Advertisement
ಕ್ಯುಆರ್ ಕೋಡ್ ಬಗೆಗಿನ ಒಂದಷ್ಟು ವಿವರಗಳನ್ನು ನೋಡೋಣ. ಇದು ಕ್ವಿಕ್ ರೆಸ್ಪಾನ್ಸ್ ಕೋಡ್ ಪದದ ಸಂಕ್ಷಿಪ್ತ ರೂಪ. ಆಟೊಮೋಟಿವ್ ಕೈಗಾರಿಕ ವಿಭಾಗದ ಅಗತ್ಯತೆ ಪೂರೈಸುವ ಉದ್ದೇಶದಿಂದ ಜಪಾನಿನ ಡೆನ್ಸೊ ವೇವ್ ಹೆಸರಿನ ಸಂಸ್ಥೆ 1994ರಲ್ಲಿ ಈ ತಂತ್ರಜ್ಞಾನ ಸಂಶೋಧಿಸಿ ಬಳಸಲು ಆರಂಭ ಮಾಡಿತು.
Related Articles
Advertisement
ಕಳೆದ ದೀಪಾವಳಿ ಸಮಯದಿಂದ ದೇಶದ ಹಲವಾರು ರಾಜ್ಯಗಳು ಕೇವಲ ಹಸುರು ಪಟಾಕಿ ಉತ್ಪಾದಿಸಿ ಮಾರಾಟ ಮತ್ತು ಸಿಡಿಸಲು ಅನುಮತಿ ನೀಡಿದ್ದು ಬಹಳ ದೊಡ್ಡ ವಿವಾದ ಮತ್ತು ಸುದ್ದಿಯಾಗಿತ್ತು. “ಯಾವ್ಯಾವ ಪಟಾಕಿ ಪೆಟ್ಟಿಗೆಗಳು ಹಸುರು ಪಟಾಕಿ ಪ್ರಭೇದಗಳು ಎಂದು ಹೇಗೆ ದೃಢೀಕರಿಸುವುದು?’ ಎಂದು ಚಿಂತೆಯಲ್ಲಿ ಇದ್ದ ಅಧಿಕಾರಿಗಳಿಗೆ ಹೊಳೆದದ್ದು ಮತ್ತು ನೆರವಾದದ್ದು ಇದೇ ಕ್ಯುಆರ್ ಕೋಡ್! ಸರಕಾರ ಹಸುರು ಪಟಾಕಿ ಎಂದು ತಿಳಿಯಲು ಮತ್ತು ಪತ್ತೆ ಹಚ್ಚಲು ಪಟಾಕಿ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ತನ್ನ ಪೋರ್ಟಲ್‌ನಲ್ಲಿ ಕಡ್ಡಾಯ ನೋಂದಣಿ ಮಾಡುವಂತೆ ಆದೇಶ ಹೊರಡಿಸಿತು. ಎಲ್ಲ ಅಧಿಕೃತ ನೋಂದಣಿದಾರರಿಗೆ ವಿಶಿಷ್ಟ ಕ್ಯುಆರ್ ಕೋಡ್‌ಗಳನ್ನು ನೀಡಿ ಪಟಾಕಿ ಪೆಟ್ಟಿಗೆಗಳ ಮೇಲೆ ಕಡ್ಡಾಯವಾಗಿ ಮುದ್ರಿಸುವಂತೆ ಫರ್ಮಾನು ಹೊರಡಿಸಿತು. ನಕಲಿ, ಅನಧಿಕೃತ ಮತ್ತು ಪರಿಸರಕ್ಕೆ ಹೆಚ್ಚು ಮಾರಕ ಪಟಾಕಿಗಳನ್ನು ಸುಲಭದಲ್ಲಿ ಪತ್ತೆಹಚ್ಚಲು ಇದು ಸಹಕಾರಿಯಾಯಿತು. ಖರೀದಿಸಲು ಬಯಸಿದ ಪಟಾಕಿ ಪೆಟ್ಟಿಗೆಯ ಮೇಲಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನಸಾಮಾನ್ಯರಿಗೆ ನಕಲಿ-ಅಸಲಿ ಪಟಾಕಿಯ ಮಾಹಿತಿ ದೃಢೀಕರಿಸುವಲ್ಲಿ ಈ ತಂತ್ರಜ್ಞಾನ ನೆರವಾಯಿತು.
ಪ್ರಕಟಿತ ಮಾಹಿತಿಗಳ ಪ್ರಕಾರ, ಪ್ರತಿಯೊಬ್ಬರ ಬ್ಯಾಂಕ್ ಖಾತೆ ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗಳ ಮತ್ತು ಇತರ ಎಲ್ಲ ವ್ಯವಹಾರಗಳ ಕ್ಯುಆರ್ ಕೋಡ್ ಸೇರಿದಂತೆ ದೇಶದಲ್ಲಿ ಉಪಯೋಗದಲ್ಲಿ (ಚಲಾವಣೆಯಲ್ಲಿ!) ಇರುವ ಒಟ್ಟು ಕ್ಯುಆರ್ ಕೋಡ್‌ಗಳ ಸಂಖ್ಯೆ ಅಂದಾಜು 400 ಕೋಟಿಗಳಿಗೂ ಹೆಚ್ಚು! ಇವೆಲ್ಲವೂ ನೋಡಲು ಒಂದೇ ರೀತಿ ಕಂಡರೂ ಇದರಲ್ಲಿ ಪ್ರತಿಯೊಂದು ಕ್ಯುಆರ್ ಕೋಡ್ ಕೂಡ ಅನನ್ಯ-ವಿಶಿಷ್ಟ (ಯುನಿಕ್)! ಅಬ್ಟಾ ಈ ತಂತ್ರಜ್ಞಾನ ಸಂಶೋಧಿಸಿ, ಈ ಮಟ್ಟಕ್ಕೆ ಬೆಳೆದು ನಿಂತು, ಜನರಿಗೆ ಈ ವ್ಯಾಪ್ತಿಯಲ್ಲಿ ಉಚಿತ ಸೇವೆ ಒದಗಿಸುವ ಪರಿ ನಿಜಕ್ಕೂ ಅಚ್ಚರಿ.
ಬ್ಯಾಂಕ್‌ಗಳ ಒಕ್ಕೂಟದ ಮಾಹಿತಿಯ ಪ್ರಕಾರ ದೇಶದಾದ್ಯಂತ ಇರುವ ಬ್ಯಾಂಕ್ ಖಾತೆಗಳು ಮತ್ತು ಎಟಿಎಂಗಳಿಗೆ ಹೋಲಿಸಿದರೆ ಕೊರೊನಾ ಕಾಲಘಟ್ಟದ ಅನಂತರದ ಕಾಲದಲ್ಲಿ ಜನರು ವರ್ಷದಿಂದ ವರ್ಷಕ್ಕೆ (Year on Year) ವ್ಯವಹಾರಕ್ಕೆ ನಗದು ಬಳಸುವ ಪ್ರಮಾಣ ಅಂದಾಜು ಶೇ.4-ಶೇ.5 ಕಡಿಮೆಯಾಗುತ್ತಿದೆ. ಜನರ ಖರ್ಚಿನ ಅಭ್ಯಾಸ (spending habit) ದಿನೇದಿನೆ ಜಾಸ್ತಿಯಾಗುತ್ತಿರುವ ಪರಿಣಾಮ ಕ್ಯುಆರ್ ಕೋಡ್ ತಂತ್ರಜ್ಞಾನ ಸೇರಿದಂತೆ ಆನ್‌ಲೈನ್ ವಹಿವಾಟಿನ ಸಂಖ್ಯೆ (ಮೊತ್ತ ಅಲ್ಲ) ವರ್ಷದಿಂದ ವರ್ಷಕ್ಕೆ ಸುಮಾರು ಶೇ. 5.5- ಶೇ.6 ವೃದ್ಧಿಸುತ್ತಿದೆ. ದೇಶದಾದ್ಯಂತ ನಡೆಯುವ ಐದು ವಹಿವಾಟುಗಳಲ್ಲಿ ಮೂರು ವಹಿವಾಟು ಆನ್‌ಲೈನ್ ಮೂಲಕ ಮತ್ತು ಆ ಮೂರರಲ್ಲಿ ಎರಡು ಕ್ಯುಆರ್ ಕೋಡ್ ಆಧಾರಿತ! ಅಂದರೆ ದೇಶದ ಒಟ್ಟು ವ್ಯವಹಾರಗಳ ಸಂಖ್ಯೆಯ (ಮೊತ್ತ ಅಲ್ಲ) ಅಂದಾಜು ಶೇ.40 ವ್ಯವಹಾರಗಳು ಕ್ಯುಆರ್ ಕೋಡ್ ಬಳಸಿ ಆಗುತ್ತಿವೆ. ಇದಕ್ಕೆ ಬಳಸಲ್ಪಡುವ ತಂತ್ರಜ್ಞಾನ, ಸರ್ವರ್, ಅಂತರ್ಜಾಲ, 24/7 ಆವರ್ತನದಲ್ಲಿ ಬೆಂಬಲಿಸುವ ತಂಡ… ಹೀಗೆ ಅಬ್ಟಾ ಇದೊಂದು ಯಾರೂ ಇನ್ನೂ ಸರಿಯಾಗಿ ಊಹಿಸದ, ಶೋಧಿಸದ, ಖನನ ಮಾಡಿರದ ದೊಡ್ಡ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಕಲಿಯುತ್ತಿರುವವರಿಗೆ ಈ ಕ್ಷೇತ್ರ ಸಂಶೋಧನೆಗೆ ತೆರೆದಿಟ್ಟ ಅವಕಾಶಗಳು ಆಗಸದಷ್ಟು. ಪೇಮೆಂಟ್ ಬ್ಯಾಂಕ್‌ಗಳು ಪ್ರವರ್ಧಮಾನಕ್ಕೆ ಬಂದುದರ ನೇರ, ಗುರುತರ ಮತ್ತು ಧನಾತ್ಮಕ ಪರಿಣಾಮವಿದು.
ಕೊನೆಯದಾಗಿ: ಕಲಿಯುಗದ ತಂತ್ರಜ್ಞಾನ, ಇಂಟರ್‌ನೆಟ್ ಆಧಾರಿತ ಬದುಕಿನ “ಜಾಲತಾಣ ಪಯಣ’ದಲ್ಲಿ “ಬಿಟ್ಟೇನೆಂದರೂ ನಮ್ಮನ್ನು ಬಿಡದು ನೋಡು ಈ ಮಾಯೆ; ಕ್ಯುಆರ್ ಕೋಡ್ ಎಂಬ ತಂತ್ರಾಂಶ-ತಂತ್ರಜ್ಞಾನದ ಛಾಯೆ’. ಜಗದ ನಾಳೆಗಳ ವಿದ್ಯಮಾನಗಳ ಕುರಿತ ಭವಿಷ್ಯದ ಊಹನೆ ಕಷ್ಟಸಾಧ್ಯ; ಆದರೆ ಕ್ಯುಆರ್ ಕೋಡ್ ತಂತ್ರಜ್ಞಾನದ ನಾಳೆಗಳ ಭವಿಷ್ಯ ಮತ್ತಷ್ಟು ವಿಸ್ತರಿಸಲಿದೆ ಮತ್ತು ಉಜ್ವಲವಾಗಿರಲಿದೆ!
– ರವೀ ಸಜಂಗದ್ದೆ