ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಏಕಾಏಕಿ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿ ದೌರ್ಜನ್ಯ ನಡೆಸಿದ್ದು ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಶ್ರಯ ಕಾಲೋನಿ ನಿವಾಸಿಗರು ಮಂಗಳವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Advertisement
ಯಾವುದೇ ಮುನ್ಸೂಚನೆ ನೀಡದೆ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಆಗಮಿಸಿದ ಅಧ್ಯಕ್ಷ ಬಸನಗೌಡ ಪಾಟೀಲ, ಕೂಡಲೇ ಇಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಕುಟುಂಬಸ್ಥರು ಜಾಗವನ್ನು ಖಾಲಿ ಮಾಡಿಕೊಂಡು ತಮ್ಮ ಹೆಂಡತಿ ಮಕ್ಕಳೊಂದಿಗೆ ತೆರಳಬೇಕು. ಇಲ್ಲವಾದರೆ ಪೊಲೀಸರನ್ನು ಕರೆಸಿ ಜಾಗವನ್ನು ಖಾಲಿ ಮಾಡಿಸಲಾಗುತ್ತದೆ ಎಂದು ನಿವಾಸಿಗರಿಗೆ ಗದರಿಸಿದರು ಎನ್ನಲಾಗಿದೆ. ಇದಕ್ಕೆ ಸಮಜಾಯಿಸಿ ನೀಡಲು ಹೋದವರಿಗೆ ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ ನಿವಾಸಿಗರನ್ನು ತಳ್ಳಾಡಿ ಗುಂಡಾಗಿರಿಯ ವರ್ತನೆಯನ್ನು ತೋರಿದ್ದಾರೆ. ಇವರ ಗುಂಡಾ ವರ್ತನೆ ಬಗ್ಗೆ ಅಧ್ಯಕ್ಷರಿಗೆ ತಿಳಿಸಲು ಹೋದರೆ ಪುರಸಭೆ ಅಧ್ಯಕ್ಷ ಎಂದರೆ ಗೊಳಸಂಗಿ, ಗೊಳಸಂಗಿ ಎಂದರೆ ಪುರಸಭೆ ಅಧ್ಯಕ್ಷ, ಸುಮ್ಮನೆ ನಮ್ಮ ಜೊತೆಗೆ ವಾದ ಮಾಡದೇ ಜಾಗವನ್ನು ಖಾಲಿ ಮಾಡಿ ಇಲ್ಲವಾದರೆಒಳಗೆ ಹಾಕಿಸುತ್ತೇನೆ ಎಂಬ ಬೇಜವಾಬ್ದಾರಿತನ ಉತ್ತರವನ್ನು ನೀಡಿದ್ದಾರೆ ಎಂದು ನಿವಾಸಿಗರು ಮನವಿಯಲ್ಲಿ ತಿಳಿಸಿದ್ದಾರೆ.