ನಾವು ಒಂದು ಕಡೆಯಿಂದ ಪಾಕಿಸ್ಥಾನ ಸೈನಿಕರನ್ನು ಸದೆಬಡಿಯುತ್ತಾ ಸಾಗಿದೆವು. ಅವರೇನೂ ಹೆಚ್ಚು ಪ್ರತಿರೋಧ ತೋರಲಿಲ್ಲ. ನಮಗೆ ಶರಣಾದರು. ಬಾಂಗ್ಲಾದೇಶದ ಜನರು ನಮಗೆ ನೀಡಿದ ಸಹಕಾರ ಮಾತ್ರ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.. ಭಾರತ-ಪಾಕಿಸ್ಥಾನ ಮಧ್ಯೆ 1971ರಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಭೂ ಸೇನೆಯ ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ಅಂದಿನ ಯುದ್ಧದ ಸನ್ನಿವೇಶವನ್ನು ಮೆಲುಕು ಹಾಕುತ್ತಾ ಇತಿಹಾಸದ ಪುಟಗಳಿಗೆ ಜಾರಿದರು.
ಭಾರತ-ಪಾಕಿಸ್ಥಾನ ಮಧ್ಯೆ 1971ರಲ್ಲಿ ಯುದ್ಧ ನಡೆಯಿತು. ಈ ಸಮರದಲ್ಲಿ ಬಾಂಗ್ಲಾದೇಶ ವಿಮೋಚನೆಯಾ ಯಿತು. ಈ ಯುದ್ಧಕ್ಕೆ ಈಗ 50 ವರ್ಷ. ಈ ಯುದ್ಧದಲ್ಲಿ ಕಾದಾಡಿದ ಭಾರತೀಯ ವೀರಯೋಧ ಸಿ.ಕೆ.ಕರುಂಬಯ್ಯ ಅವರಿಗೆ ಈಗ 86 ವರ್ಷ. ಮೂಲತಃ ಕೊಡಗಿನವರಾದ ಕರುಂಬಯ್ಯ ಈಗ ಮೈಸೂರು ತಾಲೂಕಿನ ಕೆ. ಹೆಮ್ಮರಹಳ್ಳಿ ಯಲ್ಲಿ ತೋಟದ ಮನೆಯಲ್ಲಿ ನೆಲೆಸಿದ್ದಾರೆ.
ಯುದ್ಧ ಭೂಮಿಯಲ್ಲಿ ಬಾಂಗ್ಲಾದೇಶದ ಪಶ್ಚಿಮದ ಕಡೆಯಿಂದ ನಮ್ಮ ಪಡೆ ಮುನ್ನುಗ್ಗಿತು. ಬಹಳ ವೇಗವಾಗಿ ನಾವು ರಣರಂಗದಲ್ಲಿ ಮುನ್ನುಗ್ಗಿದೆವು. ಜನರಲ್ ರೇನಾ ಅವರು ನಮ್ಮ ತಂಡದ ನೇತೃತ್ವ ವಹಿಸಿದ್ದರು. ಅನಂತರ ಜ| ರೇನಾ ಅವರು ಭೂ ಸೇನೆಯ ಮುಖ್ಯಸ್ಥರಾಗಿದ್ದರು. ಪಾಕಿಸ್ಥಾನದೊಂದಿಗೆ 1971 ರಲ್ಲಿ ಯುದ್ಧದ ವೇಳೆ ನಾನು ಮೇಜರ್ ಹುದ್ದೆ ಯಲ್ಲಿದ್ದೆ. ಮರಾಠ ರೆಜಿಮೆಂಟ್‌ನಲ್ಲಿದ್ದೆ. ಈ ಯುದ್ಧದಲ್ಲಿ ಭಾರತಕ್ಕೆ ಬಹಳ ದೊಡ್ಡ ಜಯ ಸಿಕ್ಕಿತು. ಪಾಕಿಸ್ಥಾನದ ಸುಮಾರು 93 ಸಾವಿರ ಸೈನಿಕರನ್ನು ಸೆರೆ ಹಿಡಿದೆವು ಎಂದು ಉದಯವಾಣಿ ಜತೆ ಮಾತನಾಡುತ್ತಾ ಯುದ್ಧದ ಸನ್ನಿವೇಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಕರುಂಬಯ್ಯ.
ಬಾಂಗ್ಲಾದೇಶದ ನಾಗರಿಕರು ನಮಗೆ ತುಂಬಾ ನೆರವಾದರು. ಆಗ ಬಾಂಗ್ಲಾದೇಶಿಯರು ಭಾರತದ ಪರವಾಗಿದ್ದರು. ಅದು ತುಂಬಾ ಕಡಿದಾದ ಪ್ರದೇಶ. ಎತ್ತರದ ಬೆಟ್ಟ, ಗುಡ್ಡಗಳು. ಬ್ರಹ್ಮಪುತ್ರಾ ನದಿ ಹರಿಯುತ್ತದೆ. ಕಣಿವೆ ಪ್ರದೇಶವದು. 1971ನೇ ಇಸವಿ ಡಿಸೆಂಬರ್ 3ರಿಂದ 15ರ ವರೆಗೆ ನಮ್ಮ ಕಾರ್ಯಾಚರಣೆ ನಡೆಯಿತು. ನದಿ, ಬೆಟ್ಟ, ದುರ್ಗಮ ಹಾದಿಯಲ್ಲಿ ಸಾಗಿದೆವು. ಬ್ರಹ್ಮಪುತ್ರಾ, ಗಂಗಾ ನದಿಯಲ್ಲಿ ದೋಣಿ ಮೂಲಕ ಆಚೆಗಿನ ದಡ ಸೇರಿದೆವು. ಕೆಲವು ಬಾರಿ ನದಿಯಲ್ಲಿ ಈಜಿಯೇ ಸಾಗಬೇಕಾಗಿತ್ತು.
ಇದನ್ನೂ ಓದಿ:ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ
ಬಾಂಗ್ಲಾದೇಶದ ಪದ್ಮಾ ನದಿ ದಂಡೆಯಲ್ಲಿರುವ ಫರೀದ್‌ಪುರ ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾಗಿತ್ತು. ಭಾರತೀಯ ಯೋಧರ ಶೌರ್ಯ, ಸಾಹಸದ ಮುಂದೆ ಶತ್ರುಪಾಳಯ ಪಾಕಿಸ್ಥಾನದ ಸೈನಿಕರ ಆಟ ನಡೆಯಲಿಲ್ಲ. ಭೂಸೇನೆಯ ಆರ್ಟಿಲರಿ ಪಡೆ ನಮ್ಮ ಹಿಂದಿನಿಂದ ಬರುತ್ತಿತ್ತು. ಸುಮಾರು 30 ಕಿ.ಮೀ. ದೂರ ಚಿಮ್ಮಿ ಬಾಂಬ್ ಹಾಕುವ ಶಸ್ತ್ರಾಸ್ತ್ರಗಳು ಆರ್ಟಿಲರಿಯಲ್ಲಿದ್ದವು. ಯುದ್ಧದ ಟ್ಯಾಂಕರ್‌ಗಳು ನಮ್ಮ ಜತೆ ಬರುತ್ತಿದ್ದವು. ನಮ್ಮ ಬಳಿ ರೈಫಲ್, ಮಷಿನ್ ಗನ್‌ಗಳು ಇದ್ದವು. ಕ್ಷಣಮಾತ್ರದಲ್ಲಿ ನೂರಾರು ಬುಲೆಟ್‌ಗಳು ಇದರಿಂದ ಹೊರ ಹಾರುತ್ತಿದ್ದವು. ಶತ್ರುರಾಷ್ಟ್ರ ಪಾಕಿಸ್ಥಾನದ ಸೈನಿಕರು ವಿಧಿಯಿಲ್ಲದೇ ನಮಗೆ ಶರಣಾದರು ಎಂದರು.
ಯುದ್ಧದಲ್ಲಿ ಕರುಂಬಯ್ಯ ಅವರು ಗಾಯಗೊಂಡರು. ಕರುಂಬಯ್ಯ ಅವರು ಪಾಕಿಸ್ಥಾನದೊಂದಿಗೆ 1971ರಲ್ಲಿ ನಡೆದ ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಸೇವೆಗಾಗಿ ಸೇನಾ ಮೆಡಲ್ ನೀಡಿ ಅವರನ್ನು ಗೌರವಿಸಲಾಗಿದೆ. ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರು ಸೇನಾ ಮೆಡಲ್ ನೀಡಿ ಗೌರವಿಸಿದ್ದಾರೆ. ಯುದ್ಧದಲ್ಲಿ ಇವರ ಬೆಟಾಲಿಯನ್ ತೋರಿದ ಧೈರ್ಯ, ಸಾಹಸಗಳಿಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
-ಕೂಡ್ಲಿ ಗುರುರಾಜ