ಸಿನಿಪ್ರಿಯರ ಗಮನ ಬೇಗನೆ ಸೆಳೆಯಬಹುದು ಎಂಬ ಯೋಚನೆಯಿಂದಲೊ.., ಏನೋ.., ಕನ್ನಡದಲ್ಲಿ ಚಿತ್ರ-ವಿಚಿತ್ರ ಶೀರ್ಷಿಕೆಗಳನ್ನ ಇಟ್ಟುಕೊಂಡು ಸೆಟ್ಟೇರುತ್ತಿರವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂತಹ ಪಟ್ಟಿಗೆ ಈಗ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದರ ಹೆಸರು “1-11= ‘ (ಒನ್ ಮೈನಸ್ ಹನ್ನೊಂದು= ಡ್ಯಾಶ್) ಈ ಚಿತ್ರಕ್ಕೆ “ಬಿಟ್ಟಿರುವ ಸ್ಥಳ ತುಂಬಿರಿ’ ಎನ್ನುವ ಅಡಿಬರಹವಿದ್ದು, “ನೀ ಬರೆದ ಕಾದಂಬರಿ’ ಚಿತ್ರದಲ್ಲಿ ಬಾಲ ನಟನಾಗಿ ನಟಿಸಿದ್ದ ಅರ್ಜುನ್ ಈ ಚಿತ್ರದಲ್ಲಿ ನಾಯಕ.
ಉಳಿದಂತೆ ಸಚ್ಚಿನ್ ಪುರೋಹಿತ್, ಅಭಿಷೇಕ್, ಅಭಿಲಾಷ್, ಹರ್ಷ, ಹರೀಶ್, ನಂದಿನಿ, ಸುಮಾ, ಪಾರ್ವತಿ, ಮುಂತಾದವರು ಅಭಿನಯಿಸಿದ್ದಾರೆ. ಎಸ್. ಆನಂದ್ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಮಳವಳ್ಳಿಯ ಎಂ. ಶಿವಕುಮಾರ್ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ಚಿತ್ರದಲ್ಲಿ ಆರು ಹುಡುಗರು ಮತ್ತು ಹುಡುಗಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ಯುವ ಜನತೆ ಹಾಳಾಗುತ್ತಿದೆ.
ಶ್ರೀಮಂತರ ಮಕ್ಕಳು ಡ್ರಗ್ಸ್ ವ್ಯಸನಿಯಾಗಿ, ಅರಿವಿಲ್ಲದೆ ತಪ್ಪುದಾರಿ ಹಿಡಿಯುತ್ತಿದ್ದಾರೆ. ಮುಂದಾಗುವ ಪರಿಣಾಮಗಳಿಗೆ ತಾವೇ ಹೊಣೆಗಾರರಾಗುತ್ತಿದ್ದಾರೆ. ನಿಮ್ಮಗಳ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ, ಅದನ್ನು ಹರಿಬಿಡಬೇಡಿ, ಹೆಣ್ಣು ಮಕ್ಕಳಿಗೆ ಗೌರವ ಕೊಡಿ’ ಎಂಬ ಸಂದೇಶ ಚಿತ್ರದಲ್ಲಿದೆ. ಬೆಂಗಳೂರು, ತುಮಕೂರು, ಕೋಲಾರ, ಮಡಿಕೇರಿ, ಕುಣಿಗಲ್ ಸೇರಿದಂತೆ ಇತರೆ ಕಡೆ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ’ ಎಂದು ಚಿತ್ರದ ಹೂರಣವನ್ನು ಬಿಚ್ಚಿಡುತ್ತಾರೆ ನಿರ್ದೇಶಕ ಎಸ್. ಆನಂದ್ ಕುಮಾರ್.
ಚಿತ್ರದಲ್ಲಿ ಐದು ಹಾಡುಗಳಿದ್ದು, ಸ್ನೇಹ ಜಿ. ಶಿವಮೂರ್ತಿ ಈ ಹಾಡುಗಳಿಗೆ ಸಾಹಿತ್ಯ ಹಾಗೂ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ರಾಜ್ ಭಾಸ್ಕರ್ ಹಿನ್ನಲೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಯಾಗಿದ್ದು, ನಿರ್ಮಾಪಕ ಮತ್ತು ವಿತರಕ ಉಮೇಶ್‌ಬಣಕಾರ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ತರುವ ಸಿದ್ದತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ.