ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರ ಕಳೆದುಕೊಂಡು ಪ್ರತಿಪಕ್ಷದ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯ ಕಸರತ್ತು ಆರಂಭವಾಗಿದೆ. ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಸದನದ ಕಲಾಪಗಳಲ್ಲಿ ಪಾಲ್ಗೊಂಡಿದ್ದರು.
ಆದರೆ, ಕಾಂಗ್ರೆಸ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕರನ್ನು ಬೇರೆ ಬೇರೆಯವರಿಗೆ ವಹಿಸಬೇಕೆಂಬ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವುದರಿಂದ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಝಾದ್ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಂಗಳವಾರ ಎರಡೂ ಸದನಗಳ ಪ್ರತಿಪಕ್ಷದ ನಾಯಕರ ಆಯ್ಕೆ ಕುರಿತು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಗುಲಾಂ ನಬಿ ಆಝಾದ್ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹೊರತಾಗಿ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ ಹಾಗೂ ಡಾ.ಜಿ.ಪರಮೇಶ್ವರ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.
ಮೈತ್ರಿ ಸರ್ಕಾರದಲ್ಲಿ ಆರ್.ವಿ.ದೇಶಪಾಂಡೆ ಹಾಗೂ ಡಾ.ಜಿ.ಪರಮೇಶ್ವರ್ ಅವರು ಸಚಿವರಾಗಿ ಅಧಿಕಾರ ಅನುಭವಿಸಿದ್ದರಿಂದ ಎಚ್.ಕೆ. ಪಾಟೀಲ್‌ರಿಗೆ ಪ್ರತಿಪಕ್ಷದ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ಕುರಿತಂತೆಯೂ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಿ.ಎಂ. ಇಬ್ರಾಹಿಂ ಅವರನ್ನೂ ಮೇಲ್ಮನೆ ಪ್ರತಿಪಕ್ಷದ ನಾಯಕರನ್ನಾಗಿ ಮಾಡುವಂತೆ ಒತ್ತಡವೂ ಕೇಳಿ ಬರುತ್ತಿದೆ. ಇನ್ನು ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತರಾಗಿದ್ದ ಗಣೇಶ್ ಹುಕ್ಕೇರಿ ಅವರನ್ನೇ ಪ್ರತಿಪಕ್ಷದ ಮುಖ್ಯ ಸಚೇತಕರನ್ನಾಗಿ ಮುಂದುವರೆಸುವ ಸಾಧ್ಯತೆ ಇದೆ. ಮೇಲ್ಮನೆಗೆ ರಘು ಆಚಾರ್ ಅವರನ್ನು ಪ್ರತಿಪಕ್ಷದ ಸಚೇತಕರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.