Advertisement

ಕೇಂದ್ರದ ವಿರುದ್ಧ ಆಶಾ ಕಾರ್ಯಕರ್ತರ ಆಕ್ರೋಶ

06:00 PM Mar 30, 2022 | Team Udayavani |

ಗದಗ: ಕೇಂದ್ರ ಸರಕಾರದ ಕಾರ್ಮಿಕ ಮತ್ತು ಜನ ವಿರೋಧಿ ನೀತಿ ಖಂಡಿಸಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು. ನಗರದ ಮುನ್ಸಿಪಲ್‌ ಆವರಣದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರು ಭಾಗವಹಿಸಿದ್ದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ಮಹೇಂದ್ರಕರ ಸರ್ಕಲ್‌ ಹಾಗೂ ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾ  ಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಜಿಲ್ಲಾ ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಮಾತನಾಡಿ, ಇಂದಿನ ಮುಷ್ಕರ ಯಶಸ್ವಿಯಾಗಿದ್ದು, ದೇಶದ ಜನತೆ ಕೇಂದ್ರದ ನೀತಿಗಳಿಂದ ಬೇಸತ್ತಿದ್ದಾರೆ. ತಕ್ಷಣವೇ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕು. ಇಂಧನಗಳ ಮೇಲೆ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ 10 ಸಾವಿರ ರೂ. ನೇರ ನಗದು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ ಮಾತನಾಡಿ, ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಆಹಾರ ಧಾನ್ಯಗಳನ್ನು ನೀಡಬೇಕು. ಕಾರ್ಪೊರೇಟ್‌, ಬಂಡವಾಳ ಪರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ ವಾಪಸ್‌ ಪಡೆಯಬೇಕು.

ಬೆಂಬಲ ಬೆಲೆ ಕಾಯ್ದೆ ರೂಪಿಸಬೇಕು. ಖಾಸಗೀಕರಣ ನಿಲ್ಲಿಸಬೇಕು. ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಇತರೆ ವಸತಿ ರಹಿತ ಕಾರ್ಮಿಕರಿಗೆ ಉಚಿತ ವಸತಿ ಯೋಜನೆ ಜಾರಿ, ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಸಿಪಿಐ ಮುಖಂಡ ಎಂ.ಎಸ್‌.ಹಡಪದ ಮಾತನಾಡಿ, ಕೋವಿಡ್‌ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯ ಒದಗಿಸಬೇಕು. ಅಲ್ಲದೇ, ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು. ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಎಂ.ಐ. ನವಲೂರ, ಯೇಸು ಜಾನಶೌರಿ, ಶಾಂತಣ್ಣ ಮುಳವಾಡ, ಬಾಲು ರಾಠೊಡ, ಪೀರು ರಾಠೊಡ, ಜಿ.ಎಸ್‌.ತಳವಾರ, ಎಫ್‌.ಎಸ್‌. ಸಿಂದಗಿ, ಹನಮೇಶ, ಮೆಹಬೂಬ ಹವಾಲ್ದಾರ, ಪರಶುರಾಮ ಲಕ್ಕುಂಡಿ, ಯಶೋಧಾ ಬೆಟಗೇರಿ, ವೀರನಗೌಡ ಪಾಟೀಲ, ಪುಷ್ಪಾ ಚವ್ಹಾಣ, ದುಂಡಮ್ಮ ಬಳಿಗಾರ, ಸಾವಿತ್ರಿ ಸಬನೀಸ್‌, ರುದ್ರಗೌಡ ಸಂಕನಗೌಡ್ರ, ರುದ್ರಪ್ಪ ಕಂದಗಲ್ಲ, ಈಶ್ವರ ಲಕ್ಷೆ ¾àಶ್ವರ, ಮುತ್ತಣ್ಣ ಚಲವಾದಿ, ಅಂದಪ್ಪ ಕರಿ, ಯಮುನಾ ಗೋಟೂರ, ಬಸವರಾಜ ಮಂತೂರು ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next