ಬೆಂಗಳೂರು: ಸಮಾನ ಶಿಕ್ಷಣ ನೀತಿ ಜಾರಿಯಿಂದ ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ “ಸಮಾನ ಶಿಕ್ಷಣ ನೀತಿ ಜಾರಿಗಾಗಿ ಜಾಗೃತಿ ಸಮಾವೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸರ್ಕಾರಗಳು ಬಡವ-ಶ್ರೀಮಂತ ಎಂಬ ತಾರತಮ್ಯ ತೊರೆದು ಪ್ರಾಥಮಿಕ ಶಾಲೆಗಳಿಂದಲೇ ಸಮಾನ ಶಿಕ್ಷಣ ನೀಡುವ ನೀತಿ ಜಾರಿಗೆ ತರಬೇಕು,” ಎಂದು ಹೇಳಿದರು.
“ತುಳಿತಕ್ಕೊಳಗಾದ ಜನರು, ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮುಖ್ಯವಾಹಿನಿಗೆ ಬರಲು ಸಾಧ್ಯ. ಅಂಬೇಡ್ಕರ್ ಅವರು ಕೂಡ ಜಾತಿ ಪದ್ಧತಿ ನಿರ್ಮೂಲವಾಗಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಹಲವು ಕಾನೂನುಗಳನ್ನು ಜಾರಿಗೆ ತಂದರೂ ಕೂಡ ಅವು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರಗಳು ಹೆಚ್ಚು ಜವಾಬ್ದಾರಿ ಹೊತ್ತು ಜಾತ್ಯಾತೀತವಾಗಿ ಶಿಕ್ಷಣವನ್ನು ಮತ್ತಷ್ಟು ಬಲಪಡಿಸಬೇಕು. ಜನರು ಸಮಾನತೆ ಹಾಗೂ ಸ್ವಾತಂತ್ರ್ಯ ಚಲಾಯಿಸಲು ರಾಜಕೀಯ ಶಕ್ತಿ ಅವಶ್ಯವಾಗಿದೆ,” ಎಂದು ಹೇಳಿದರು.
ಬೀಡಿ ಬೆಂಕಿಪೊಟ್ಟಣಕ್ಕೆ ನಿಗದಿಯಾದ ಬೆಲೆ ಕೃಷಿ ಉತ್ಪನ್ನಕ್ಕೇಕಿಲ್ಲ?: ಅಹಿಂದ ಮುಖಂಡ ಕೆ. ಮುಕುಡಪ್ಪ ಮಾತನಾಡಿ, ಬೀಡಿ, ಬೆಂಕಿಪೊಟ್ಟಣಕ್ಕೂ ಬೆಲೆ ನಿಗದಿಯಾಗಿರುವ ಕಾಲದಲ್ಲಿ, ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ನಿಗದಿಯಾಗಿಲ್ಲ. ದೇಶಾದ್ಯಂತ ನೂರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳು ಚಕಾರ ಎತ್ತದಿರುವುದು ವಿಪರ್ಯಾಸ. ಸುಪ್ರೀಂ ಕೋರ್ಟ್ ಬಡ್ತಿ ರದ್ದು ಕುರಿತು ನೀಡಿರುವ ಆದೇಶದ ವಿರುದ್ಧ ಕಾನೂನಾತ್ಮಕ ಹೋರಾಟ ಅಗತ್ಯ ಎಂದು ಹೇಳಿದರು.