ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಕರ್ನಾಟಕದ ರಾಜಕೀಯ ಪ್ರಹಸನ 2019ರ ಲೋಕಸಭೆ ಚುನಾವಣೆಯ “ರಂಗ ತಾಲೀಮು’ ಆಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಬಂಡಾಯ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ.
ಪ್ರಜಾತಂತ್ರ ಉಳಿಸಲು ಪ್ರಗತಿಪರರ ವೇದಿಕೆ ಭಾನುವಾರ ಶಾಸಕರ ಭವನದಲ್ಲಿ ಏರ್ಪಡಿಸಿದ್ದ “ಪ್ರಜಾಪ್ರಭುತ್ವ-ಸಂವಿಧಾನಕ್ಕೆ ಅಪಾಯ’ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಆದೊಂದು ರೀತಿಯಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಕೊಟ್ಟಂತೆ ಎನ್ನುವಂತಹ ರಾಜಕೀಯ ಭಾವನೆ ಇಡೀ ದೇಶದಲ್ಲಿ ನಿರ್ಮಾಣವಾಗಿದೆ. ಈ ಭಾವನೆಗೆ ಕರ್ನಾಟಕದಲ್ಲಿ ಹೊಸ ತಿರುವು ಸಿಕ್ಕಿದೆ ಎಂದು ತಿಳಿಸಿದರು.
ಒಂದು ಕಡೆ ಬಹುಮತಕ್ಕೆ ಯಾವುದೇ ಕಿಮ್ಮತ್ತು ಕೊಡದೆ ಕೇವಲ ಹೆಚ್ಚಿನ ಸಂಖ್ಯೆ ಮುಂದಿಟ್ಟುಕೊಂಡು ಸರ್ಕಾರ ರಚನೆಗೆ ಬಿಜೆಪಿ ಪ್ರಯತ್ನ ಮಾಡಿತು. ಅಗತ್ಯ ಸಂಖ್ಯೆ ಇಲ್ಲದಿದ್ದರೂ ಬಹುಮತ ಸಾಬೀತುಪಡಿಸುತ್ತೇವೆ ಎಂದು ಹೇಳಿದ ಬಿಜೆಪಿ, ಶಾಸಕರನ್ನು ಖರೀದಿಸುವ ಸಾಮರ್ಥ್ಯ ನಮಗಿದೆ ಎಂಬ ಸಂದೇಶ ನೀಡಲು ಹೊರಟಿತ್ತು. ಅಲ್ಪಮತದ ಸರ್ಕಾರ ರಚಿಸಿ ಬಳಿಕ ಅದನ್ನು ಸ್ಪೀಕರ್ ಮೂಲಕ ರಕ್ಷಿಸಿಕೊಂಡು ಹೋಗುವುದು ಬಿಜೆಪಿಯ “ರಣನೀತಿ’. ಮೇಘಾಲಯ, ಗೋವಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಇದನ್ನೇ ಮಾಡಿದೆ ಎಂದರು.
“ತಜ್ಞರ ಅಭಿಪ್ರಾಯ ಪಡೆದ ನಂತರ ನಾನು ಅತ್ಯಂತ ಜವಾಬ್ದಾರಿಕೆಯಿಂದ ಹೇಳುತ್ತಿದ್ದೇನೆ. ಎಲೆಕ್ಟ್ರಾನಿಕ್ ಮತಯಂತ್ರ ವಿಶ್ವಾಸಾರ್ಹವಲ್ಲ. ಅದನ್ನು ಹ್ಯಾಕ್ ಮಾಡಬಹುದು ಮತ್ತು ತಿರುಚಬಹುದು. ಇವಿಎಂ ವಿಚಾರದಲ್ಲಿ ಚುನಾವಣಾ ಆಯೋಗದ ನಡೆ ಶಂಕಾಸ್ಪದವಾಗಿದೆ’.
– ಯಶವಂತ ಸಿನ್ಹಾ, ಕೇಂದ್ರದ ಮಾಜಿ ಸಚಿವ