Advertisement

ಎಲ್ಲರೂ ಲಸಿಕೆ ಪಡೆಯುವುದೊಂದೇ ಪರಿಹಾರ

11:47 PM Dec 01, 2021 | Team Udayavani |

ಇಡೀ ಜಗತ್ತಿನಲ್ಲೀಗ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಒಮಿಕ್ರಾನ್‌ನದ್ದೇ ಸದ್ದು. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ರೂಪಾಂತರಿ ಬೇಗನೆ ಹರಡುತ್ತದೆ ಎಂಬ ಆತಂಕದ ಜತೆಯಲ್ಲೇ ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಎಚ್ಚರದಿಂದ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಭಾರತದಲ್ಲಿ 2ನೇ ಅಲೆ ಎದುರಿಸಿದ್ದ ಜನರಿಗೆ ಈ ಹೊಸ ರೂಪಾಂತರಿ ಭಯ ಹುಟ್ಟಿಸಿದೆ. ಆದರೆ ದೇಶದ ಪ್ರಮುಖ ಆಸ್ಪತ್ರೆಗಳ ವೈದ್ಯರು, ಎಲ್ಲರಿಗೂ ಲಸಿಕೆ ಹಾಕುವುದೊಂದೇ ಹೊಸ ಹೊಸ ರೂಪಾಂತರಿಗಳನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದಿದ್ದಾರೆ.

Advertisement

ವಿನೀತಾ ಬಾಲ್‌, ಭಾರತೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಪುಣೆ
1. ವೈರಸ್‌ಗಳು ರೂಪಾಂತರವಾಗುತ್ತಲೇ ಇರುತ್ತವೆ. ಆರ್‌ಎನ್‌ಎ ವೈರಸ್‌ಗಳು, ಡಿಎನ್‌ಎ ವೈರಸ್‌ಗಳಿಗಿಂತ ಹೆಚ್ಚಾಗಿ ರೂಪಾಂತರವಾಗುತ್ತವೆ. ಸಾರ್ಸ್‌ -ಸಿಒವಿ2 ಒಂದು ಆರ್‌ಎನ್‌ಎ ವೈರಸ್‌. ಕಳೆದ 20 ತಿಂಗಳುಗಳಿಂದಲೂ ಈ ವೈರಸ್‌ ರೂಪಾಂತರವಾಗುತ್ತಲೇ ಇದೆ. ಹೀಗಾಗಿ ಈಗ ಹೊಸದಾಗಿ ಪತ್ತೆಯಾಗಿರುವ ರೂಪಾಂತರಿ ಅಚ್ಚರಿಯೇನಲ್ಲ. ಇದು ಖಂಡಿತವಾಗಿಯೂ ಕೊನೆಯೂ ಅಲ್ಲ. ಮುಂದಿನ ದಿನಗಳಲ್ಲಿಯೂ ಈ ವೈರಸ್‌ ಹೆಚ್ಚು ಹೆಚ್ಚಾಗಿ ರೂಪಾಂತರ ವಾಗುತ್ತಲೇ ಇರುತ್ತದೆ. ವಿಜ್ಞಾನದ ದೃಷ್ಟಿಯಿಂದ ಹೇಳುವುದಾದರೆ ಇದು ಅಚ್ಚರಿ ತರುವ ವಿಚಾರವೇನಲ್ಲ.

2. ಈ ವೈರಸ್‌ನ ಹರಡುವಿಕೆಯನ್ನು ತಡೆಯುವ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಕಠಿನವಾದ ವಿಚಕ್ಷಣೆಯ ಜತೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಬೇಕು. ಹಾಗೆಯೇ ತ್ವರಿತಗತಿಯಲ್ಲಿ ಪರೀಕ್ಷಾ ವರದಿ ಬರುವಂತೆ ನೋಡಿಕೊಳ್ಳಬೇಕು. ಈಗ ಇದಕ್ಕಿಂತ ಹೆಚ್ಚು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಯಾರೊಬ್ಬರಿಗಾದರೂ ಹೊಸ ರೂಪಾಂತರಿ ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕಿಸಿ, ಅವರ ಸಂಪರ್ಕಿತರನ್ನು ಹುಡುಕಿ ಪರೀಕ್ಷೆ ನಡೆಸಿ, ಐಸೊಲೇಶನ್‌ನಲ್ಲಿ ಇಡಬೇಕು.

3. ಒಮಿಕ್ರಾನ್‌ ರೂಪಾಂತರಿಯಿಂದ ಎರಡೂ ಡೋಸ್‌ ಲಸಿಕೆ ಪಡೆದವರು ಒಂದಷ್ಟು ರಕ್ಷಣೆ ಪಡೆಯುವ ಸಾಧ್ಯತೆ ಇದೆ. ಲಸಿಕೆಯ ಪರಿಣಾಮಕತ್ವವನ್ನು ಸಂಪೂರ್ಣವಾಗಿ ಈ ರೂಪಾಂತರಿ ಬೈಪಾಸ್‌ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಭಾರತದಲ್ಲಿ ಇನ್ನೂ ಬಹಳಷ್ಟು ಮಂದಿ ಲಸಿಕೆ ಪಡೆಯಬೇಕಾಗಿದೆ. ಅವರೆಲ್ಲರೂ ಲಸಿಕೆ ಪಡೆಯುವುದು ಸೂಕ್ತ.

ದಿಲೀಪ್‌ ಮಾವಲಂಕರ್‌, ಭಾರತೀಯ ಸಾರ್ವಜನಿಕ
ಆರೋಗ್ಯ ಸಂಸ್ಥೆಯ ಮುಖ್ಯಸ್ಥರು, ಗಾಂಧಿನಗರ
1. ಒಮಿಕ್ರಾನ್‌ ರೂಪಾಂತರಿ ಭಾರತಕ್ಕೆ ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುವುದೇ ತಪ್ಪು. ಏಕೆಂದರೆ, ಈ ರೂಪಾಂತರಿ ಹಾಂಗ್‌ಕಾಂಗ್‌, ಇಸ್ರೇಲ್‌ನಲ್ಲಿ ಕಾಣಿಸಿಕೊಂಡಿದೆ ಎಂದಾದ ಮೇಲೆ ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಕಾಣಿಸಿಕೊಳ್ಳಬಹುದು.

Advertisement

2. ನಮ್ಮಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಕೆಲವು ಅಂತಾರಾಷ್ಟ್ರೀಯ ಪ್ರಯಾಣಿಕರು ದಕ್ಷಿಣ ಆಫ್ರಿಕಾದಿಂದ ಮಧ್ಯ ಪ್ರಾಚ್ಯ ದೇಶಗಳಿಗೆ ಬಂದು, ಅಲ್ಲಿಂದ ಇಲ್ಲಿಗೆ ಬರುತ್ತಾರೆ. ಕಳೆದ ಎರಡು ವಾರದಲ್ಲಿ ಹೀಗೆ ಬಂದವರ ಮೇಲೆ ನಿಗಾ ಇಡಬೇಕು.

3. ಇತ್ತೀಚಿನ ದಿನಗಳಲ್ಲಿ ಕೊರೊನಾ ಬಗ್ಗೆ ನಮ್ಮ ಜನರಲ್ಲಿ ಭಯ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಪಾಲನೆ ಮಾಡಿರಲಿಲ್ಲ. ಅಲ್ಲಿ ಸರಿಯಾಗಿ ಗಾಳಿ-ಬೆಳಕಿನ ವ್ಯವಸ್ಥೆಯೂ ಇರಲಿಲ್ಲ.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಡಾ| ಅಲೆಕ್ಸ್‌ ಥಾಮಸ್‌, ಆರೋಗ್ಯ ಸೇವೆ ಪೂರೈಸುವ ಸಂಸ್ಥೆಯ ಸಂಘದ ರಾಷ್ಟ್ರೀಯ ಅಧ್ಯಕ್ಷರು.
1. ನನಗೆ ಗೊತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಬಗ್ಗೆ ಇಡೀ ಜಗತ್ತೇ ಪ್ಯಾನಿಕ್‌ ಮೋಡ್‌ಗೆ ಬಂದಿದೆ ಎಂಬುದು. ಆದರೆ ಈಗಲೇ ಆತಂಕಗೊಳ್ಳುವ ಅಗತ್ಯವಿಲ್ಲ. ಒಂದಷ್ಟು ದಿನ ಕಾದು ನೋಡೋಣ.

2. ಜಗತ್ತಿನಲ್ಲಿ ಬೇಗನೇ ಹರಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಕಾರಣಕ್ಕಾಗಿ ಈ ಪ್ರಮಾಣದ ಆತಂಕ ಕಾಣಿಸಿಕೊಂಡಿದೆ. ಈ ಭಯ ಬಿಟ್ಟು, ಭಾರತದಂಥ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಮುಂದಾಗಬೇಕು.

ಡಾ| ಗಗನ್‌ದೀಪ್‌ ಕಾಂಗ್‌, ಬಯೋಮೆಡಿಕಲ್‌ ವಿಜ್ಞಾನಿ
1. ಭಾರತದಲ್ಲಿ ನಾವು ಒಂದಷ್ಟು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಇದಕ್ಕೆ ಕಾರಣ, ನಮ್ಮಲ್ಲಿ ಎಷ್ಟೋ ಮಂದಿ ಲಸಿಕೆ ಪಡೆಯುವ ಮುನ್ನವೇ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಲಸಿಕೆ ಮತ್ತು ಅವರ ದೇಹದಲ್ಲಿ ಬೆಳೆದ ರೋಗ ನಿರೋಧಕ ಶಕ್ತಿ ಒಂದಷ್ಟು ಕೆಲಸ ಮಾಡುತ್ತಿದೆ. ಇಲ್ಲಿ ನಮಗೆ ಹೆಚ್ಚಿನ ಅದೃಷ್ಟವಿದೆ.

2. ಲಸಿಕೆ ಪಡೆದವರಿಗೂ ಸೋಂಕು ಬರುವ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಇಲ್ಲಿ ಹೆಚ್ಚು ಯೋಚನೆ ಮಾಡಬೇಕಾಗಿರುವುದು ಇವರು ಎಷ್ಟು ಜನಕ್ಕೆ ಸೋಂಕನ್ನು ಹರಡಿಸುತ್ತಾರೆ ಎಂಬುದು. ಹಾಗೆಯೇ ಇವರಿಗೆ ಸೋಂಕು ಎಷ್ಟು ಕಾಡಲಿದೆ ಎಂಬುದು ಪ್ರಮುಖ.

3. ಹೆಚ್ಚು ಹರಡಲಿದೆ ಎಂಬ ಕಾರಣಕ್ಕಾಗಿ ಇದು ಹೆಚ್ಚು ಗಂಭೀರವಾಗಿರಲಿದೆ ಎಂದು ಭಾವಿಸಬೇಕಾಗಿಲ್ಲ. ಕೆಲವು ಹೆಚ್ಚು ಹರಡುವ ವೈರಾಣುಗಳು ಕೆಲವೊಮ್ಮೆ ಗಂಭೀರವಾದ ತೊಂದರೆ ನೀಡದೇ ಹೋಗಿವೆ. ಹೀಗಾಗಿ ಒಮಿಕ್ರಾನ್‌ ಕೂಡ ಕಡಿಮೆ ಗಂಭೀರತೆಯನ್ನು ಹೊಂದಿದ್ದರೆ ನಾವೇ ಅದೃಷ್ಟಶಾಲಿಗಳು.

ಪ್ರಭಾತ್‌ ಝಾ, ಸೆ.ಮಿಶೆಲ್‌ ಆಸ್ಪತ್ರೆಯ ಜಾಗತಿಕ ಆರೋಗ್ಯ ಸಂಶೋಧನೆ ಕೇಂದ್ರದ ಸ್ಥಾಪಕ ನಿರ್ದೇಶಕ, ಟೊರಾಂಟೋ
1. ದಕ್ಷಿಣ ಆಫ್ರಿಕಾದಲ್ಲಿ ಲಸಿಕೆಯ ಕವರೇಜ್‌ ತೀರಾ ಕಡಿಮೆ ಇದೆ. ಇಲ್ಲಿ ಕೇವಲ ಶೇ.35ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಹಾಗೆಯೇ ಇಡೀ ಆಫ್ರಿಕಾವನ್ನು ತೆಗೆದುಕೊಂಡರೆ ಕೇವಲ 10ರಷ್ಟು ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಭಾರತದಲ್ಲಿಯೂ ಲಸಿಕೆ ಪ್ರಮಾಣ ಕಡಿಮೆ ಇದೆ. ಹೀಗಾಗಿ ಇಲ್ಲಿ ಸೋಂಕು ಬೇಗನೇ ಹರಡುತ್ತದೆ.

2. ಕೇವಲ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧ ಮಾಡುವುದರಿಂದ ಒಮಿಕ್ರಾನ್‌ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ. ಇದರ ಜತೆಗೆ ವಿದೇಶದಿಂದ ಬರುವವರ ಪರೀಕ್ಷೆ ಮತ್ತು 7 ದಿನಗಳ ಕ್ವಾರಂಟೈನ್‌ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿನೋಟೈಪಿಂಗ್‌ ಪರೀಕ್ಷೆಯನ್ನು ದೇಶಾದ್ಯಂತ ವ್ಯಾಪಿಸಬೇಕು. ಸದ್ಯದ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ಬೇಗನೇ ಫ‌ಲಿತಾಂಶ ಪಡೆಯಬೇಕು.

3. ಎಲ್ಲರಿಗೂ ಲಸಿಕೆಯನ್ನು ನೀಡಲು ಆದ್ಯತೆ ನೀಡಬೇಕು. ಕಡೇ ಪಕ್ಷ ಎಲ್ಲರಿಗೂ ಒಂದು ಡೋಸ್‌ ಆದರೂ ಸಿಗಬೇಕು. ಹಾಗೆಯೇ ಲಸಿಕೆ ಪಡೆದವರಿಗಿಂತ ಪಡೆಯದವರೇ ಹೊಸ ಹೊಸ ರೂಪಾಂತರಿಗಳನ್ನು ಹೆಚ್ಚಾಗಿ ಸೃಷ್ಟಿಸಬಲ್ಲರು. ಹೀಗಾಗಿ ಎಲ್ಲರಿಗೂ ಲಸಿಕೆ ನೀಡುವುದೊಂದೇ ಉಳಿದಿರುವ ದಾರಿ.

ರಾಕೇಶ್‌ ಮಿಶ್ರ, ಟಾಟಾ ಜಿನೆಟಿಕ್ಸ್‌ ಮತ್ತು ಸೊಸೈಟಿ ಸಂಸ್ಥೆಯ ನಿರ್ದೇಶಕ
1. ಈಗ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ ರೂಪಾಂತರಿಯಂತೆ ಇನ್ನೂ ಹಲವಾರು ರೂಪಾಂತರಿಗಳು ಬಂದು ಹೋಗಿರಬಹುದು. ಹಾಗೆಯೇ ಮುಂದೆಯೂ ಬರಬಹುದು. ಎಲ್ಲ ವೈರಸ್‌ಗಳ ಕಥೆಯೂ ಇದೇ ಆಗಿರುತ್ತದೆ. ನೂರಾರು ರೂಪಾಂತರಿಗಳು ಬಂದು ಹೋಗಿದ್ದರೂ ವೇಗವಾಗಿ ಹರಡುವ ಶಕ್ತಿ ಇರುವಂಥ ರೂಪಾಂತರಿಗಳು ಮಾತ್ರ ಎಲ್ಲರಿಗೂ ಕಾಣಸಿಗುತ್ತವೆ. ಈಗಲೇ ಇದು ಸೂಪರ್‌ ಸ್ಪ್ರೆಡರ್‌ ರೀತಿ ಹರಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾದ ಡಾಟಾ ನೋಡಿದ ಮೇಲೆ ಈ ನಿರ್ಧಾರಕ್ಕೆ ಬರಬಹುದು.

2. ಇದು ಹೆಚ್ಚಾಗಿ ಹರಡಬಾರದು ಎಂದರೆ ಸರಕಾರಗಳು ಮತ್ತು ಜನ ಸಮಾನವಾದ ಜವಾಬ್ದಾರಿ ಹೊರಬೇಕು. ಅಂದರೆ, ಸರ್ಕಾರದ ಮಟ್ಟದಲ್ಲಿ ಪರೀಕ್ಷೆ ಮತ್ತು ವಿಚಕ್ಷಣೆ ಪ್ರಮುಖವಾದವು. ಜನರ ಲೆಕ್ಕಾಚಾರದಲ್ಲಿ ಹೇಳುವುದಾದರೆ

3. ಪ್ರತಿಯೊಬ್ಬರು ಎರಡೂ ಡೋಸ್‌ ಲಸಿಕೆ ಪಡೆಯಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಅನುಸರಿಸಬೇಕು.

ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಬೇರೆಡೆಯೂ ಕಡಿಮೆ ಲಸಿಕೆಯಾಗಿದೆ. ಅಂದರೆ ಆಫ್ರಿಕಾದಲ್ಲೇ 3 ಶತಕೋಟಿ ಜನ ಇನ್ನೂ ಲಸಿಕೆ ಪಡೆದಿಲ್ಲ. ಬೇರೆಡೆಗೆ ಹೋಲಿಕೆ ಮಾಡಿದರೆ, ಭಾರತವೇ ಉತ್ತಮ ಸ್ಥಿತಿಯಲ್ಲಿದೆ. ಅಲ್ಲಿ ಹೆಚ್ಚಿನ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್‌ ಆದರೂ ಲಸಿಕೆ ಸಿಕ್ಕಿದೆ. ಲಸಿಕೆ ಪಡೆಯುವುದು ಏಕೆ ಮುಖ್ಯ ಎಂಬುದನ್ನು ಈಗ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದ ವೇರಿಯಂಟ್‌ ಎಲ್ಲರಿಗೂ ನೆನಪಿಸಿದೆ.

ಕೃಪೆ – ಮನಿ ಕಂಟ್ರೋಲ್‌ ಮತ್ತು ವಿವಿಧ ವೆಬ್‌ ಸೈಟ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next