ಹುಮನಾಬಾದ: ಜೀವನ ನಿರ್ವಹಣೆಗಾಗಿ ಕಾಯಕ ಬೇಕು. ಕಾಯಕ ಮಾಡಲು ಉತ್ತಮ ಆರೋಗ್ಯ ಬೇಕೇ ಬೇಕು. ಇವೆರಡೂ ಇದ್ದ ಮೇಲೆ ಮಾನಸಿಕ ನೆಮ್ಮದಿಗಾಗಿ ಮನೋರಂಜನೆ ಕೂಡ ಅವಶ್ಯ ಎಂದು ಗಣಿ, ಭೂವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ನಗರದ ಹೊರ ವಲಯದಲ್ಲಿ ಶುಕ್ರವಾರ ಗೆಳೆಯರ ಬಳಗ ಸ್ಥಾಪಿಸಿರುವ ಪ್ಯಾಕರ್ ಯೂತ್ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. ನಗರಕ್ಕೆ ಇಂತಹದೊಂದು ನೆಮ್ಮದಿಯ ತಾಣದ ಅವಶ್ಯಕತೆ ಇತ್ತು. ಬಹುದಿನಗಳ ನಂತರ ಆದರೂ
ಚಿಂತೆಯಿಲ್ಲ ಇಲ್ಲಿನ ಗೆಳೆಯರ ಬಳಗ ಇದನ್ನು ಕಾರ್ಯರೂಪಕ್ಕೆ ತಂದಿರುವುದು ಪ್ರಶಂಸನೀಯ. ಜಿಮ್, ಟೇಬಲ್ ಟೆನ್ನಿಸ್, ಒಳಗೊಂಡಂತೆ ವಿವಿಧರೀತಿ ಮನೋರಂಜನೆಗಳ ಜೊತೆಗೆ ತರಹೆವಾರಿ ಭೋಜನಗಳ ವ್ಯವಸ್ಥೆಯೂ ಇರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ ಚಾರಿತ್ರ್ಯಾವಂತ ಯುವ ಜನಾಂಗ ಸಿದ್ಧಪಡಿಸಲು ಹೊಸ ಸಂಘ, ಸಂಸ್ಥೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ಯಾಕರ್ ಕ್ಲಬ್ ಆ ಕೆಲಸ ನಿರ್ವಹಿಸುತ್ತದೆ ಎಂಬ ಆಶಯ ಹೊಂದಿದ್ದು, ಉತ್ತರೋತ್ತವಾಗಿ ಬೆಳೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಬಿ.ಪಾಟೀಲ ಮಾತನಾಡಿದರು. ಕ್ಲಬ್ ಅಧ್ಯಕ್ಷ ಭೀಮರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನಿರ್ದೇಶಕ ಡಾ| ವೀರಣ್ಣ ತುಪ್ಪದ್, ಪ್ರಕಾಶ ಕುಲ್ಕರ್ಣಿ, ಸಂಜೀವ ಎಸ್.ಪಾಟೀಲ, ಸೋಮಶೇಖರ ಬಿ.ಪಾಟೀಲ, ಅಭಿಷೇಕ ಆರ್.ಪಾಟೀಲ, ರೆಹೆಮಾನ್ ಇದ್ದರು. ಕಾರ್ಯದರ್ಶಿ ಡಾ| ಸಿದ್ದಲಿಂಗಪ್ಪ ಪಾಟೀಲ ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ ಗಾದಾ ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದರ್ಶಿ ಹರವಿಂದರಸಿಂಗ್ ನಿರೂಪಿಸಿದರು. ಕೋಶಾಧ್ಯಕ್ಷ ಮನೋಜ ಘವಾಳ್ಕರ್ ವಂದಿಸಿದರು.