Advertisement

ಭತ್ತ ಬೆಂಬಲ ಬೆಲೆ ಘೋಷಣೆ ಅಕ್ಟೋಬರ್‌ನಲ್ಲೇ ಆಗಲಿ

12:59 AM Oct 13, 2021 | Team Udayavani |

ಉಡುಪಿ: ಈ ಬಾರಿ ಭತ್ತದ ಬೇಸಾಯ ಗುರಿ ಮೀರಿ ನಡೆದಿದೆ. ಕಟಾವು ಸಮೀಪಿಸಿದ್ದು, ಕೆಲವೆಡೆ ಆರಂಭ ಆಗಿದೆ. ಆದರೆ ಸರಕಾರದಿಂದ ಬೆಂಬಲ ಬೆಲೆ ಘೋಷಣೆ ನವೆಂಬರ್‌-ಡಿಸೆಂಬರ್‌ ವೇಳೆ ಆಗುವುದೇ ಸಮಸ್ಯೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿ
ಯಲ್ಲಿದ್ದು, ಶೀಘ್ರ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ನಿರ್ಣಯ ತಳೆಯಬೇಕಿದೆ.

Advertisement

ಪ್ರತೀ ಬಾರಿ ಸರಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ವೇಳೆಗೆ ಕರಾವಳಿಯಲ್ಲಿ ರೈತರು ಕಟಾವು ಮಾಡಿದ ಭತ್ತವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಆಗಿರುತ್ತದೆ.

ಪ್ರತೀ ಬಾರಿ ರೈತ ಸಂಘಟನೆಗಳು ಕರಾವಳಿಗೆ ಪ್ರತ್ಯೇಕವಾಗಿ ಯಾದರೂ ಕನಿಷ್ಠ ಬೆಂಬಲ ಬೆಲೆಯನ್ನು ಅಕ್ಟೋಬರ್‌ನಲ್ಲಿಯೇ ಘೋಷಿಸಬೇಕು ಎಂದು ಮುಖ್ಯಮಂತ್ರಿ, ಕೃಷಿ ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದು ಮತ್ತು ಆ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ವಾಗುವುದಕ್ಕಷ್ಟೇ ಸೀಮಿತವಾಗುತ್ತಿವೆ. ಈ ಬಾರಿಯೂ ಹೀಗಾಗಬೇಕೆ?ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ. 13ರಂದು ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ರೈತರು ಈ ಪ್ರಶ್ನೆ ಎತ್ತಿದ್ದಾರೆ.

ಕೃಷಿ ಸಚಿವರ ಸಮ್ಮತಿ
ಕೇಂದ್ರ ಸರಕಾರ ಮೊದಲು ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಬಳಿಕ ರಾಜ್ಯ ಸರಕಾರ ಅದಕ್ಕೆ ಒಂದಿಷ್ಟು ಮೊತ್ತವನ್ನು ಸೇರಿಸಿ ಘೋಷಿಸುತ್ತದೆ. ಕೇಂದ್ರ ಸರಕಾರ ಜೂ. 10ರಂದು ಭತ್ತಕ್ಕೆ ಕ್ವಿಂಟಾಲ್‌ಗೆ 1,940 ರೂ. ಬೆಂಬಲ ಬೆಲೆ ಘೋಷಿಸಿದೆ. ಕೊರೊನಾ ಮೊದಲ ಅಲೆ ಮುಗಿದ ಬಳಿಕ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಕರಾವಳಿಯ ರೈತ ಸಂಘಟನೆಗಳು ಬೆಂಬಲ ಬೆಲೆಯನ್ನು ಶೀಘ್ರ ಘೋಷಿಸಬೇಕು ಎಂದು ಮನವಿ ಮಾಡಿದ್ದವು. ಸಚಿವರು ಸಮ್ಮತಿಸಿದ್ದರು. ಆದರೆ ಈಗ ಕಟಾವು ಕೆಲವೆಡೆ ಆರಂಭವಾಗಿದ್ದು, ಕ್ವಿಂಟಾಲ್‌ ಭತ್ತಕ್ಕೆ 1,400 ರೂ.ಗಳಂತೆ ಮಾರಾಟವಾಗುತ್ತಿದೆ. ಮಳೆಯೂ ಬಂದಿರುವ ಕಾರಣ ಖರೀದಿದಾರರು ತೇವಾಂಶ ತೇಮಾನು ಶೇ. 5ರಿಂದ ಶೇ. 10ರಷ್ಟು ಕಡಿತಗೊಳಿಸುತ್ತಾರೆ. ಮಂಗಳವಾರ ಇನ್ನಷ್ಟು ಮಳೆ ಸುರಿದಿದ್ದು, ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇರುವುದರಿಂದ ನಷ್ಟ ಮತ್ತಷ್ಟು ಹೆಚ್ಚಲಿದೆ.

ನಡೆದಿದೆ ಜಿಲ್ಲಾಮಟ್ಟದ ಸಭೆ
ಜಿಲ್ಲಾಡಳಿತವು ಬೆಂಬಲ ಬೆಲೆಯನ್ನು ಕೊಡಿಸುವಲ್ಲಿ ಹಿಂದಿಗಿಂತ ಒಂದಿಷ್ಟು ಹೆಚ್ಚು ಉತ್ಸಾಹವನ್ನು ತೋರಿಸಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಬೆಂಬಲ ಬೆಲೆ ಯೋಜನೆ ಸಮಿತಿ ಒಂದು ಸಭೆ ನಡೆಸಿದೆ. ಇನ್ನು ಒಂದೆರಡು ದಿನಗಳಲ್ಲಿ ಸಮಿತಿಯ ನಿರ್ಣಯವನ್ನು ಸರಕಾರಕ್ಕೆ ಸಲ್ಲಿಸುವ ಪ್ರಸ್ತಾವವಿದೆ. ಮುಖ್ಯಮಂತ್ರಿಗಳು ಉಡುಪಿಗೆ ಆಗಮಿಸುವ ವೇಳೆ ಭತ್ತ ಖರೀದಿ ಕೇಂದ್ರಗಳ ಸ್ಥಾಪನೆ, ಬೆಂಬಲ ಬೆಲೆ ಘೋಷಣೆ ಬಗ್ಗೆ ಶೀಘ್ರ ನಿರ್ಣಯ ತಳೆಯಬೇಕಾಗಿದೆ.ಇಲ್ಲವಾದರೆ ಈ ಹಿಂದಿನಂತೆ ಜಿಡ್ಡುಗಟ್ಟಿದ ಸರಕಾರಿ ಕನಿಷ್ಠ ಬೆಂಬಲ ಬೆಲೆ ಆದೇಶ ತನ್ನ ಮಾಮೂಲಿ ನಡಿಗೆಯಲ್ಲಿ ನವೆಂಬರ್‌- ಡಿಸೆಂಬರ್‌ನಲ್ಲಿ ಹೊರಬೀಳಬಹುದು. ಆ ಹೊತ್ತಿಗೆ ಹೈರಾಣಾದ ರೈತ ಆರ್ಥಿಕ ಹೊರೆ ತಾಳಲಾರದೆ ಕನಿಷ್ಠ ಬೆಲೆಗೆ ಬೆಳೆಯನ್ನು ಮಾರಿಯಾಗಿರುತ್ತದೆ.

Advertisement

ಇದನ್ನೂ ಓದಿ:ಮಿಥಾಲಿ ರಾಜ್‌ ಶತಕದ ದಾಖಲೆ ಮುರಿದ ಆ್ಯಮಿ ಹಂಟರ್‌

ಈ ಬಾರಿ ಬೇಗನೆ ಬೆಂಬಲ
ಬೆಲೆ ಘೋಷಿಸಬೇಕು ಎಂದು ಕೃಷಿ ಸಚಿವರಿಗೆ ಮನವಿ ಮಾಡಿದ್ದೆವು. ಇತ್ತೀಚೆಗೆ “ನೀವು ಬೆಂಬಲ ಬೆಲೆಯನ್ನು ಘೋಷಿಸಲಾಗುವುದು ಎಂದಾದರೂ ಪ್ರಕಟನೆ ನೀಡಿ. ಇದರಿಂದ ಕಡಿಮೆ ದರಕ್ಕೆ ಮಾರಾಟ ಮಾಡುವ ರೈತರು ಸ್ವಲ್ಪ ದಿನ ಕಾಯಬಹುದು’ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಅವರಲ್ಲೂ ಮನವಿ ಮಾಡಿದ್ದೆವು. .
– ನವೀನ್‌ಚಂದ್ರ ಜೈನ್‌,
-ಜಪ್ತಿ ಸತ್ಯನಾರಾಯಣ ಉಡುಪ
ಅಧ್ಯಕ್ಷರು ಮತ್ತು ಪ್ರ. ಕಾರ್ಯದರ್ಶಿಗಳು, ಭಾರತೀಯ ಕಿಸಾನ್‌ ಸಂಘ, ಉಡುಪಿ ಜಿಲ್ಲೆ

ಭತ್ತಕ್ಕೆ ಬೆಂಬಲ ಬೆಲೆ ನೀಡುವ ಕುರಿತು ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದೆ. ಇನ್ನು ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಬೆಲೆಯನ್ನು ಸರಕಾರ ಘೋಷಿಸಬೇಕಾಗಿದೆ.
– ಡಾ| ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮತ್ತು ಬೆಂಬಲ ಬೆಲೆ ಯೋಜನೆ ಸಮಿತಿಯ ಸದಸ್ಯರು, ಉಡುಪಿ.

- ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next