Advertisement

ಜಿಲ್ಲೆಗೆ ಆಗಮಿಸಿದ್ದ ಏಕೈಕ ರಾಷ್ಟ್ರಪತಿ

07:40 AM Jul 25, 2017 | |

ತಿರುವನಂತಪುರ: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಧಿಕಾರಾವಧಿ ಸೋಮವಾರ ಮಧ್ಯರಾತ್ರಿಗೆ ಮುಗಿಯ ಬಹುದು. ಆದರೆ ಕಾಸರಗೋಡಿನ ಜನರಿಗೆ ಅವರ ನೆನಪು ಬಹುಕಾಲ ಉಳಿಯಲಿದೆ.
 
ಇದಕ್ಕೆ ಕಾರಣ ಕಾಸರಗೋಡಿಗೆ ಭೇಟಿ ನೀಡಿದ ಏಕೈಕ ರಾಷ್ಟ್ರಪತಿ ಅವರು. ಸ್ವತಂತ್ರ ಭಾರತದ ಇಷ್ಟೆಲ್ಲ ರಾಷ್ಟ್ರಪತಿಗಳು ಕೇರಳಕ್ಕೆ ಬರುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ರಾಜ್ಯದ ಉತ್ತರದ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಗೆ ಮಾತ್ರ ಯಾವ ರಾಷ್ಟ್ರಪತಿಯೂ ಬಂದಿರಲಿಲ್ಲ. ಆದರೆ ಪ್ರಣವ್‌ ಮುಖರ್ಜಿ ಈ ಪರಂಪರೆಯನ್ನು ಮುರಿದು ಜಿಲ್ಲೆಗೆ ಬಂದ ಮೊದಲ ರಾಷ್ಟ್ರಪತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 

Advertisement

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ 2014, ಜು. 18ರಂದು ಪ್ರಣವ್‌ ಮುಖರ್ಜಿ ಕಾಸರಗೋಡಿನ ಪೆರಿಯಕ್ಕಾಗಮಿಸಿದ್ದರು. ಪೆರಿಯ ಕ್ಯಾಂಪಸ್‌ಗೆ ತೇಜಸ್ವಿನಿ ಹಿಲ್ಸ್‌ ಎಂದು ಹೆಸರಿಟ್ಟಿರುವುದೂ ಅವರೇ. 

ಮಳೆಯ ಕಾರಣ ಹೆಲಿಕಾಪ್ಟರ್‌ ಇಳಿಯಲು ಅಸಾಧ್ಯವಾಗಿ ಮುಖರ್ಜಿ ಮಂಗಳೂರಿನಿಂದ ರಸ್ತೆ ಮೂಲಕ ಕಾಸರಗೋಡಿಗೆ ಆಗಮಿಸಿದ್ದರು. ಹೊಂಡಗುಂಡಿ ಗಳಿಂದ ತುಂಬಿದ ಹೆದ್ದಾರಿಯಲ್ಲಿ ರಾಷ್ಟ್ರಪತಿಯಿದ್ದ ಗುಂಡು ನಿರೋಧಕ ಕಾರು ಭರ್ತಿ 170 ಕಿ. ಮೀ. ಪ್ರಯಾಣಿಸಿರುವುದು ಕೂಡ ಒಂದು ದಾಖಲೆ. 

ಪ್ರಾಯಶಃ ರಾಷ್ಟ್ರಪತಿಯಾದ ಬಳಿಕ ಮುಖರ್ಜಿ ರಸ್ತೆ ಮೂಲಕ ಇಷ್ಟು ದೀರ್ಘ‌ ಪ್ರಯಾಣ ಮಾಡಿರುವುದು ಕೂಡ ಇದೇ ಮೊದಲಾಗಿರಬಹುದು. ಅವರ ಬೆಂಗಾವಲಿಗೆ 30 ವಾಹನಗಳಿದ್ದವು. 

ದೇಶದ ಪ್ರಥಮ ಪ್ರಜೆಯ ದರ್ಶನಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕಾಸರಗೋಡು ಪಾಲಿಗೆ ಅದು ಐತಿಹಾಸಿಕವಾದ ದಿನವಾಗಿತ್ತು. 

Advertisement

ಕಾಸರಗೋಡು ಸಿಪಿಸಿಆರ್‌ಐಗೆ ಬರಲೊಪ್ಪಿದ್ದ  ಫ‌ಕ್ರುದ್ದೀನ್‌ 1977ರಲ್ಲಿ ಅಂದಿನ ರಾಷ್ಟ್ರಪತಿ ಫ‌ಕ್ರುದ್ದೀನ್‌ ಅಲಿ ಅಹ್ಮದ್‌ ಅವರು ಕಾಸರಗೋಡಿನ ಸಿಪಿಸಿಆರ್‌ಐ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದರು. ರಾಷ್ಟ್ರಪತಿ ಸ್ವಾಗತಕ್ಕೆ ಕಾಸರಗೋಡಿನಲ್ಲಿ ಸರ್ವ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ 1977, ಫೆ. 11ರಂದು ಫ‌ಕ್ರುದ್ದೀನ್‌ ಹೃದಯಾಘಾತದಿಂದ ನಿಧನರಾದರು. ಹೀಗಾಗಿ ಕಾಸರಗೋಡಿಗೆ ರಾಷ್ಟ್ರಪತಿಯೊಬ್ಬರು ಭೇಟಿ ನೀಡುವ ಸೌಭಾಗ್ಯಕ್ಕಾಗಿ 2014ರ ತನಕ ಕಾಯಬೇಕಾಯಿತು. 
 

Advertisement

Udayavani is now on Telegram. Click here to join our channel and stay updated with the latest news.

Next