Advertisement

58 ಯೋಧರ ಸವಾರಿಗೆ ಒಂದೇ ಬುಲೆಟ್‌

12:15 PM Nov 20, 2017 | |

ಬೆಂಗಳೂರು: 500 ಸಿಸಿ ರಾಯಲ್‌ ಎನ್‌ಪೀಲ್ಡ್‌ ಬುಲೆಟ್‌ನಲ್ಲಿ ಅಬ್ಬಬ್ಟಾ ಅಂದರೆ ಎಷ್ಟು ಮಂದಿ ಪ್ರಯಾಣ ಮಾಡಬಹುದು. ಮೂರು ಅಥವಾ ಐದು ಮಂದಿ. ಆದರೆ, ನಮ್ಮ ಭಾರತೀಯ ಸೇನೆಯ ಟಾರ್ನಡೋಸ್‌ ತಂಡ 58 ಮಂದಿ ಕಮಾಂಡೋಗಳು ಪ್ರಯಾಣ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ಇದು ಅಂತಿಂಥಾ ದಾಖಲೆ ಅಲ್ಲ. ಊಹಿಸಿಕೊಳ್ಳುವುದಕ್ಕೆ ಸಹ ಕಷ್ಟ. ಇದನ್ನು ಒಮ್ಮೆ ಕಲ್ಪಿಸಿಕೊಂಡರೆ ಮೈ ಜುಮ್‌ ಅನ್ನುತ್ತೆ. ಇದು ಆಶ್ಚರ್ಯವಾದರೂ ಸತ್ಯ…! ಇದಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಎಂಬುದು ಮತ್ತೂಂದು ಹೆಮ್ಮೆಯ ವಿಚಾರ. 

ಹೌದು, ನಗರದ ಯಲಹಂಕ ವಾಯುನೆಲೆಯಲ್ಲಿ ಭಾನುವಾರ 500 ಸಿಸಿ ರಾಯಲ್‌ ಎನ್‌ಪೀಲ್ಡ್‌ ಬೈಕ್‌ನಲ್ಲಿ 58 ಮಂದಿ ಯೋಧರು 1,200 ಮೀಟರ್‌ವರೆಗೆ ಪ್ರಯಾಣಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ತನ್ಮೂಲಕ ಮೇಜರ್‌ ಬನ್ನಿ ಶರ್ಮಾ ನೇತೃತ್ವದಲ್ಲಿ ಬೈಕ್‌ ಚಾಲಕ ಸುಬೇದಾರ್‌ ರಾಮ್‌ಪಾಲ್‌ ಯಾದವ್‌ ತಮ್ಮ ಹಳೆ 19 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಆರ್ಮಿ ಸರ್ವಿಸ್‌ ಕೋರ್‌(ಎಎಸ್‌ಸಿ)ನ ಟಾರ್ನಾಡೋಸ್‌ ಸಾಹಸಿ ಬೈಕ್‌ ತಂಡ ಇದೀಗ ವಿಶ್ವದಾಖಲೆ ಸೃಷ್ಟಿಸಿದೆ. ಈ ಮೊದಲು ಇದೇ ಒಂದೇ ಬೈಕ್‌ನಲ್ಲಿ 54 ಯೋಧರು ಚಲಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಇದೇ ತಂಡ ಒಂದೇ ಬೈಕ್‌ನಲ್ಲಿ 58 ಯೋಧರು ಚಲಿಸುವ ಮೂಲಕ ಹೊಸ
ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ರಾಯಲ್‌ ಎನ್‌ಪೀಲ್ಡ್‌ನ 500 ಸಿಸಿಯ 20 ವರ್ಷದ ಹಳೇಯ ಬುಲೆಟ್‌ ಬೈಕ್‌ನಲ್ಲಿ ಎಂಜಿನ್‌ ಅನ್ನು ಯಾವುದೇ ಮಾರ್ಪಾಡು ಮಾಡದೇ ಪ್ರದರ್ಶನ ನೀಡಿದ್ದು ಮತ್ತೂಂದು ವಿಶೇಷ.

ಈ ತಂಡಕ್ಕೆ ಸೇನೆಯಲ್ಲಿ “ಡೇರ್‌ಡೆವಿಲ್ಸ್‌ ಟೀಮ್‌’ ಅಂತಾನೇ ಕರೆಯುತ್ತಾರೆ. 3.5 ಲಕ್ಷ ಟನ್‌ ತೂಕದಷ್ಟು ಜನ, ಅರ್ಧ ಟನ್‌ ನಷ್ಟು ಭಾರದ ಬೈಕ್‌ ಮೇಲೆ ಮೇಜರ್‌ ಬನ್ನಿ ಶರ್ಮಾ ನೇತೃತ್ವದ 150 ಜನರ ತಂಡ ಸತತ 10 ತಿಂಗಳುಗಳ ಕಾಲ ಅಭ್ಯಾಸ ನಡೆಸುತ್ತಿದ್ದರು. ಮತ್ತೂಂದು ವಿಶೇಷವೆಂದರೆ, ಬೈಕ್‌ ಚಾಲನೆ ಮಾಡಿದ ಯೋಧ ಸುಬೇದಾರ್‌ ರಾಮ್‌ಪಾಲ್‌ ಯಾದವ್‌ ಈ ಪ್ರದರ್ಶನವೂ ಸೇರಿದಂತೆ 20 ವಿಶ್ವದಾಖಲೆಯಲ್ಲಿ ಭಾಗಿಯಾಗಿದ್ದು, ಭಾನುವಾರ ತಮ್ಮ ವೃತ್ತಿಯ ಕೊನೆಯ ಪ್ರದರ್ಶನ ನೀಡುವ ಮೂಲಕ ಸದ್ಯದಲ್ಲೇ ನಿವೃತ್ತರಾಗುತ್ತಿದ್ದಾರೆ.

Advertisement

ಇದೇನು ಹೊಸತಲ್ಲ: 1982ರಲ್ಲಿ ಟಾರ್ನಡೋಸ್‌ ತಂಡ ಸ್ಥಾಪನೆ ಮಾಡಲಾಯಿತು. ಕರ್ನಲ್‌ ಸಿ.ಎನ್‌.ರಾವ್‌ ಮತ್ತು ಕ್ಯಾಪ್ಟನ್‌ ಜೆ.ಪಿ.ಶರ್ಮಾ ಅವರ ಸಾರಥ್ಯದಲ್ಲಿ ಆರಂಭವಾದ ಸಾಹಸ ಯಾತ್ರೆ ಇಂದಿಗೂ ಮುಂದುವರಿದಿದೆ. ಇಂತಹ ಭಯಾನಕ ಸಾಹಸಗಳಿಂದಾಗಿಯೇ ಈ ತಂಡಕ್ಕೆ ಟಾರ್ನಡೋಸ್‌(ಸುಂಟರಗಾಳಿ) ಎಂಬ ಹೆಸರು ಬಂತು. ಈ ತಂಡ ಇದುವರೆಗೂ ದೇಶ ಮತ್ತು ವಿದೇಶಗಳಲ್ಲಿ ಒಂದು ಸಾವಿರ ಪ್ರದರ್ಶನಗಳನ್ನು ನೀಡಿದ್ದು, 19 ವಿಶ್ವ ಮತ್ತು ರಾಷ್ಟ್ರೀಯ ಮಟ್ಟದ ದಾಖಲೆ ನಿರ್ಮಿಸಿದೆ.

ಭಾರತೀಯ ಸೇನೆಯಲ್ಲಿರುವ ಟಾರ್ನಡೋಸ್‌ ತಂಡಕ್ಕೆ ಈ ಸಾಹಸ ಹೊಸದೇನು ಅಲ್ಲ. ಇಂತಹ ಮೈನವೀರೆಳೆಸುವ ಸಾಹಸ ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ಇದೇ ಕಾರಣಕ್ಕೆ ಟಾರ್ನಾಡೋಸ್‌ ತಂಡ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡಿದೆ. ಬರೋಬರಿ 7 ಗಿನ್ನೀಸ್‌ ದಾಖಲೆ ಈ ತಂಡ ಹೆಸರಿನಲ್ಲಿದೆ. ಹಾಗೆಯೇ 12ಕ್ಕೂ ಹೆಚ್ಚು ಲಿಮ್ಕಾ ದಾಖಲೆಯನ್ನು ಮುಡಿಗೇರಿಸಿಕೊಂಡಿದೆ.

ರೋಮಾಂಚನ
ಸಾಹಸ ಪ್ರದರ್ಶಿಸಿದ 58 ಮಂದಿ ಯೋಧರ ಪೈಕಿ ಕೆಲವರು ಕೇಸರಿ, ಇನ್ನು ಕೆಲವರು ಬಿಳಿ, ಮತ್ತಷ್ಟು
ಮಂದಿ ಹಸಿರು ಬಣ್ಣದ ಸಮವಸ್ತ್ರ ಹಾಗೂ ಶಿರಸ್ತ್ರಾಣ ಧರಿಸಿ ಕಂಗೊಳಿಸುತ್ತಿದ್ದರು. ಬೈಕ್‌ ಚಲಿಸುತ್ತಿದ್ದಂತೆ ದೇಶದ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದು ನೋಡುಗರಲ್ಲಿ ರೋಮಾಂಚನ ಉಂಟು ಮಾಡಿತು.

ಇದು ಆರ್ಮಿ ಸರ್ವೀಸ್‌ ಕೋರ್‌ಗೆ ಹೆಮ್ಮೆಯ ವಿಚಾರ. ಇಡೀ ದೇಶ, ನಮ್ಮ ಯೋಧರು 6 ದಿನಗಳ ಕಾಲ ಬಹಳ ಶ್ರಮವಹಿಸಿ ಈ ಸಾಹಸ ಮಾಡಿದ್ದಾರೆ. ಮೊದಲಿಗೆ 24 ಮಂದಿ ಬೈಕ್‌ ಏರುತ್ತಾರೆ.
ನಂತರ ಚಲಿಸುವ ಬೈಕ್‌ ಅನ್ನು ಬೆನ್ನಟ್ಟಿ ಮತ್ತಷ್ಟು ಯೋಧರು ಬೈಕ್‌ ಹತ್ತುತ್ತಾರೆ. ಬ್ಯಾಲೆನ್ಸ್‌ ಸುಲಭವಲ್ಲ.
 ●ಬ್ರಿಗೇಡಿಯರ್‌ ಅಶೋಕ್‌ ಚೌಧರಿ, ಎಎಸ್‌ಸಿ ಸೆಂಟರ್‌ ಕಮಾಂಡೆಂಟ್‌

ಕಳೆದ 10 ತಿಂಗಳಿಂದ 150 ಮಂದಿ ಯೋಧರ ಸಾಧನೆ. ನಾವುಗಳು ಮನೆಗಳಿಂದ ದೂರ ಉಳಿದಿದ್ದೇವೆ. ನಿದ್ದೆ, ಸುಖ ಎಲ್ಲವನ್ನು ಬಿಟ್ಟು ಹಗಲು-ರಾತ್ರಿ ಪ್ರಾಕ್ಟೀಸ್‌ ಮಾಡಿ ಅಂತಿಮವಾಗಿ
ಯಶಸ್ವಿಯಾಗಿದ್ದೇವೆ. 4 ಟನ್‌ ಭಾರದಲ್ಲಿ 45 ಕಿ. ಮೀಟರ್‌ ವೇಗದಲ್ಲಿ ಬೈಕ್‌ ಚಲಿಸುವುದು ಅಷ್ಟು
ಸುಲಭವಲ್ಲ.
 ●ಬನ್ನಿ ಶರ್ಮಾ, ಟರ್ನಾಡೋಸ್‌ ತಂಡದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next