Advertisement

ಪರೀಕ್ಷೆಗೂ ಮುನ್ನವೇ ಅಗ್ನಿಪರೀಕ್ಷೆ

06:00 AM Dec 25, 2018 | |

ಅಂದು ಬಿಎಂಟಿಸಿ ಸಿಇಟಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದೆ. ಹಳ್ಳಿಯವನಾದ ನನಗೆ ಬೆಂಗಳೂರು ಹೊಸತು. ಹಾಲ್‌ ಟಿಕೆಟ್‌ ಮೇಲೆ ಕುಮಾರ ಪಾರ್ಕ್‌ ಹೈಸ್ಕೂಲ್‌, ನಾಗಪ್ಪ ಸ್ಟ್ರೀಟ್‌ ಎಂದಷ್ಟೇ ಇತ್ತು. ಅಲ್ಲಿಗೆ ಹೋಗಿ ಯಾರನ್ನು ಕೇಳಿದರೂ, ಗೊತ್ತಿಲ್ಲ ಎನ್ನುವವರೇ. ಇನ್ನು ಕೆಲವರು ಕುಮಾರ ಪಾರ್ಕ್‌ ಹೈಸ್ಕೂಲ್‌ ಇಲ್ಲಿ ಇಲ್ಲವೇ ಇಲ್ಲ ಎಂದರು. ಒಂದು ಗಂಟೆ ಹುಡುಕಿದರೂ ಪರೀಕ್ಷೆ ಸೆಂಟರ್‌ ಸಿಗಲಿಲ್ಲ. ಪರೀಕ್ಷೆಗೆ ಇನ್ನೊಂದೇ ಗಂಟೆ ಬಾಕಿ ಇತ್ತು. ಸುತ್ತಮುತ್ತ 4 ಬಾರಿ ತಿರುಗಾಡಿದರೂ ಪ್ರಯೋಜನವಾಗದೆ, ಕಣ್ಣಲ್ಲಿ ನೀರು ತುಂಬಿತು. 

Advertisement

ಆಗ ಒಬ್ಬರು ನನ್ನ ಬಳಿ ಬಂದು, ಏನಾಯಿತೆಂದು ವಿಚಾರಿಸಿದರು. ಹಾಲ್‌ ಟಿಕೆಟ್‌ ತೋರಿಸಿ, “ಈ ವಿಳಾಸ ಎಲ್ಲಿದೆ?’ ಅಂತ ಕೇಳಿದೆ. ಅವರಿಗೂ ವಿಳಾಸ ಗೊತ್ತಿರಲಿಲ್ಲ. ನನ್ನ ಪರಿಸ್ಥಿತಿಗೆ ಮರುಗಿ, “ಬನ್ನಿ, ಸ್ಕೂಟಿ ಹತ್ತಿ ಇಬ್ಬರೂ ಸೇರಿ ಹುಡುಕೋಣ’ ಎಂದರು. ನಾನು ಹಿಂದೆಮುಂದೆ ನೋಡದೆ ಅವರೊಂದಿಗೆ ಹೊರಟೆ. ಪರೀಕ್ಷೆ 15 ನಿಮಿಷ ಬಾಕಿ ಇತ್ತು. ನನ್ನ ಕತೆ ಮುಗಿಯಿತು ಅಂದುಕೊಂಡೆ.
uಹುಡುಕುತ್ತಾ ಹುಡುಕುತ್ತಾ ಅಂತೂ ಎಕ್ಸಾಂ ಸೆಂಟರ್‌ ಒಂದು ಕಣ್ಣಿಗೆ ಬಿತ್ತು. ಅಲ್ಲಿಗೆ ಹೋದರೆ, ಬೇರೆ ಯಾವುದೋ ಪರೀಕ್ಷೆ ನಡೆಯುತ್ತಿತ್ತು. ಇನ್ನೊಂದು ಎಕ್ಸಾಂ ಸೆಂಟರ್‌ ಹತ್ತಿರದಲ್ಲೇ ಇತ್ತು. ನನ್ನ ದುರದೃಷ್ಟಕ್ಕೆ ಅದೂ ನನ್ನ ಎಕ್ಸಾಂ ಸೆಂಟರ್‌ ಆಗಿರಲಿಲ್ಲ. ಆದರೆ ಅಲ್ಲಿದ್ದ ಒಬ್ಬ ಮೇಡಂ, “ಸರ್‌, ಕುಮಾರ ಪಾರ್ಕ್‌ ಹೈಸ್ಕೂಲ್‌ ಇರುವುದು ಕುಮಾರ ಪಾರ್ಕ್‌ನಲ್ಲಲ್ಲ. ಅದರ ಹೆಸರು ಸಿಬಿಎಸ್‌ಇ ವಿಜ್ಞಾನ ಮತ್ತು ಕಲಾ ಕಾಲೇಜು. ಅಲ್ಲಿಗೆ ಹೋಗಿ’ ಎಂದರು. ಜೊತೆಗಿದ್ದ ವ್ಯಕ್ತಿಗೆ ಆ ವಿಳಾಸ ಗೊತ್ತಿತ್ತು. ಇನ್ನೇನು ಪರೀಕ್ಷೆಗೆ 5 ನಿಮಿಷ ಇದೆ ಅನ್ನುವಾಗ ಎಕ್ಸಾಂ ಸೆಂಟರ್‌ಗೆ ಬಂದೆವು. ಅವರಿಗೊಂದು ಸರಿಯಾದ ಥ್ಯಾಂಕ್ಸ್‌ ಕೂಡ ಹೇಳದೆ, ಒಳಗೆ ಓಡಿದೆ.
ಆ ದಿನ ಅವರು ಸಿಗದೇ ಇದ್ದಿದ್ದರೆ ನಾನು ಪರೀಕ್ಷೆ ಬರೆಯಲು, ಈ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ವ್ಯಕ್ತಿಗೆ ನಾನು ಸದಾ ಚಿರಋಣಿ.

– ಪ್ರಭಾಕರ ಪಿ. ರಾಂಪುರ

Advertisement

Udayavani is now on Telegram. Click here to join our channel and stay updated with the latest news.

Next