ಬೆಳಗಾವಿ: ನಗರದಲ್ಲಿ ಈಗಾಗಲೇ ಸರಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಇರುವಾಗ ಖಾಸಗಿ ತರಕಾರಿ ಮಾರ್ಕೆಟ್ ಗೆ ಅನುಮತಿ ನೀಡಿದ ಎಪಿಎಂಸಿ ಅಧಿಕಾರಿಗಳ ನಡೆ ಪ್ರಶ್ನಿಸಿ ಎಪಿಎಂಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಪ್ರಸಂಗ ಬುಧವಾರ ನಡೆಯಿತು.
ನಗರದಲ್ಲಿ ಇತ್ತೀಚೆಗೆ ಖಾಸಗಿ ವ್ಯಾಪಾರಸ್ಥರು ಸಂಘ ರಚಿಸಿಕೊಂಡು ಜೈ ಕಿಸಾನ್ ಭಾಜಿ ಮಾರ್ಕೆಟ್ ಎಂಬ ಖಾಸಗಿ ತರಕಾರಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿ ಅಲ್ಲಿಯೇ ತರಕಾರಿ ವ್ಯಾಪಾರ-ವಹಿವಾಟು ನಡೆಸಲು ಮುಂದಾಗಿದ್ದಾರೆ. ಈ ಹೊಸ ತರಕಾರಿ ಮಾರುಕಟ್ಟೆ ಯಿಂದ ಸರಕಾರಿ ಸ್ವಾಮ್ಯದ ಎಪಿಎಂಸಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ರೈತರು ದೂರಿದರು.
ಸರಕಾರಿ ಎಪಿಎಂಸಿ ಮಾರುಕಟ್ಟೆ ಇದ್ದಾಗಲೂ ಖಾಸಗಿ ಎಪಿಎಂಸಿಗೆ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಎಪಿಎಂಸಿ ವ್ಯಾಪಾರಸ್ಥರು ಪಿಎಂಸಿ ಕಾರ್ಯದರ್ಶಿ ಡಾ| ಕೋಡಿಗೌಡ, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಪಾಟೀಲ ಹಾಗೂ ಅಧ್ಯಕ್ಷ ಯುವರಾಜ ಕದಂ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವ್ಯಾಪಾರಸ್ಥರು-ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ಸರಕಾರಿ ಆದೇಶದಂತೆ ಈಗಾಗಲೇ ಎಪಿಎಂಸಿ ವಾರ್ಷಿಕ ಲೀಸ್ ಮೇಲೆ 132 ಅಂಗಡಿಗಳನ್ನು ನೀಡಿದೆ. ಇದಕ್ಕೆ 20 ಲಕ್ಷದಿಂದ 1 ಕೋಟಿ 5 ಲಕ್ಷದವರೆಗೆ ಲೀಸ್ ಮೇಲೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ವ್ಯಾಪಾರ ಮಾಡುತ್ತಿದ್ದೇವೆ. ಆದರೆ ಈಗ ಎಪಿಎಂಸಿ ಅಧಿಕಾರಿಗಳು ಖಾಸಗಿ ತರಕಾರಿ ಮಾರುಕಟ್ಟೆಗೆ ಅನುಮತಿ ನೀಡಿದ್ದಾರೆ.ಇದರಿಂದ ಸರಕಾರಿ ಎಪಿಎಂಸಿಗಳಲ್ಲಿ ವ್ಯಾಪಾರ ನಡೆಸುವ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನಾನುಕೂಲವಾಗಿದೆ.
ಕೂಡಲೇ ಖಾಸಗಿ ಎಪಿಎಂಸಿ ಅನುಮತಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಗೊಂದಲಕ್ಕೆ ಬೆಳಗಾವಿಯ ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕರು, ಎಪಿಎಂಸಿ ಅಧಿಕಾರಿಗಳೇ ಕಾರಣ. ಮೂಲಸೌಲಭ್ಯಗಳ ಕೊರತೆ ತೋರಿಸಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಖಾಸಗಿ ಎಪಿಎಂಸಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಎಪಿಎಂಸಿ ಆಡಳಿತ ಮಂಡಳಿ ಗಮನಕ್ಕೆ ತರದೆ ಈ ನಿರ್ಧಾರ ಕೈಗೊಂಡು ಸರಕಾರಕ್ಕೆ ಹಾನಿ ಮಾಡಿದ್ದಾರೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ನಾವು ಕಾನೂನು ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು.
ಇದಲ್ಲದೆ ರೈತರಿಗೆ ಅನ್ಯಾಯ ಮಾಡಿರುವ ಕೃಷಿ ಮಾರುಕಟ್ಟೆ ನಿರ್ದೇಶಕ ಕರಿಗೌಡ, ಉಪನಿರ್ದೇಶಕ ಮಹಾಂತೇಶ ಪಾಟೀಲ ಹಾಗೂ ಎಪಿಎಂಸಿ ಕಾರ್ಯದರ್ಶಿ ಡಾ| ಕೋಡಿಗೌಡ ಅವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಸಿದಗೌಡ ಮೋದಗಿ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಖಾಸಗಿ ಎಪಿಎಂಸಿಗೆ ಅನುಮತಿ ನೀಡಬಾರದು ಎಂದು ಠರಾವು ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೆ ಈಗ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಇಲ್ಲಿನ ವ್ಯಾಪಾರಸ್ಥರನ್ನು ತೊಂದರೆಗೆ ಸಿಲುಕಿಸಿದ್ದಾರೆ.
ಸಿದಗೌಡ ಮೋದಗಿ,
ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ