ಹೊನ್ನಾವರ: ನಗರದ 20ಸಾವಿರ ಜನಕ್ಕೆ ನೀರುಣಿಸುವ ನಗರ ಮಧ್ಯದ ಸುಂದರ ಶೆಟ್ಟಿಕೆರೆ ನಾರುತ್ತಿದೆ. ಒಂದಾನೊಂದು ಕಾಲದಲ್ಲಿ ಯಾವನೋ ಪುಣ್ಯಾತ್ಮ ಶೆಟ್ಟಿ(ಪೂರ್ತಿ ಹೆಸರು ಗೊತ್ತಿಲ್ಲ) ಎಂಬವ ಊರು ನೀರುಣ್ಣಲಿ, ಗದ್ದೆ ಬೇಸಾಯ ನಡೆಯಲಿ ಎಂದು ಕಟ್ಟಿಸಿದ ಕೆರೆಕಟ್ಟೆಯನ್ನು ಸುಂದರ ಕೆತ್ತನೆಗಳಿಂದ ಅಲಂಕರಿಸಿದ್ದ.
1.5 ಎಕರೆ ವಿಸ್ತೀರ್ಣವಾದ ಈ ಕೆರೆಯ ಸುತ್ತಲಿನ ಗದ್ದೆಗಳೆಲ್ಲಾ ಮಾಯವಾಗಿ ಕಟ್ಟಡಗಳೆದ್ದಿವೆ. ಮನೆಯ ಬಾವಿಗೆ ಜಲಮೂಲವಾದ ಶೆಟ್ಟಿಕೆರೆ ಬತ್ತಿದೆ. ಕೇರಿಗೊಂದು ಬೋರ್ವೆಲ್ ಇದೆ. ಸುತ್ತಲೂ ಅತಿಕ್ರಮಣವಾಗಿದೆ. ಹೂಳೆತ್ತಿ ನಿರ್ವಹಣೆ ಮಾಡಿದರೆ ನಗರದ ಕುಡಿಯುವ ನೀರಿನ ಭವಣೆ ತಪ್ಪಿಸಬಹುದಿತ್ತು.
ನಗರ ಹೊಂದಿಕೊಂಡು ರಾಮತೀರ್ಥಕ್ಕಿಂತ ಮುಂದೆ ಇರುವ ಅರೆಸಾಮಿ ಕೆರೆ ಮೂಲತಃ ಕೆಂಪುಕಲ್ಲಿಗೆ ತೆಗೆದ ಹೊಂಡ. 4.5ಎಕರೆ ವಿಸ್ತೀರ್ಣವಾದ ಈ ಹೊಂಡದಲ್ಲಿ ಮಳೆಗಾಲದಲ್ಲಿ ನೀರುತುಂಬಿ ಬೇಸಿಗೆಯ ಕೊನೆಯ ತನಕ ಉಳಿದು ಕರ್ಕಿ ಗ್ರಾಮದ ಎರಡನೇ ಬೆಳೆಗೆ ಅನುಕೂಲವಾಗುತ್ತಿತ್ತು. ಹೂಳುತುಂಬಿ ಮುಚ್ಚಿಹೋಗಿತ್ತು. ಒಂದಿಷ್ಟು ವರ್ಷ ಹಂಚಿನ ಮಣ್ಣು ತೆಗೆದು ಮತ್ತೆ ನೀರು ನಿಲ್ಲುವಂತೆ ಮಾಡಿದರು. ಕರ್ಕಿಯವರು ಎರಡನೇ ಬೇಸಾಯ ಬಿಟ್ಟರು. ಅವರಿವರ ವಾಹನ ತೊಳೆಯಲು ಅರೆಸಾಮಿ ಕೆರೆ ಬಳಕೆಯಾಗುತ್ತಾ ಬಂದಿದೆ. ಸುತ್ತಲೂ ಬೋರ್ವೆಲ್ಗಳು ಎದ್ದಿವೆ, ಅರಸಾಮಿ ಕೆರೆ ಒಣಗಿದೆ.
ಈ ಕೆರೆಯ ಮೇಲ್ಭಾಗದಲ್ಲಿ ಪಪಂ 12ಎಕರೆ ಸ್ಥಳ ಪಡೆದು ತ್ಯಾಜ್ಯ ಸಂಗ್ರಹಣಾ ಘಟಕ ಆರಂಭಿಸಿದೆ. ಮಳೆಗಾಲದಲ್ಲಿ ತ್ಯಾಜ್ಯಘಟಕದ ಮಧ್ಯೆಯಿಂದ ಹರಿದು ಬರುವ ಹಳ್ಳ ಅರೆಸಾಮಿಕರೆ ತುಂಬಿಸುತ್ತದೆ. ಇದನ್ನು ತಪ್ಪಿಸುವುದು ಸಾಧ್ಯವಿಲ್ಲ. ಆದ್ದರಿಂದ ಅರೆಸಾಮಿ ಕೆರೆ ಉದ್ಧಾರಕ್ಕೆ ಹಲವು ಕಂಟಕಗಳಿವೆ. ಪೂರ್ವಜರು ಕಟ್ಟಿಸಿದ ಕೆರೆಕಟ್ಟೆಗಳು ಸರಿಯಾಗಿರಲು ನಾವೊಂದಿಷ್ಟು ತ್ಯಾಗ ಮಾಡಬೇಕು. ಜನ ಸಹಕರಿಸಬೇಕು ಎಂಬ ಭಾವನೆ ಇಲ್ಲದಿರುವುದರಿಂದ ಎಲ್ಲವೂ ಮಣ್ಣುಪಾಲಾಗುತ್ತಿದೆ. ಈಗ ಕುಮಟಾದಿಂದ ಕುಡಿಯುವ ನೀರು ಬರುತ್ತಿದೆ. ಶರಾವತಿ ನೀರು ತರುವ ಯೋಜನೆ ಕಾರ್ಯಗತವಾಗಲು 10ವರ್ಷ ಬೇಕು. ಅಲ್ಲಿಯವರೆಗೆ ಬೇಕಷ್ಟು ನೀರು ಮಳೆಗಾಲದಲ್ಲೂ ಸಿಗುವುದಿಲ್ಲ.
ತಾಲೂಕಿನ ಎರಡು ದೊಡ್ಡ ಕೆರೆಗಳ ಗತಿ ಇದಾದರೆ ಹಳ್ಳಿಗಳಲ್ಲಿರುವ ನೂರಾರು ಕೆರೆಗಳ ದುರ್ಗತಿ ಬೇರೆ. ಸಾಮೂಹಿಕ ನೀರಾವರಿಗಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನೀರಿಂಗಿಸಲು ತೋಟಗಳ ಮಧ್ಯೆ ದೊಡ್ಡ ನೂರಾರು ಕೆರೆಗಳಿವೆ. ಸರಾಸರಿ ಎರಡು ಎಕರೆಗೆ ಒಂದರಂತೆ ಹಳ್ಳಿಗಳಲ್ಲಿ ಕೆರೆಗಳಿದ್ದವು. ಕೇರಿಯವರು ಹಂಚಿಕೊಂಡು ತೋಟಕ್ಕೆ ನೀರು ಹಾಯಿಸುತ್ತಿದ್ದರು. ಕೆರೆ ಇದ್ದವನಿಗೆ ಸ್ವಲ್ಪ ಹೆಚ್ಚು ನೀರು ಸಿಗುತ್ತಿತ್ತು. ಹತ್ತಾರು ಸಹೋದರರು, ದಾಯಾದಿಗಳು ಬಾಂಧವ್ಯದಿಂದಿದ್ದರು. ಬಾಂಧವ್ಯಗಳು ಕಳಚಿದವು. ಭೂಮಿ ಬೇರೆಯಾಯಿತು. ನೀರಿನ ಜಗಳ ಕೋರ್ಟ್ ಮೆಟ್ಟಿಲೇರಿತು. ಎಲ್ಲರೂ ಕೆರೆ ಮುಚ್ಚಿ ಅಡಕೆ, ತೆಂಗಿನ ಗಿಡ ನೆಟ್ಟರು. ಮನೆಗೊಂದರಂತೆ ಬೋರ್ವೆಲ್ ತೆಗೆದರು. ಈಗ ಅಂತರ್ಜಲ ಕುಸಿದು ಬೋರು ಬರಿದಾಗಿದೆ.
ದೊಡ್ಡವರ ಮನೆಗಳಲ್ಲಿ ಬಟ್ಟೆ, ಪಾತ್ರೆ ತೊಳೆಯಲು ಮನೆಯ ಹಿಂದಿನ ಕೆರೆ, ತೋಟಕ್ಕೆ ನೀರಿಗೆ, ಗಂಡಸರ ಸ್ನಾನಕ್ಕೆ ಮುಂದಿನ ಕೆರೆಯ ನೀರು ಬಳಕೆಯಾಗುತ್ತಿತ್ತು. ಈಗ ಕೆರೆ ಮೆಚ್ಚಿ ಮನೆ ಕಟ್ಟಿದ್ದಾರೆ. ಅಂಗಳದ ಬೋರ್ವೆಲ್ 3ಇಂಚು ನೀರು ಕೊಡುತ್ತಿದೆ. ಪ್ರತಿಯೊಬ್ಬರ ತೋಟದಲ್ಲಿರುವ ಕೆರೆಗಳು ನೇರ ಅವರಿಗೆ ನೀರು ಕೊಟ್ಟರೆ ಇನ್ನೊಬ್ಬರಿಗೆ ನೀರಿಂಗಿಸಿ ಕೊಡುತ್ತಿದ್ದವು. ಈಗ ಯಾರಿಗೂ ಇಲ್ಲ. ಸಣ್ಣಸಣ್ಣ ಹಿಡುವಳಿದಾರರಿರುವ ತಾಲೂಕಿನಲ್ಲಿ ಟ್ಯಾಂಕ್ ರಜಿಸ್ಟರ್‌ಗಳು (ಕೆರೆದಾಖಲೆಗಳು) ಬ್ರಿಟಿಷ್ ಕಾಲದಿಂದ ಇದ್ದವು. ಇವುಗಳ ಆಧಾರದ ಮೇಲೆ ನೀರಿನ ಹಕ್ಕು ನಿರ್ಧರಿಸಲಾಗುತ್ತಿತ್ತು. ಈಗ ಟ್ಯಾಂಕು ಇಲ್ಲ, ರಜಿಸ್ಟರ್ ಇಲ್ಲ.
ಮಳೆಗಾಲ ಮೂರು ತಿಂಗಳು ಮಳೆಬೀಳುವ ತಾಲೂಕಿನಲ್ಲಿ ತೋಟಗಳು ನೀರಿಲ್ಲದೆ ಹೆಡೆ ಉದುರಿಸುತ್ತಿವೆ. ಬಾಳೆಮರ ನೀರಿಲ್ಲದೆ ಬೆಳೆಯುವ ಮೊದಲೇ ಗೋಣು ಮುರಿದುಕೊಂಡು ನಿಂತಿವೆ. ಸ್ವಲ್ಪ ಹೆಚ್ಚುಕಡಿಮೆ ಆಗಿನಷ್ಟೇ ಸರಾಸರಿ ಮಳೆ ಈಗಲೂ ಇದೆ. ಯಾಕೆ ನೀರಿಗೆ ಗತಿಯಿಲ್ಲ. ಪ್ರಕೃತಿ ಸಹಜ ವ್ಯವಸ್ಥೆಯನ್ನು ಕೆಡಿಸಿದ್ದೇವೆ. ಹೊಸ ವ್ಯವಸ್ಥೆ ಮಾಡಿಕೊಳ್ಳಲು ಶಕ್ತಿ ಇಲ್ಲದೆ ಸರ್ಕಾರದ ಮುಖ ನೋಡುತ್ತೇವೆ. ಸರ್ಕಾರ ಗುಟುಕು ಕೊಡುತ್ತದೆ. ಅತ್ತ ಸಾಯಲು ಬಿಡುತ್ತಿಲ್ಲ, ಇತ್ತ ಇರಲು ಬಿಡುತ್ತಿಲ್ಲ. ಬಯಲು ಸೀಮೆಯ ರೈತರು ಇಂತಹದನ್ನು ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರು. ನಮಗೆ ಆ ಪರಿಸ್ಥಿತಿ ಬೇಡವಾದರೆ ನೀರಿಂಗಿಸುವ, ನೀರು ನಿರ್ವಹಿಸುವ ಜಾಣ್ಮೆ ತೋರಬೇಕು.
ಜೀಯು, ಹೊನ್ನಾವರ