Advertisement

ಬಿಜೆಪಿ ಪರಿವರ್ತನಾ ಯಾತ್ರೆಗೆ ಸಜ್ಜು

07:27 AM Oct 24, 2017 | |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ “ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ’ಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸಿದ್ಧತೆಗಳನ್ನು ತೀವ್ರಗೊಳಿಸಿದ್ದು, ಸೋಮವಾರ ಯಾತ್ರೆಯ ಲಾಂಛನ ಮತ್ತು ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ  ನೇತೃತ್ವದಲ್ಲಿ ನಡೆಯಲಿರುವ ಯಾತ್ರೆಯ ಲಾಂಛನವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಅನಾವರಣಗೊಳಿಸಿದರೆ, ಮಾರ್ಗಸೂಚಿಯನ್ನು ಯಾತ್ರೆಯ ಸಂಚಾಲಕಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಯಾತ್ರೆ ಕುರಿತು ಮಾಹಿತಿ ನೀಡಿದ ಶೋಭಾ ಕರಂದ್ಲಾಜೆ, ನ. 2ರಂದು ಬೆಂಗಳೂರು ಹೊರವಲಯದ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪರಿವರ್ತನಾ ಯಾತ್ರೆಗೆ ಚಾಲನೆ ನೀಡುವರು ಎಂದು ಹೇಳಿದರು.

ಯಾತ್ರೆ ಉದ್ದಕ್ಕೂ ಬೈಕ್‌ ರ್ಯಾಲಿ: ಬೆಂಗಳೂರಿನಲ್ಲಿ ನಡೆಯುವ ಯಾತ್ರೆಗೆ ಬೆಂಗಳೂರು ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ಆರು ಬೈಕ್‌ ಗಳಲ್ಲಿ ತಲಾ ಇಬ್ಬರಂತೆ ಮತ್ತು ಇತರೆ 16 ಜಿಲ್ಲೆಗಳ 86 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ಮೂರು ಬೈಕ್‌ ಗಳಲ್ಲಿ ತಲಾ ಇಬ್ಬರಂತೆ ಒಟ್ಟು ಒಂದು ಲಕ್ಷ ಬೈಕ್‌ಗಳಲ್ಲಿ 2 ಲಕ್ಷ ಯುವ ಮೋರ್ಚಾ ಕಾರ್ಯಕರ್ತರು ಆಗಮಿಸಲಿದ್ದಾರೆ. ಇವರೊಂದಿಗೆ ಇತರೆ ವಾಹನಗಳಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಯಲಿದೆ ಎಂದರು.

ಅಂದು ಬೆಂಗಳೂರಿನಿಂದ ಹೊರಡುವ ಯಾತ್ರೆ ವಿವಿಧ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಡಿ. 21ರಂದು ಹುಬ್ಬಳ್ಳಿ ತಲುಪಲಿದೆ. ಡಿ. 21ರಂದು ಹುಬ್ಬಳ್ಳಿ ಯಲ್ಲಿ ಬೃಹತ್‌ ಬೈಕ್‌ ರ್ಯಾಲಿ ಮತ್ತು ಸಮಾವೇಶ ನಡೆಯಲಿದ್ದು, ಈ ಬೈಕ್‌ ರ್ಯಾಲಿಗೆ ರಾಜ್ಯದ ಉತ್ತರ ಭಾಗದ 13 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ಮೂರು ಬೈಕ್‌ಗಳಲ್ಲಿ ತಲಾ ಇಬ್ಬರಂತೆ ಒಟ್ಟು 80 ಸಾವಿರ ಬೈಕ್‌ಗಳಲ್ಲಿ 1.60 ಲಕ್ಷ ಯುವ ಮೋರ್ಚಾ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು. 

ಹುಬ್ಬಳ್ಳಿಯಿಂದ ಮುಂದುವರಿದ ಯಾತ್ರೆ 2018ರ ಜ. 24ರವರೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಸಂಚರಿಸಿ ಜ. 25ರಂದು ಮೈಸೂರು ಸೇರಲಿದೆ. ಅಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿ ರ್ಯಾಲಿ ಕೊನೆಗೊಳ್ಳುತ್ತದೆ. ನಂತರ ಮೂರು ದಿನ ವಿಶ್ರಾಂತಿ ಇರಲಿದ್ದು, ಜ. 28ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೃಹತ್‌ ಸಮಾವೇಶದ ಮೂಲಕ ಯಾತ್ರೆಗೆ ಅಧಿಕೃತವಾಗಿ ತೆರೆ ಬೀಳಲಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌
.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಸಂಸದ ಪಿ.ಸಿ.ಮೋಹನ್‌, ವಿಧಾನ ಪರಿಷತ್‌ ಸದಸ್ಯರಾದ ರಾಮಚಂದ್ರಗೌಡ, ಲೆಹರ್‌ ಸಿಂಗ್‌, ಶಾಸಕರಾದ ಎಸ್‌.ಸುರೇಶ್‌ಕುಮಾರ್‌, ಎಲ್‌.ಎ.ರವಿ  ಸುಬ್ರಮಣ್ಯ, ವೈ.ಎ.ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಅಲ್ಪಸಂಖ್ಯಾತ
ಮೋರ್ಚಾ ಅಧ್ಯಕ್ಷ ಅಬ್ದುಲ್‌ ಅಜೀಂ ಮತ್ತಿತರರು ಇದ್ದರು.

Advertisement

ಲಾಂಛನ ಹೀಗಿದೆ?
ಹಳದಿ ಬಣ್ಣದ ಕರ್ನಾಟಕ ನಕ್ಷೆಯ ಮೇಲೆ ನೀಲಿ ವೃತ್ತದ ಒಳಗೆ ಬಿಳಿ ಬಣ್ಣದ ಕಮಲದ ಚಿಹ್ನೆ ಇದೆ. ಅದರ ಪಕ್ಕದಲ್ಲಿ ಬಿಜೆಪಿಯ ಬಣ್ಣವಾದ ಹಸಿರು ಮತ್ತು ಕೇಸರಿಯ ಎರಡು ಕರ್ವ್‌ಗಳಿವೆ. ಅದರ ಮೇಲೆ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಎಂದು ಬರೆಯಲಾಗಿದೆ.

ಯಾತ್ರೆಗೆ ರಾಜ್ಯ ನಾಯಕರ ತಂಡ ರಚನೆ
ಬಿಜೆಪಿಯ ನವ ಕರ್ನಾಟಕ ನಿರ್ಮಾ ಣ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯದ ಎಲ್ಲಾ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಯಾತ್ರೆಯ ಸಂಚಾಲಕಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಎಲ್ಲಾ ದಿನಗಳಲ್ಲೂ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಉಳಿದಂತೆ ಪ್ರಮುಖ ನಾಯಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗುತ್ತಿದ್ದು, ಪ್ರತಿ ವಾರ ಒಂದು ತಂಡ ಯಾತ್ರೆಯಲ್ಲಿ ಇರುತ್ತದೆ. ಯಾತ್ರೆಗೆ ಸಂಬಂಧಿಸಿದಂತೆ ರಾಜ್ಯ ನಾಯಕರ ತಂಡಗಳನ್ನು ರಚಿಸಲಾಗುತ್ತಿದ್ದು, ವಾರಕ್ಕೊಂದು ತಂಡ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಕೇಂದ್ರ ನಾಯಕರು (ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರು) ಪಾಲ್ಗೊಳ್ಳುತ್ತಾರೆ. ಜತೆಗೆ ಇತರೆ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಿದ್ದರಾಮಯ್ಯರಿಂದ”ಪರ್ಸಂಟೇಜ್‌ ದಂಧೆ’
ಬೆಂಗಳೂರು: ಸರ್ಕಾರದ ಪ್ರತಿಯೊಂದು ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶೇ. 20ರಿಂದ
25ರಷ್ಟು “ಪರ್ಸಂಟೇಜ್‌ ದಂಧೆ’ ನಡೆಸುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಹಮ್ಮಿಕೊಳ್ಳುತ್ತಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಲಾಂಛನ ಮತ್ತು ಮಾರ್ಗಸೂಚಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದಲ್ಲಿ ಯಾವುದೇ ಯೋಜನೆ ಜಾರಿಗೊಳಿಸಲಿ, ಅದರ ಅಂದಾಜು ಸಿದ್ಧಪಡಿಸುವಾಗಲೇ ಶೇ. 20ರಿಂದ 25ರಷ್ಟು ಹೆಚ್ಚು ಮೊತ್ತ ನಮೂದಿಸಲಾಗುತ್ತದೆ. ಜತೆಗೆ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಇಷ್ಟೇ ಪ್ರಮಾಣದಲ್ಲಿ ಕಮಿಷನ್‌ ಪಡೆಯಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದರು.

ಕೋಟಿ ರೂ. ವೆಚ್ಚದಲ್ಲಿಸಿದ್ಧವಾಗುತ್ತಿದೆ ರಥ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನ. 2ರಿಂದ ನಡೆಯುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ರಥ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ನಗರದ ಲಾಲ್‌ಬಾಗ್‌ ರಸ್ತೆಯ
ಗ್ಯಾರೇಜ್‌ ಒಂದರಲ್ಲಿ ರಥ ಸಿದ್ಧವಾಗುತ್ತಿದ್ದು, ಅದರಲ್ಲಿ 9 ಮಂದಿಗೆ ಕುಳಿತುಕೊಳ್ಳಲು ಅಥವಾ 15 ಮಂದಿಗೆ ನಿಲ್ಲಲು ಅವಕಾಶ ಮಾಡಲಾಗುತ್ತಿದೆ. ರಥದ ಒಳಗೆ ಯಡಿಯೂರಪ್ಪ ಅವರಿಗೆ ವಿಶ್ರಾಂತಿ ಪಡೆಯಲು ಸ್ಥಳ ಮೀಸಲಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಕುರಿತು ಅಹಿಂದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು
 ●ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಅಂಕಿಗಳಲ್ಲಿ ಯಾತ್ರೆ
7,500 ಕಿ.ಮೀ. ಯಾತ್ರೆ ಕ್ರಮಿಸುವ ಒಟ್ಟು ದೂರ 
84 ಯಾತ್ರೆ ನಡೆಯುವ ಒಟ್ಟು ದಿನಗಳ
224ಯಾತ್ರೆಯಲ್ಲಿ ಸಾರ್ವಜನಿಕ ಸಭೆಗಳು
3ಪ್ರತಿನಿತ್ಯ ನಡೆಯುವ ಸಾರ್ವಜನಿಕ ಸಭೆ
3 ಲಕ್ಷ ನ.2ರ ಉದ್ಘಾಟನಾ ಸಭೆಗೆ ಬರುವ ಕಾರ್ಯಕರ್ತರು
1 ಲಕ್ಷ ಬೆಂಗಳೂರಿನ ಉದ್ಘಾಟನಾ ಸಭೆಗೆ ಬರುವ ಬೈಕ್‌ಗಳು
80 ಸಾವಿರ ಡಿ. 21ರ ಹುಬ್ಬಳ್ಳಿ ರ್ಯಾಲಿಗೆ ಬರುವ ಬೈಕ್‌ಗಳು
20 ಯಾತ್ರೆಯ ಮಧ್ಯೆ ವಿಶ್ರಾಂತಿ ದಿನಗಳು

Advertisement

Udayavani is now on Telegram. Click here to join our channel and stay updated with the latest news.

Next