Advertisement

ಅನಾಥ ಭಾವದಲ್ಲಿ ಏಕನಾಥ ಶೆಟ್ಟಿ ಕುಟುಂಬ

02:39 AM Jul 23, 2019 | Team Udayavani |

ಬೆಳ್ತಂಗಡಿ: ಅದು ಜುಲೈ 22, 2016. ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ ಬ್ಲೇರ್‌ಗೆ ಪ್ರಯಾಣಿಸುತ್ತಿದ್ದ ಎಎನ್‌-32 ಯುದ್ಧ
ವಿಮಾನ ಬಂಗಾಲಕೊಲ್ಲಿ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡು ನಿನ್ನೆಗೆ ಮೂರು ವರ್ಷ.

Advertisement

ಯುದ್ಧ ವಿಮಾನದಲ್ಲಿ ಸೇವೆಯ ನಿಮಿತ್ತ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ವೀರ ಯೋಧ ಏಕನಾಥ ಶೆಟ್ಟಿ ಸೇರಿ 29 ಜನ ಭಾರತೀಯ ಸೈನಿಕರು ಏನಾದರೆಂಬುದು ಇಂದಿಗೂ ನಿಗೂಢ.

ವಾಯು ಪಡೆ ಇತಿಹಾಸದಲ್ಲೇ ಮೊದಲು
ನಾಪತ್ತೆಯಾದ ವಿಮಾನ ಪತ್ತೆ ಹಚ್ಚಲು ಕೇಂದ್ರ ಸರಕಾರ ಮತ್ತು ಮಿಲಿಟರಿ ತಜ್ಞರು ಸತತ ಮೂರು ತಿಂಗಳು ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್‌ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳ ಮೂಲಕ ಪ್ರಯತ್ನಿಸಿದ್ದವು. ವಿಮಾನವೊಂದು ನಾಪತ್ತೆಯಾಗಿದ್ದರೂ ಕಿಂಚಿತ್ತೂ ಕುರುಹು ಪತ್ತೆಯಾಗದಿರುವುದು ವಾಯುಪಡೆ ಇತಿಹಾಸದಲ್ಲೇ ಮೊದಲ ಕರಾಳ ನೆನಪು.

ಬೆಳಗ್ಗೆ 8.30ಕ್ಕೆ ಹೊರಟಿದ್ದ ಎಎನ್‌-32ನಲ್ಲಿ ಗುರುವಾಯನಕೆರೆಯ ಹೆಮ್ಮೆಯ ಪುತ್ರ ಏಕನಾಥ ಶೆಟ್ಟಿಯವರೂ ಇದ್ದರು. ಬೆಳಗ್ಗೆ 9.12ಕ್ಕೆ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ತಲುಪದೇ ಇದ್ದಾಗ ಮಧ್ಯಾಹ್ನ 1.50ಕ್ಕೆ ಅದು ಕಣ್ಮರೆ ಕುರಿತು ವಾಯುಸೇನೆ ಮಾಹಿತಿ ಪ್ರಕಟಿಸಿತ್ತು. ಅದಾದ ಬಳಿಕದ ಬಹುದಿನಗಳ ಕಾಲ ಏಕನಾಥ ಶೆಟ್ಟಿ ಅವರ ಬರುವಿಕೆಯ ನಿರೀಕ್ಷೆಯಲ್ಲಿ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್‌ ಶೆಟ್ಟಿ, ಪುತ್ರಿ ಆಶಿತಾ ಶೆಟ್ಟಿ ಇದ್ದರು.

ಪುತ್ರಿ ಉದ್ಯೋಗದ ನಿರೀಕ್ಷೆಯಲ್ಲಿ ಮಗಳು ಆಶಿತಾ ಶೆಟ್ಟಿಗೆ ಆಳ್ವಾಸ್‌ ಕಾಲೇಜು ಉಚಿತ ಶಿಕ್ಷಣ ಒದಗಿಸಿತ್ತು. ಆಕೆ ಎಂಎಚ್‌ಆರ್‌ಡಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಮಗ ಅಕ್ಷಯ್‌ ಶೆಟ್ಟಿ ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ಗೆ ಸೇರ್ಪಡೆಗೊಂಡಿದ್ದು, ತಂದೆಯಂತೆ ಸಾಧನೆ ಮಾಡುವ ತವಕದಲ್ಲಿದ್ದಾರೆ.

Advertisement

ಹುಸಿಯಾಗದಿರಲಿ ನಿರೀಕ್ಷೆ ಯಾವುದೇ ಅವಶೇಷ ಪತ್ತೆ ಯಾಗದೇ ಇರುವುದರಿಂದ ವಿಮಾನ ಕಕ್ಷೆ ಬಿಟ್ಟು ಹೋಗುವ ಸಾಧ್ಯತೆ ಇಲ್ಲ ವಾದರೂ ಅಂಥ ಕೌತುಕವೇನಾ ದರೂ ನಡೆದಿರಬಹುದಾದ ಸಾಧ್ಯತೆ ಕುರಿತು ತಜ್ಞರು ಉಲ್ಲೇಖೀಸಿದ್ದಾರೆ. ಇವೆಲ್ಲ ಪವಾಡಸದೃಶ ಸಾಧ್ಯಾ ಸಾಧ್ಯತೆಯಾದರೂ ಆಶಾವಾದದ ಬೆಳ್ಳಿಕಿರಣವನ್ನು ಊರವರು ಹಾಗೂ ಕುಟುಂಬ ಸದಸ್ಯರು ಇಂದಿಗೂ ಕಳೆದುಕೊಂಡಿಲ್ಲ.

ಪತಿಯ ಸಮವಸ್ತ್ರ ನಮ್ಮ ಕೈಸೇರಿ ಮೂರು ವರ್ಷಗಳು ಸಂದಿವೆ. ಅವರು ಇಂದಲ್ಲ ನಾಳೆ ನಮ್ಮನ್ನು ಸೇರುವರೆಂಬ ವಿಶ್ವಾಸದಲ್ಲಿ ನೋವು ಮರೆತು ಮಕ್ಕಳ ಭವಿಷ್ಯ ರೂಪಿಸುತ್ತಿದ್ದೇನೆ.
-ಜಯಂತಿ ಶೆಟ್ಟಿ
ಯೋಧ ಏಕನಾಥ ಶೆಟ್ಟಿ ಅವರ ಪತ್ನಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next