Advertisement

ಉಳಿಕೆಯೇ ಗಳಿಕೆ ಶಾಂತಿಯೇ ಸಂಪತ್ತು

04:00 AM Oct 29, 2018 | |

ಹಣ ಅಥವಾ ಸಂಪತ್ತನ್ನು ಗಳಿಸುವುದಷ್ಟೇ ಬಾಳಿನ ಗುರಿಯಲ್ಲ. ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಬೆಳೆಸಬೇಕು, ಅಗತ್ಯ ಬಂದಾಗ ಬಳಸಬೇಕು. ಸಂಪತ್ತೆಂಬುದು ಕಷ್ಟಕ್ಕೆ ಆಗಲಿಲ್ಲ ಅಂದರೆ, ಅದು ಎಷ್ಟಿದ್ದರೂ ವ್ಯರ್ಥ. ಹಾಗಾಗಿ, ವೈಯಕ್ತಿಕ ಹಾಗೂ ವ್ಯಾವಹಾರಿಕ ಬದುಕಿಗೆ ನಮ್ಮ ಉಳಿತಾಯದಿಂದ ಅನುಕೂಲವಾಗುವಂತೆ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕು. 

Advertisement

ಹನಿ ಹನಿ ಎನ್ನುವುದು ಬಹಳ ಮುಖ್ಯ. ನಮ್ಮ ಜೀವನದ ಗುಣಮಟ್ಟ ಸಣ್ಣ ಸಣ್ಣ ಖುಷಿಗಳಲ್ಲಿ ಅಡಗಿದೆ. ದೀರ್ಘ‌ ನಡಿಗೆ ಒಂದೊಂದೆ ಹೆಜ್ಜೆಯಲ್ಲಿ ಕುಳಿತಿದೆ. ನಮ್ಮ ಜೀವನ ಒಂದೊಂದೇ ದಿನವಾಗಿ ಕಳೆಯುತ್ತದೆ. ಹಾಗೆಯೇ, ನಮ್ಮ ಹಣಕಾಸಿನ ಯೋಜನೆಗಳೂ ಸಣ್ಣ ಸಣ್ಣ ಉಳಿತಾಯದಿಂದಲೇ ಆರಂಭ ಆಗಬೇಕು. ಉಳಿಸಿದೆ ಎನ್ನುವುದು ಕೇವಲ ಒಬ್ಬರ ಕೆಲಸವಾಗಲಿ, ಅಗತ್ಯವಾಗಲಿ ಅಲ್ಲ. ಅದು ಮನೋಭಾವ ಆಗಬೇಕು.

ಇದು ಮನೋಭಾವ ಆದಾಗ ಇದನ್ನು ಬೇರೆಯವರೂ ಅಷ್ಟೇ ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ. ಇದನ್ನು ಹೇರಲು ಬರುವುದಿಲ್ಲ. ಬದಲಾಗಿ, ನೋಡಿಯಾದರೂ ಕಲಿಯುತ್ತಾರೆ. ಇಂದಿನ ಮಕ್ಕಳೆದರು ಹಣವನ್ನು ನಿರ್ವಹಿಸುವುದು ಬಹುದೊಡ್ಡ ಸವಾಲಾಗಿದೆ. ಆದರೆ ಅವರಿಗೆ ಅದು ಗೊತ್ತಿಲ್ಲ. ನಾವು ಬಡತನವನ್ನು ನಿರ್ವಹಿಸುವುದನ್ನು ಕಲಿಯುತ್ತ ಬಂದ ತಲೆಮಾರಿನವರು. ಹಾಗಾಗಿ, ನಮ್ಮ ಪೀಳಿಗೆಗೆ ಉಳಿತಾಯ ಸಹಜವಾಗಿತ್ತು.

ಈ ಕಾಲದ ಹೊರ ಆಕರ್ಷಣೆಗಳ ಹಿನ್ನೆಲೆಯಲ್ಲಿ ಉಳಿತಾಯಕ್ಕೆ ದೃಡ ಸಂಕಲ್ಪ ಇರಬೇಕು. ಇಂತಹ ಸಂಕಲ್ಪ ಇದ್ದಾಗ ಮಾತ್ರವೇ ಉಳಿತಾಯ ಸಾಧ್ಯ ಆಗುತ್ತದೆ. ಹಣ ಉಳಿಸುವ ವಿಚಾರ ಬಂದಾಗ, ಸರಳತೆ ನಮ್ಮ ಜೀವನದ ಭಾಗವಾಗುತ್ತದೆ. ಸರಳತೆ ಇದ್ದಾಗ ಸಂತೋಷ ಇರುತ್ತದೆ. ಎಷ್ಟೇ ವಸ್ತುಗಳನ್ನು ಕೊಂಡರೂ ಸಿಗದ ಸಂತೋಷ, ಸರಳತೆಯಿಂದ ಬದುಕುವುದರಲ್ಲಿ ಇದೆ. ನಿಧಾನವಾಗಿ ಯಾವುದೇ ಧಾವಂತವೂ ಇರದ ಜೀವನ ನಮ್ಮನ್ನು ಖಾಯಿಲೆಯಿಂದ ದೂರ ಇಡುವುದಕ್ಕೆ ಸಹಕಾರಿ. ಎಲ್ಲಿಂದೆಲ್ಲಿಯ ಸಂಬಂಧ.

ಕೇವಲ ಉಳಿಸಿದರೆ ಆಗಲಿಲ್ಲ. ಗಳಿಸಿ, ಉಳಿಸಿ ಜೊತೆಗೆ ಬೆಳೆಸಿ. ಏನೆಲ್ಲ ಶ್ರಮಪಟ್ಟು ದುಡಿದರೂ ಹಗಲಿರುಳು ಬೆವರು ಸುರಿಸಿದರೂ  ಇದು ಧ್ಯೇಯ.  ಗಳಿಸುವ ವಿಷಯದಲ್ಲಿ ಈಗ ಮಹಿಳೆ-ಪುರುಷ ಎನ್ನುವ ವ್ಯತ್ಯಾಸ ಇಲ್ಲ. ಗಳಿಸಿದ್ದನ್ನು ಉಳಿಸದಿದ್ದರೆ ಏನೆಲ್ಲ ಶ್ರಮಪಟ್ಟು ಡುದಿದರೂ, ಹಗಲಿರುಳು ಬೆವರು ಸುರಿಸಿದರೂ ಗಳಿಸಿಯೂ ಪ್ರಯೋಜನ ಇಲ್ಲ. ಉಳಿಸಿದ್ದು ಬೆಳೆಸದಿದ್ದರೆ ಉಳಿಸಿಯೂ ಪ್ರಯೋಜನ ಇಲ್ಲ.

Advertisement

ಹೀಗೆ ಒಂದು ಸರಪಳಿಯಂತೆ ನಮ್ಮ ಬದುಕನ್ನು ಆವರಿಸಿಕೊಂಡಿರುವ ಉಳಿತಾಯ ಸೂತ್ರದ ಮೊದಲ ಪಾಠವೇ ಅಗತ್ಯ ಇರುವಷ್ಟು ಮಾತ್ರ ಖರ್ಚು ಮಾಡಬೇಕು ಎನ್ನುವುದು. ಅಗತ್ಯವನ್ನು ಅರಿಯಲು ಸರಳವಾಗುವುದು. ಇನ್ನೊಬ್ಬರನ್ನು ಹೋಲಿಸಿಕೊಂಡು ನೋಡಿ ತನಗಿಲ್ಲ ಎಂದು ಕೊರಗುವುದೇ ಇವತ್ತಿನ ಎಲ್ಲ ಅಸಹನೆಯ ಮೂಲ. ಅಸಹನೆಯೇ ಅಶಾಂತಿಯ ಬೀಜ. ವೈಯಕ್ತಿಕ ಬದುಕಿನಲ್ಲೂ, ವ್ಯಾವಹಾರಿಕ ಬದುಕಿನಲ್ಲೂ ಶಾಂತಿಯೇ ಸಂಪತ್ತು. ಇನ್ನು ನಾವು ಬೆಳೆಸಬೇಕಾದ ಸಂಪತ್ತು ಯಾವುದು? ಇದು ಅವರವರೇ ಕಂಡುಕೊಳ್ಳಬೇಕಾದದ್ದು.

(ಇದು, ಸೇವಿಂಗ್ಸ್‌ ಅಕೌಂಟ್‌ ಅಂಕಣದ ಕೊನೆಯ ಕಂತು. ಉಳಿತಾಯದ ಕುರಿತು, ಕಳೆದ ಆರು ತಿಂಗಳಿಂದ ಅಂಕಣದ ಮೂಲಕ ಹಲವು ಮಾಹಿತಿ ನೀಡಿದ ಲೇಖಕಿಗೆ ಕೃತಜ್ಞತೆಗಳು)

* ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next