Advertisement
45 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬರುತ್ತಾರೆ. ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ, ಅವರು ಉದರದೊಳಗಿನ ತೀವ್ರ ಸೋಂಕಿನಿಂದ ನರಳುತ್ತಿರುವ ಸೂಚನೆ ಸಿಕ್ಕಿತು. ಸೋಂಕಿನ ಮೂಲವನ್ನ ಹುಡುಕಲಿಕ್ಕಾಗಿ ರೋಗಿಯನ್ನು ಎಕ್ಸ್‌ರೇ ಪರೀಕ್ಷೆಗೆ ಒಳಪಡಿಸಿದಾಗ, ಅವರ ಉದರದಲ್ಲಿನ ಕರುಳು ಘಾಸಿಕೊಂಡು ಅದರಲ್ಲಿ ತೂತು ಉಂಟಾಗಿ ಕರುಳಿನಲ್ಲಿನ ಕಲ್ಮಶ ಹೊರಬಂದು ಸೋಂಕಿಗೆ ಕಾರಣವಾಗಿತ್ತು. ಕರುಳಿನ ಒಳಭಾಗದಲ್ಲಿಯೇ ಇದ್ದು ನೈಸರ್ಗಿಕವಾಗಿ ಮಲದ್ವಾರದ ಮೂಲಕ ಹೊರಹೋಗಬೇಕಾಗಿದ್ದ ಕಲ್ಮಶ ಉದರದ ಒಳಭಾಗದಲ್ಲಿ ಪಸರಿಸಿದರೆ ಏನಾದೀತು ಎಂಬುದನ್ನು ಯಾರಾದರೂ ಊಹಿಸಬಹುದು. ಇದೊಂದು ಪ್ರಾಣಾಂತಿಕ ಸಮಸ್ಯೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಸಮಸ್ಯೆಯ ಪರಿಹಾರ ಶಸ್ತ್ರಚಿಕಿತ್ಸೆಯಿಂದ ಮಾತ್ರ ಸಾಧ್ಯ. ಶಸ್ತ್ರಕ್ರಿಯೆ ಮಾಡದೇ ಇದ್ದಲ್ಲಿ ಸಾವು ನಿಶ್ಚಿತ.
Related Articles
Advertisement
ಮುಂದೇನಾಯಿತು ? ಅದೃಷ್ಟವಶಾತ್, ಅವರು ಹೊಟ್ಟೆನೋವು ಕಾಣಿಸಿಕೊಂಡ ಕೂಡಲೇ, ಅದಕ್ಕೂ “ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳದೇ ಆಸ್ಪತ್ರೆಗೆ ಬಂದುದರಿಂದ ಸೂಕ್ತ ಸಮಯದಲ್ಲಿ ಸಮಸ್ಯೆ ಮೂಲ ಪತ್ತೆಯಾಯಿತು. ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ವೈದ್ಯರು ರೋಗಿಗೆ ಹಾಗೂ ಅವರ ಮನೆಯವರಿಗೆ ಮನವರಿಕೆ ಮಾಡಿಕೊಟ್ಟರು. ವಿಷಯದ ಗಂಭೀರತೆಯನ್ನು ಅರಿತ ರೋಗಿ ಹಾಗೂ ಮನೆಯವರು ತಕ್ಷಣ ಶಸ್ತ್ರಕ್ರಿಯೆಗೆ ಅನುಮತಿ ನೀಡಿದರು. ಇದರಿಂದ ರೋಗಿ ಆಸ್ಪತ್ರೆಗೆ ಬಂದು ನಾಲ್ಕಾರು ಗಂಟೆಯೊಳಗಾಗಿ ಶಸ್ತ್ರಕ್ರಿಯೆ ನಡೆದೂ ಹೋಯಿತು! ಸಣ್ಣ ಕರುಳಿನ ಆದಿಭಾಗದಲ್ಲಿ ಅಲ್ಸರ್ ಕಾಯಿಲೆ ಉಲ್ಬಣಗೊಂಡು ತೂತು ಉಂಟಾಗಿತ್ತು. ಅಲ್ಲಿಂದ ಸೋರಿದ ಕಲ್ಮಶವನ್ನು ಮೊದಲಾಗಿ ಶುಚಿಗೊಳಿಸಿ ಕರುಳನ್ನು ತೊಳೆಯಲಾಯಿತು. ತದನಂತರ ಕರುಳಿನ ರಂಧ್ರವನ್ನು ಹೊಲಿಗೆಯ ಮೂಲಕ ಮುಚ್ಚಲಾಯಿತು. ರೋಗಿಯ ಆರೋಗ್ಯ ಹದಗೆಡುವ ಮೊದಲೇ ಚಿಕಿತ್ಸೆ ನಡೆದದ್ದರಿಂದ ಅವರು ಶೀಘ್ರವಾಗಿ ಚೇತರಿಸುವಂತಾಯಿತು.
ಶಸ್ತ್ರಕ್ರಿಯೆ ಮಾಡಿದ ಮೂರ್‍ನಾಲ್ಕು ದಿನದೊಳಗೆ ರೋಗಿ ಚೇತರಿಸಿ ಆಹಾರ ಸೇವಿಸಲಾರಂಭಿಸಿದರೂ, ಅಲ್ಸರ್ ಕಾಯಿಲೆಯ ಚಿಕಿತ್ಸೆ ಇನ್ನೂ 4 ವಾರಗಳ ಕಾಲ ಮುಂದುವರಿಸಬೇಕೆಂದು ತಿಳಿಸಿ, ಅವರಿಗೆ ಸೂಕ್ತ ಮಾತ್ರೆ ಹಾಗೂ ಪಥ್ಯದ ಬಗ್ಗೆ ವಿವರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಇಲ್ಲಿಗೆ “ನೋವಿನ ಮಾತ್ರೆಯ ಮಹಾತೆ¾’ ಮುಗಿಯಿತು! ಇದನ್ನು ವಿವರಿಸಿದ ಕಾರಣವೇನೆಂದರೆ, ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಿಗೂ, ಸುಲಭೋಪಾಯವೆಂದು ಬಗೆದು ಔಷಧ ಅಂಗಡಿಯಿಂದ ತಾವೇ ಖರೀದಿಸಿ “ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳುವ ಪರಿಪಾಠದ ಬಗ್ಗೆ ಜನರನ್ನು ಎಚ್ಚರಿಸುವುದು.
-ಡಾ. ಶಿವಾನಂದ ಪ್ರಭು ಸಹ ಪ್ರಾಧ್ಯಾಪಕರು,
ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರು
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ, ಕಟೀಲು