಾಡಲು ಒಂದು ಬಾರಿ ಹೂವು ಮತ್ತು ತರಕಾರಿಗಳನ್ನು ಬದಲಾಯಿಸಲಾಗುವುದು. ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಸುದ್ದಿಗೋಷ್ಠಿಯಲ್ಲಿದ್ದರು.
ಅರಮನೆ ದೀಪಾಲಂಕಾರ: ಫಲಪುಷ್ಪ ಪ್ರದರ್ಶನದ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7 ರಿಂದ 9ಗಂಟೆವರೆಗೆ ಮಾಡಲಾಗುತ್ತದೆ. ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಔಷಧಯುಕ್ತ ಸಸ್ಯಗಳಾದ ಆಲೋವೇರ, ತುಳಸಿ, ವೀಳ್ಯದೆಲೆಗಳನ್ನು ವಿತರಿಸಲಾಗುವುದು.
ಫಲ ಪುಷ್ಪ ಪ್ರದರ್ಶನ ವೀಕ್ಷಿಸುವ ವೇಳೆ ಜಯ ಚಾಮರಾಜೇಂದ್ರ ಒಡೆಯರ್‌ರವರು ರಚಿಸಿರುವ ಕೀರ್ತನೆಗಳು ಮತ್ತು ಶಾಸ್ತ್ರೀಯ ಸಂಗೀತವನ್ನು ಅಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಛಾಯಾಚಿತ್ರ ಮತ್ತು ವಿಡಿಯೋ ಪ್ರದರ್ಶನ, ಬೊಂಬೆಗಳ ಪ್ರದರ್ಶನವು ನಡೆಯಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ: 28 ರಿಂದ 30ರವರೆಗೆ ಅರಮನೆ ಆವರಣದಲ್ಲಿ ಸಂಜೆ 7 ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 28ರಂದು ಚಲನಚಿತ್ರ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ತಂಡದಿಂದ ಸಂಗೀತ ಸಂಭ್ರಮ ಕಾರ್ಯಕ್ರಮ. 29ರಂದು ಪ್ರವೀಣ್ ಗೋಡ್ಖಿಂಡಿ ಮತ್ತು ತಂಡದವರಿಂದ ಫ್ಯೂಷನ್ ಕಾರ್ಯಕ್ರಮ. 30ರಂದು ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರಿಂದ ಸುಮಧುರ ಕನ್ನಡ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದೆ.
ಪೊಲೀಸ್ ಬ್ಯಾಂಡ್, ಪಟಾಕಿ ಸಿಡಿತ: 31ರಂದು ರಾತ್ರಿ 11 ರಿಂದ 12ಗಂಟೆವರೆಗೆ ಪೊಲೀಸ್ ಇಲಾಖೆವತಿಯಿಂದ ಕರ್ನಾಟಕ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ. ಹೊಸ ವರ್ಷಾಚರಣೆ ಪ್ರಯುಕ್ತ 12 ರಿಂದ 12.15ಗಂಟೆವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಪಟಾಕಿ ಸಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.