Advertisement

Session: ಧರಣಿ ಕೈ ಬಿಟ್ಟು ಕಲಾಪದಲ್ಲಿ ಪಾಲ್ಗೊಂಡ ವಿಪಕ್ಷ

11:23 PM Dec 12, 2023 | Team Udayavani |

ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಅವರು ಸ್ಪೀಕರ್‌ ಪೀಠವನ್ನು ಧಾರ್ಮಿಕ ದೃಷ್ಟಿಯಿಂದ ವ್ಯಾಖ್ಯಾನಿಸಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಸೋಮವಾರ ದಿನವಿಡೀ ಧರಣಿ ನಡೆಸಿದ್ದ ಬಿಜೆಪಿ-ಜೆಡಿಎಸ್‌ ಸದಸ್ಯರು, ಮಂಗಳವಾರ ಸದನ ಆರಂಭವಾದ ಕೆಲವು ಸಮಯದಲ್ಲೇ ಧರಣಿ ಹಿಂಪಡೆದು ಕಲಾಪದಲ್ಲಿ ಪಾಲ್ಗೊಂಡರು.

Advertisement

ಮಂಗಳವಾರ ಬೆಳಗ್ಗೆ 9.30ಕ್ಕೆ ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ-ಜೆಡಿಎಸ್‌ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರಲ್ಲದೆ, ಬಿಜೆಪಿಯ ಬಸನಗೌಡ ಯತ್ನಾಳ, ಸಭಾಧ್ಯಕ್ಷರೆ ನಾವು ನಿಮಗೆ ಕೈ ಮುಗಿಯಬೇಕೋ ಇಲ್ಲವೋ ಹೇಳಿ ಎಂದರು. ಗೃಹ ಸಚಿವ ಡಾ| ಜಿ.ಪರಮೇಶ್ವರ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ರಾಜ್ಯ-ದೇಶ ಇಲ್ಲಿ ಏನು ನಡೆಯುತ್ತಿದೆ ಎಂದು ನೋಡುತ್ತಿದೆ. ಪೀಠದ ಬಗ್ಗೆ ಎಲ್ಲರಿಗೂ ಗೌರವವಿದೆ. ವ್ಯವಸ್ಥೆಯನ್ನು ಯಾರೂ ಪ್ರಶ್ನಿಸುವುದು ಬೇಡ. ಉತ್ತರದ ವಿಚಾರ ಚರ್ಚೆಗೆ ಅವಕಾಶ ನೀಡಲು ಧರಣಿ ಕೈ ಬಿಡಿ ಎಂದರು.

ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ಜಮೀರ್‌ ಅಹ್ಮದ್‌ ಅವರು ಹೇಳಿಕೆ ನೀಡಿದ ಮರುದಿನವೇ ನಾನು ಸ್ಪಷ್ಟನೆ ನೀಡಿದ್ದೇನೆ. ಘಟನೆ ನಡೆದು ಹಲವು ದಿನಗಳಾಗಿವೆ. ಸದನ ಆರಂಭಗೊಂಡು ವಾರ ಕಳೆದಿದೆ. ಸೋಮವಾರ ಪ್ರಶ್ನೋತ್ತರ ವೇಳೆ ಏಕಾಏಕಿ ವಿಷಯ ಪ್ರಸ್ತಾಪಿಸಿ ಧರಣಿ ನಡೆಸಿದರೆ ಹೇಗೆ ಎಂಬುದು ನನ್ನ ಪ್ರಶ್ನೆಯಾಗಿತ್ತು. ನೀವು ತಡವಾಗಿ ನೋಟಿಸ್‌ ನೀಡಿದರೂ ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಿದ್ದೇನೆ, ಧರಣಿ ಕೈ ಬಿಟ್ಟು ಆಸನಕ್ಕೆ ತೆರಳಿ ಎಂದರು.

ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ದೌರ್ಜನ್ಯ ನಡೆಸಿ ನಿನ್ನೆ ಸದನ ನಡೆಸಿದ್ದೀರಿ, ದಿನವಿಡೀ ನಾವು ನಿಂತುಕೊಳ್ಳುವಂತೆ ಮಾಡಿ, ಇದೀಗ ಗೃಹ ಸಚಿವರು ತಡವಾಗಿ ಧರಣಿ ಕೈ ಬಿಡಿ ಎಂದು ಸಲಹೆ ನೀಡುತ್ತಿದ್ದಾರೆ ಎಂದರು. ಸರಕಾರ ನಮ್ಮ ಧರಣಿ ನಡುವೆಯೇ ಜನತೆ ಮೇಲೆ ಸುಮಾರು 2,500 ಕೋಟಿ ತೆರಿಗೆ ಬರೆ ಎಳೆಯುವ ವಿಧೇಯಕಗಳನ್ನು ಪಾಸ್‌ ಮಾಡಿಕೊಂಡಿದೆ. ಪೀಠಕ್ಕೆ ಕಳಂಕ ಬರಬಾರದು ಎಂಬುದೇ ನಮ್ಮ ಉದ್ದೇಶವಾಗಿತ್ತು. ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಅವಕಾಶ ನೀಡಲು ಹಾಗೂ 69ರಡಿ ಚರ್ಚೆಗೆ ಅವಕಾಶ ನೀಡಿದ್ದರಿಂದ ಧರಣಿ ಹಿಂಪಡೆಯುತ್ತಿರುವುದಾಗಿ ಹೇಳಿದರು. ಅನಂತರ ಬಿಜೆಪಿ-ಜೆಡಿಎಸ್‌ ಸದಸ್ಯರು ಧರಣಿ ಕೈ ಬಿಟ್ಟು ತಮ್ಮ ಆಸನಗಳಿಗೆ ತೆರಳಿದರು.

370ರದ್ದು ಸುಪ್ರೀಂ ತೀರ್ಪು: ಗೊತ್ತುವಳಿ ಮಂಡನೆಗೆ ಒತ್ತಾಯ
ಬೆಳಗಾವಿ, ಡಿ. 12: ಜಮ್ಮು-ಕಾಶ್ಮೀರಕ್ಕೆ ಸಂವಿಧಾನ 370ನೇ ಕಲಂ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಇಂತಹ ಐತಿಹಾಸಿಕ ತೀರ್ಪಿಗೆ ಸಂತಸ ತೋರಿ ಗೊತ್ತುವಳಿ ಮಂಡಿಸಲು ಸರಕಾರ ಮುಂದಾಗಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯಿಸಿದರು.

Advertisement

ಮಂಗಳವಾರ ಕಲಾಪ ಆರಂಭವಾಗತ್ತಿದ್ದಂತೆ ವಿಷಯ ಪ್ರಸ್ತಾಪಿಸಿ, ಸುಪ್ರೀಂಕೋರ್ಟ್‌ ತನ್ನ ತೀರ್ಪಿನ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೆಲ ಒಂದೇ ಎಂಬ ನಿಲುವು ಪ್ರಕಟಿಸಿದೆ. ಇಂತಹ ಐತಿಹಾಸಿಕ ತೀರ್ಪಿನ ಬಗ್ಗೆ ಗೃಹ ಸಚಿವರು ಗೊತ್ತುವಳಿ ಮಂಡನೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಅಧಿವೇಶನ ಮೂಲಕ ದೇಶಕ್ಕೆ ಒಳ್ಳೆಯ ಸಂದೇಶ ನೀಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next