Advertisement

ಹೊಸಬರಿಗೆ ಮಾತ್ರ ಅನುಕೂಲ: ಹಿರಿಯರಿಗಿಲ್ಲ

10:33 AM Dec 11, 2019 | mahesh |

ಕಾರ್ಕಳ: ಬಹು ವರ್ಷಗಳ ಬೇಡಿಕೆ ಯಾದ ಔರಾದ್ಕರ್‌ ವರದಿ ಅನುಷ್ಠಾನ ಮೂಲಕ ವೇತನದಲ್ಲಿ ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ನಿರಾಸೆಯಾಗಿದೆ. ವರದಿ ಜಾರಿ ಗೊಂದಲವನ್ನು ಹೆಚ್ಚಿಸಿದ್ದು, ಇಲಾಖೆಗೆ ಹೊಸದಾಗಿ ಸೇರ್ಪಡೆಗೊಂಡ ಸಿಬಂದಿಗೆ ಪ್ರಯೋಜನವಾಗುತ್ತಿದೆಯೇ ವಿನಾ ಸೇವಾ ಹಿರಿತನ ಹೊಂದಿದವರಿಗಲ್ಲ.

Advertisement

ನವೆಂಬರ್‌ನ ಸಂಬಳ ಔರಾದ್ಕರ್‌ ಸಮಿತಿಯ ಶಿಫಾರಸಿನಂತೆ ಇರಲಿದೆ ಎಂದು ಕಾಯುತ್ತಿದ್ದ ಹಿರಿಯ
ಪೊಲೀಸರಿಗೆ ಇದು ಭ್ರಮನಿರಸನ ಉಂಟು ಮಾಡಿದೆ. 2018-19ರ ಸಾಲಿನಲ್ಲಿ ಇಲಾಖೆಗೆ ಸೇರ್ಪಡೆಗೊಂಡ ಪೊಲೀಸರಿಗೆ ರೂ. 2,100 ಹೆಚ್ಚುವರಿಯಾಗಿ ದೊರೆತಿದೆಯಾದರೂ ಸೇವಾ ಹಿರಿತನ ಹೊಂದಿರುವ ಸಿಬಂದಿಗೆ ಹೆಚ್ಚಳ ಆಗಿಲ್ಲ.

ಔರಾದ್ಕರ್‌ ವರದಿ ಏನು?
ಪೊಲೀಸರ ವೇತನವನ್ನು ಪರಿಷ್ಕರಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆಯಿತ್ತು. ಈ ನಿಟ್ಟಿನಲ್ಲಿ ವೇತನ ತಾರತಮ್ಯ ನಿವಾರಣೆಗಾಗಿ ವಿವಿಧ ರಾಜ್ಯಗಳ ಪೊಲೀಸ್‌ ವೇತನವನ್ನು ತುಲನೆ ಮಾಡಿ ವರದಿ ಸಲ್ಲಿಸುವಂತೆ 2016ರಲ್ಲಿ ರಾಜ್ಯ ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು 2017ರಲ್ಲಿ ವರದಿ ಸಲ್ಲಿಸಿತ್ತಾದರೂ ವೇತನ ಪರಿಷ್ಕರಣೆಗೆ ಸರಕಾರ ಮುಂದಾಗದೆ ಮೀನಮೇಷ ಎಣಿಸುತ್ತಿತ್ತು. ವರದಿಯನ್ವಯ ಮೂಲ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ ಎಂದೇ ಭಾವಿಸಲಾಗಿತ್ತಾದರೂ ಅಪೇಕ್ಷಿತ ಪ್ರಯೋಜನ ದೊರೆತಿಲ್ಲ.

ವಿಶೇಷ ಘಟಕ ಸಿಬಂದಿಗೆ ಬರೆ
ಸರಕಾರದಿಂದ ಈ ಹಿಂದೆ ತಾತ್ಕಾಲಿಕ ಪರಿಹಾರವಾಗಿ ಕಾನ್‌ಸ್ಟೆಬಲ್‌ಗ‌ಳಿಗೆ 3 ಸಾವಿರ ರೂ., ಹೆಡ್‌ ಕಾನ್‌ಸ್ಟೆಬಲ್‌ಗ‌ಳಿಗೆ 2 ಸಾವಿರ ರೂ., ಎಎಸ್‌ಐ ಮತ್ತು ಎಸ್‌ಐಗಳಿಗೆ 1 ಸಾವಿರ ರೂ. ಕಷ್ಟ ಪರಿಹಾರ ಭತ್ತೆ
ಪಾವತಿಯಾಗುತ್ತಿತ್ತು. ಆದರೆ ಈಗ ರಾಜ್ಯ ಗುಪ್ತ ವಾರ್ತೆ, ಕರಾವಳಿ ಕಾವಲು ಪಡೆ, ನಕ್ಸಲ್‌ ನಿಗ್ರಹ ಪಡೆ, ಆಂತರಿಕ ಭದ್ರತಾ ಪಡೆ ಮೊದಲಾದ ಪೊಲೀಸ್‌ ಇಲಾಖೆಯ ವಿಶೇಷ ಘಟಕಗಳ ಸಿಬಂದಿಗೆ ನೀಡಲಾಗುತ್ತಿದ್ದ ಕಷ್ಟಕರ ಪರಿಹಾರ ಭತ್ತೆಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ನಿಯಮದನ್ವಯ ಕಷ್ಟ ಪರಿಹಾರ ಭತ್ತೆ ಬದಲಾಗಿ ವಿಶೇಷ ಭತ್ತೆ ನೀಡಲಾಗುತ್ತಿದೆ. ಆದರೆ ಕೆಲವು ಘಟಕಗಳಿಗೆ ನೀಡಲಾಗುವ ವಿಶೇಷ ಭತ್ತೆಯು ಕಷ್ಟ ಪರಿಹಾರ ಭತ್ತೆಗಿಂತ ತೀರಾ ಕಡಿಮೆಯಿದೆ.

ರಜೆಯ ಸಜೆ
ವಾರದ ಎಲ್ಲ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬಂದಿಗೆ ವರ್ಷಕ್ಕೆ 15 ಸಾಂದರ್ಭಿಕ ರಜೆ ಪಡೆಯುವ ಅವಕಾಶವಿತ್ತು. ಆದರೆ ಇತ್ತೀಚೆಗೆ ಸರಕಾರ ಅದನ್ನೂ ರದ್ದುಗೊಳಿಸಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಿಬಂದಿಯನ್ನು ಹೊಸ ನಿಯಮದಿಂದ ಹೊರಗಿಟ್ಟಿದ್ದರೂ ಪೊಲೀಸರಿಗೆ ಮಾತ್ರ ಮುಕ್ತಿ ದೊರೆತಿಲ್ಲ.

Advertisement

ಹಿರಿತನಕ್ಕಿಲ್ಲ ಬೆಲೆ
ಔರಾದ್ಕರ್‌ ವರದಿ ಜಾರಿ ಸಂದರ್ಭದಲ್ಲಿ ಸೇವಾ ಹಿರಿತನಕ್ಕೆ ಬೆಲೆ ಇಲ್ಲದಂತಾಗಿದೆ. 2012ರಲ್ಲಿ ಇಲಾಖೆಗೆ ಸೇರ್ಪಡಗೊಂಡ ಸಿಬಂದಿಗೂ ಇತ್ತೀಚೆಗೆ ನೇಮಕವಾದ ಪೊಲೀಸರಿಗೂ ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಹೆಚ್ಚು ಕಮ್ಮಿ ಸರಿಸಮವಿದೆ. ಉದಾಹರಣೆಗೆ, 10 ವರ್ಷ ಸೇವೆ ಸಲ್ಲಿಸಿದವರಿಗೆ 24,500 ರೂ. ಪಾವತಿಯಾಗುತ್ತಿದ್ದರೆ 2018-19ರಲ್ಲಿ ಇಲಾಖೆಗೆ ಸೇರ್ಪಡೆಗೊಂಡ ಪೊಲೀಸರಿಗೆ 23,500 ರೂ. ವೇತನ ಸಿಗುತ್ತಿದೆ. ಇದು ಸೇವಾ ಹಿರಿತನ ಹೊಂದಿದ ಪೊಲೀಸರನ್ನು ಹತಾಶೆಗೆ ತಳ್ಳಿರುವುದು ಮಾತ್ರವಲ್ಲದೆ ಅವರ ಉತ್ಸಾಹವನ್ನು ಚಿವುಟಿದೆ. ವರದಿ ಜಾರಿಯಿಂದ ಪೊಲೀಸರಿಗೆ ಬಂಪರ್‌ ಎಂದು ಹೇಳಲಾಗುತ್ತಿದ್ದರೂ ವಾಸ್ತವವಾಗಿ ಬಿಡಿಗಾಸು ಏರಿಕೆಯಾಗಿಲ್ಲ.

ಔರಾದ್ಕರ್‌ ವರದಿ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಹೊಸ ವೇತನ ಶ್ರೇಣಿ ಜಾರಿಯಾಗಬೇಕಿತ್ತು. ತಾಂತ್ರಿಕ ಕಾರಣ, ಸಾಫ್ಟ್ವೇರ್‌ ಅಪ್‌ಡೇಟ್‌ನಿಂದಾಗಿ ವಿಳಂಬವಾಗಿದೆ. ಹೊಸ ನಿಯಮದನ್ವಯ ಪೇಸ್ಕೇಲ್‌ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಹೊಸದಾಗಿ ನೇಮಕಗೊಂಡ ಸಿಬಂದಿಗೆ ಮಾತ್ರ ಪ್ರಯೋಜನವಾಗುತ್ತಿದೆ. ಹಿರಿಯ ಸಿಬಂದಿಗೆ ಅದೇ ವೇತನ ಮುಂದುವರಿಯಲಿದೆ.
 - ನಿಶಾ ಜೇಮ್ಸ್‌ ಎಸ್‌ಪಿ, ಉಡುಪಿ

ಮೂಲ ವೇತನದಲ್ಲಿ ಏನು ಸಮಸ್ಯೆಯಿತ್ತೋ ಅದನ್ನು ಔರಾದ್ಕರ್‌ ವರದಿಯ ಮೂಲಕ ಸರಿಪಡಿಸಲಾಗಿದೆ. ಹೊಸ ನಿಯಮದನ್ವಯ ಯಾರಿಗಾದರೂ ತೊಂದರೆ ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅದನ್ನು ಹಣಕಾಸು ಇಲಾಖೆ ಸರಿಪಡಿಸಲಿದೆ.
 - ಬಸವರಾಜ ಬೊಮ್ಮಾಯಿ ಗೃಹ ಸಚಿವರು

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next