Advertisement

ರಾಜ್ಯದಲ್ಲಿ ನಡೆಯುತ್ತಿರುವ ಗಲಭೆ ರಾಜಕೀಯ ಪ್ರೇರಿತ: ಸಚಿವ ಮಾಧುಸ್ವಾಮಿ

10:25 AM Dec 22, 2019 | Sriram |

ಬೆಂಗಳೂರು: ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಪಘಾನಿಸ್ತಾನದಿಂದ ಭಾರತಕ್ಕೆ ಬರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದರಿಂದ ಭಾರತದ ಮುಸ್ಲಿಮರಿಗೆ ಅಥವಾ ಬೇರೆ ಯಾವುದೇ ಸಮಯದಾಯಕ್ಕೆ ಸಮಸ್ಯೆಯಾಗುವುದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆ ರಾಜಕೀಯ ಪ್ರೇರಿತ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೋಹಿಂಗ್ಯಾ, ಪಾಕಿಸ್ತಾನ ಅಥವಾ ಬಾಂಗ್ಲಾ ದೇಶದ ಮುಸ್ಲಿಮರಿಗೆ ಆ ರಾಷ್ಟ್ರಗಳಲ್ಲೇ ವ್ಯವಸ್ಥೆ ಕಲ್ಪಿಸಬೇಕು. ಇದು ಭಾರತದ ಸಮಸ್ಯೆಯಲ್ಲ. ಆ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವರಿಗೆ ಭಾರತದ ಪೌರತ್ವ ನೀಡುವ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಹೊಸದಾಗಿ ಯಾವುದನ್ನೂ ಸೇರಿಸಿಲ್ಲ. ಸ್ವಲ್ಪ ಕಾನೂನಿನ ಸಡಿಲಿಕೆ ಮಾಡಿದ್ದೇವೆ ಎಂದು ವಿವರ ನೀಡಿದರು.

ಯಾವ ಜನಾಂಗಕ್ಕೂ ತೊಂದರೆ ಇಲ್ಲ:
ಕಾಯ್ದೆ ತಿದ್ದುಪಡಿಯಿಂದ ಯಾವುದೇ ಜನಾಂಗದ ಜನರಿಗೆ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದೊಂದು ಪೌರತ್ವ ಸಡಿಲೀಕರಣವೇ ಹೊರತು, ಕಿತ್ತುಕೊಳ್ಳುವ ಕಾಯ್ದೆಯಲ್ಲ. ಜನ ಆತಂಕಪಡಬೇಕಾಗಿಲ್ಲ ಎಂದರು.

ಅನಧಿಕೃತವಾಗಿ ದೇಶದೊಳಗೆ ನುಸುಳಿರುವವರಿಗೆ ಈಗ ಭಯ ಶುರುವಾಗಿದೆ. ವಿಶ್ವಸಂಸ್ಥೆಯೂ ಭಾರತವನ್ನು ಟೀಕಿಸುತ್ತಿತ್ತು. ಹೀಗಾಗಿ, ರಾಷ್ಟ್ರದ ಹಿತದೃಷ್ಟಿಯಿಂದ ಗೋಜಲುಗೊಂಡಿರುವ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ ಎಂದರು.

ಅಪಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದ ಅನೇಕರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಆಗುತ್ತಿಲ್ಲ ಎಂದು ಆತಂಕ ಪಡುತ್ತಿದ್ದಾರೆ. ಭಾರತೀಯ ಪೌರತ್ವ ಪಡೆಯಲು ಹಿಂದೆ 11 ವರ್ಷ ಬೇಕಾಗಿತ್ತು. ಆದನ್ನು ಈಗ 5 ವರ್ಷಕ್ಕೆ ಇಳಿಸಲಾಗಿದೆ. ಬೇರೆ ರಾಷ್ಟ್ರಗಳಲ್ಲಿ ನರಕಯಾತನೆ ಅನುಭವಿಸಿ ಪೌರತ್ವ ಸಿಗುವುದಿಲ್ಲ ಎಂದು ಭಯಭೀತರಾಗಿದ್ದಾರೆ. ಅಂಥವರಿಗೂ ನಾಗರೀಕತ್ವ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

Advertisement

ಕಾನೂನುಬದ್ಧವಾಗಿ ಭಾರತಕ್ಕೆ ಬಂದವರಿಗೆ ಪೌರತ್ವ ದೊರೆಯುತ್ತದೆ. ಭಾರತ- ಪಾಕಿಸ್ತಾನ ವಿಭಜನೆಯಾದಾಗ 10 ಮಿಲಿಯನ್‌ ಜನ ನಿರಾಶ್ರಿತರಾಗಿದ್ದರು. ಮೂರು ರಾಷ್ಟ್ರಗಳಲ್ಲಿ ಆರು ಧರ್ಮೀಯರು ಕಿರುಕುಳಕ್ಕೆ ಒಳಗಾದಾಗ ಮಾನವ ಹಕ್ಕುಗಳ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next