Advertisement

ಪಕ್ಷ ಸಂಘಟನೆಗೆ ಸಕ್ರಿಯರಾಗಿ: ನಾಡಗೌಡ

12:50 PM Jan 16, 2017 | Team Udayavani |

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಂಡಿತವಾಗಿದ್ದು, ಮುಂಬರುವ ದಿನಗಳಲ್ಲಿ ಸಂಯುಕ್ತ ಜನತಾದಳ(ಜೆಡಿಯು)ಗೆ ಉತ್ತಮ ಅವಕಾಶವಿದೆ. ಹೊರಗಿನಿಂದ ಬರುವ ನಾಯಕರಿಗಾಗಿ ಕಾಯ್ದು ಕುಳಿತುಕೊಳ್ಳದೆ, ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಕ್ರಿಯವಾದರೆ ನಿರ್ಣಾಯಕ ಸ್ಥಿತಿಗೆ ಬಂದೇ ಬರುತ್ತೇವೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಡಾ| ಎಂ.ಪಿ.ನಾಡಗೌಡ ಹೇಳಿದರು. 

Advertisement

ಇಲ್ಲಿನ ಜೆಡಿಯು ಕಚೇರಿಯಲ್ಲಿ ರವಿವಾರ ಆಯೋಜಿಸಿದ್ದ ಪಕ್ಷದ ಚೈತನ್ಯ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೆಟ್ಟ ಸರಕಾರ ಇದೆ ಎಂದರೆ, ಅನ್ಯಾಯದ ಬಗ್ಗೆ ಮೌನ ವಹಿಸುವ ಮೂಲಕ ವಿಪಕ್ಷಗಳು ಸರಕಾರಕ್ಕಿಂತ ಹೆಚ್ಚು ಕೆಟ್ಟ ಸ್ಥಿತಿಯಲ್ಲಿವೆ ಎಂದರು.

ಯಡಿಯೂರಪ್ಪಗೆ ಸವಾಲು: ಮುಖ್ಯಮಂತ್ರಿಯಾದರೆ 24 ಗಂಟೆಯಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿರುವ ಬಿಜೆಪಿ  ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಮಸ್ಯೆ ಇತ್ಯರ್ಥಕ್ಕೆ ಮುಂದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿ ಮಾಡಿ, ಒಂದು ದಿನದ ಮಟ್ಟಿಗೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸಲಾಗುವುದು. ಮಹದಾಯಿ ಇತ್ಯರ್ಥ ಪಡಿಸಿ ತೋರಿಸಲಿ ಎಂದು ಸವಾಲು ಹಾಕಿದರು.  

ಸಾಮೂಹಿಕ ನಾಯಕತ್ವ ಪರಿಕಲ್ಪನೆ: ಜೆಡಿಯು ನಾಯಕ ಮಹಿಮಾ ಪಟೇಲ್‌ ಮಾತನಾಡಿ, ಜನತಾ ಪರಿವಾರ ಮೊದಲಿನಿಂದಲೂ ಸಾಮೂಹಿಕ  ನಾಯಕತ್ವದ ಪರಿಕಲ್ಪನೆಯಲ್ಲಿ ಬಂದಿದೆ. ಪ್ರಸ್ತುತ ಸ್ಥಿತಿಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರೆ ಹಾಸ್ಯ-ಅಪಹಾಸ್ಯ ಮಾಡುವವರೇ ಅಧಿಕ. 1983ರಲ್ಲಿ ಇದೇ ಸ್ಥಿತಿ ಇತ್ತು, ಜನತಾ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆ ಯಾರಿಗೂ ಇರಲಿಲ್ಲ.

ಅಂದು ಮೊದಲ ಬಾರಿಗೆ ಅಧಿಕಾರ ಹಿಡಿದಿತ್ತು. ಇಂದು ಸಹ ಅದೇ ಸ್ಥಿತಿ ಇದೆ. ವಿವಿಧ ಪಕ್ಷಗಳಲ್ಲಿನ ಜನತಾ ಪರಿವಾರದ ಅನೇಕರು ಮತ್ತೆ ಜೆಡಿಯು ಕಡೆ ನೋಡುತ್ತಿದ್ದಾರೆ ಎಂದರು. ಜೆಡಿಯು ಒಂದು ರೀತಿ ವೀಣೆಯ  ಸುಮಧುರ ನಾದವಿದ್ದಂತೆ. ಡೊಳ್ಳು ಬಡಿತದ ಅಬ್ಬರದಲ್ಲಿ ಅದು ಕೇಳಿಸದು. ಅಬ್ಬರ ನಿಂತ ಕೂಡಲೇ ಸುಮಧುರ ಧ್ವನಿ ಹಲವರನ್ನು ಆಕರ್ಷಿಸುತ್ತದೆ.

Advertisement

ಪಕ್ಷ ಸಂಘಟನೆ ದೃಷ್ಟಿಯಿಂದ ಮುಂದಿನ ತಿಂಗಳು ಕೋಲಾರದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ರೈತ ಮುಖಂಡ ಎಂ.ಗೋಪಾಲ ಮಾತನಾಡಿ, ಜನರ ಬಗೆಗಿನ ಪ್ರೀತಿ ಹೃದಯದಿಂದ ಬರಬೇಕೆ ವಿನಃ ತುಟಿಯಿಂದ ಅಲ್ಲ. ರಾಜಕೀಯ ಪಕ್ಷಗಳು ಜನರ ಸಮಸ್ಯೆ ಜೀವಂತವಾಗಿರಿಸಿ ಪರಿಹಾರದ ನಾಟಕವಾಡುತ್ತಿವೆ ಎಂಬುದಕ್ಕೆ ಮಹದಾಯಿ ಜ್ವಲಂತ ಸಾಕ್ಷಿ.

ಪ್ರಧಾನಿ ಮನಸ್ಸು ಮಾಡಿದರೆ ಒಂದು ತಾಸಿನಲ್ಲಿ ಇತ್ಯರ್ಥವಾಗಲಿದೆ ಎಂದರು. ಮಾಜಿ ಶಾಸಕ ಧರ್ಮಪ್ಪ ಮಾತನಾಡಿ, ಭ್ರಷ್ಟಾಚಾರ-ಕಪ್ಪು ಹಣ ತಡೆ ನೆಪದಲ್ಲಿ ಜಾರಿಗೊಂಡ ನೋಟುಗಳ ಅಪನಗದೀಕರಣ ಹಲವು ಸಮಸ್ಯೆ ಸೃಷ್ಟಿಸಿದೆ. ಆದರೆ, ಸಾವಿರಾರು ಕೋಟಿ ಸಂಪತ್ತು ಹೊಂದಿದ ಒಬ್ಬರೇ ಒಬ್ಬ ರಾಜಕಾರಣಿ ಮನೆ ಮೇಲೆ ದಾಳಿ ನಡೆದಿಲ್ಲ.

ಭ್ರಷ್ಟಾಚಾರ ತಡೆಯ ಅಣಕು ಪ್ರದರ್ಶನವಷ್ಟೇ ಇದು ಎಂದು ವ್ಯಂಗ್ಯವಾಡಿದರು. ಪಕ್ಷದ ಮುಖಂಡರಾದ ಸಾವಿತ್ರಿ ಗುಂಡಿ, ಎಸ್‌.ಹೈಬತ್ತಿ, ಜಿ.ಕೆ.ಸಿ.ರೆಡ್ಡಿ ಇನ್ನಿತರರು ಮಾತನಾಡಿದರು. ಮುಖಂಡರಾದ ಶಶಿಕಾಂತ ತಾವರೆಗೆ, ಶ್ರೀಶೈಲಗೌಡ ಕಮತರ, ರತ್ನಾ ಗಂಗಣ್ಣವರ, ಜಿ.ಎಸ್‌. ತೋಬದ, ಉಸ್ಮಾನ್‌ ಶರೀಫ್, ಪದ್ಮಾ ಸೂರ್ಯವಂಶ, ಕೋರಿಶೆಟ್ಟರ, ಶೇಖಣ್ಣ ಹೊರಕೇರಿ ಇನ್ನಿತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next